Latest

ಹೊರಟ್ಟಿ ಗಾಯದ ಮೇಲೆ ಉಪ್ಪು ತಿಕ್ಕಿದ ಸಮ್ಮಿಶ್ರ ನಾಯಕರು!

 

    ಬೆಳಗಾವಿ ಅಧಿವೇಶನದಲ್ಲೇ ಹೊರಟ್ಟಿ   ಅವರಂಥ ನಾಯಕರನ್ನುಅವಮಾನಿಸಿದ್ದು   ಪ್ರಸಕ್ತ ರಾಜಕೀಯದ ದಿಕ್ಸೂಚಿ!
        ಆರು ತಿಂಗಳ ಹಿಂದೆ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದಾಗ ಉತ್ತರ ಕರ್ನಾಟಕದ ಬಲಾಢ್ಯ ನಾಯಕರನ್ನು ಸಂಪುಟದಿಂದ ಹೊರಗೆ ಇಟ್ಟಾಗಲೇ ನಾನು  ಹೇಳಿದ್ದೆ.” ನಮ್ಮ ಉತ್ತರ ಕರ್ನಾಟಕದ ಬಲಾಢ್ಯರನ್ನು ಸರಕಾರದಿಂದ ಹೊರಗೆ ಇಡುವುದೂ ಒಂದೇ.ನಮ್ಮ ಶಸ್ತ್ರಾಸ್ತ್ರಗಳನ್ನು ಕಸಿದುಕೊಂಡು ಯುದ್ಧಕ್ಕೆ ಆಹ್ವಾನಿಸುವದೂ ಒಂದೇ”!           

 ಎಮ್.ಬಿ.ಪಾಟೀಲ, ಎಚ್.ಕೆ.ಪಾಟೀಲ, ಎಸ್.ಆರ್.ಪಾಟೀಲ, ಬಸವರಾಜ ಹೊರಟ್ಟಿ, ಸತೀಶ ಜಾರಕಿಹೊಳಿ ಅವರಂಥ ಬಲಾಢ್ಯರನ್ನು ಸಂಪುಟದಿಂದ ಹೊರಗೆ ಇಟ್ಟಾಗಲೇ ಈ ಸರಕಾರದಲ್ಲಿ ಉ.ಕ.ಕ್ಕೆ ಧ್ವನಿಯೇ ಇಲ್ಲದಾಯಿತು. ದಕ್ಷಿಣದ ನಾಯಕರು ಹೇಳಿದ್ದೇ ಆಟವಾಯಿತು.

  ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿದ  ಬಸವರಾಜ ಹೊರಟ್ಟಿ ಅವರನ್ನು ವಿಧಾನ ಪರಿಷತ್ತಿನ ಹಂಗಾಮಿ ಸಭಾಪತಿಯನ್ನಾಗಿ ಮಾಡಿದಾಗ ಅವರೇ ಸಭಾಪತಿಯಾಗಿ ಮುಂದುವರೆಯುತ್ತಾರೆಂದು ಎಲ್ಲರೂ ತಿಳಿದರು. ವಿಧಾನಸಭಾಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್ಸಿನ ರಮೇಶಕುಮಾರ ಅವರಿಗೆ ಬಿಟ್ಟು ಕೊಟ್ಟಿದ್ದರಿಂದ ಪರಿಷತ್ತಿನ ಸ್ಥಾನವನ್ನು ಜೆಡಿಎಸ್ ಗೆ ಅಥವಾ ಈ ಭಾಗದ ಬಾಗಲಕೋಟೆಯ ಎಸ್.ಆರ್.ಪಾಟೀಲರಿಗೆ ( ಕಾಂಗ್ರೆಸ್) ಕೊಡಬಹುದೆಂಬುದು ಎಲ್ಲರ ನಿರೀಕ್ಷೆಯಾಗಿತ್ತು. ಆದರೆ ಮಂಗಳವಾರ ನಡೆದ ಅನಿರೀಕ್ಷಿತ ಬೆಳವಣಿಗೆಯಲ್ಲಿ ದಕ್ಷಿಣ ಕನ್ನಡದ ಪ್ರತಾಪಚಂದ್ರ ಶೆಟ್ಟಿ ಅವರು ಸಭಾಪತಿ ಸ್ಥಾನಕ್ಕೆ ಆಯ್ಕೆಗೊಂಡಿದ್ದಾರೆ. ಇದು ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಮತ್ತು ಡಿಸಿಎಮ್ ಪರಮೇಶ್ವರ ನಡುವಿನ ಅಂತರ್ ಯುದ್ಧದ ಪರಿಣಾಮವೆಂದೂ ಹೇಳಲಾಗುತ್ತಿದೆ.          ಹೊರಟ್ಟಿಯವರ ಹಿತರಕ್ಷಣೆಗೆ ಸ್ವತಃ ದೇವೇಗೌಡರೇ ಮುಂದಾಗಿದ್ದರೆ ಹೊರಟ್ಟಿಯವರನ್ನು ಸಭಾಪತಿ ಸ್ಥಾನದಲ್ಲಿ ಕೂಡಿಸುವದು ದೊಡ್ಡ ಮಾತಾಗಿರಲ್ಲಿಲ್ಲ. ಆದರೆ ಸ್ವತಃ ದೇವೇಗೌಡರೇ ಹೊರಟ್ಟಿಯವರನ್ನು ಸಂಪುಟದಿಂದ ಹೊರಗೆ ಇರಿಸಿದಾಗ ಈಗ ಏಕೆ ಮುಂದಾಗುತ್ತಾರೆ? 

ಹೊರಟ್ಟಿಯವರು ಕುಮಾರಸ್ವಾಮಿ ಯವರ 2006 ರ ಸಂಪುಟದಲ್ಲಿ ಶಿಕ್ಷಣ ಮಂತ್ರಿಯಾಗಿದ್ದಾಗ ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಕಾಲೇಜುಗಳನ್ನು ಮಂಜೂರು ಮಾಡಿದ್ದರು. ಬೆಳಗಾವಿ ಜಿಲ್ಲೆಯೊಂದಕ್ಕೇ 56 ಹೈಸ್ಕೂಲುಗಳನ್ನು ಕೊಟ್ಟರು. ” ಧಾಡಸಿ” ಮಂತ್ರಿಯೆಂದೇ ಖ್ಯಾತರಾಗಿದ್ದ, ನೇರ ನುಡಿಗೆ ಹೆಸರಾದ ಹೊರಟ್ಟಿಯಂಥವರು ಪ್ರಸಕ್ತ ರಾಜಕೀಯಕ್ಕೆ ಹೇಗೆ ಬೇಕಾದಾರು?  ಸಭಾಪತಿ ಸ್ಥಾನ ಕೈತಪ್ಪಿದಾಗ ಹೊರಟ್ಟಿ ಕಣ್ಣುಗಳಲ್ಲಿ ನೀರು ಸುರಿದಿದೆ. ಅವರ ಕಣ್ಣೀರಿನಲ್ಲಿ ಯಾರು ಮುಳುಗುವರೊ ? ಬಿಜೆಪಿ ಯ ನಾಯಕರೂ ಸಹ ಹೊರಟ್ಟಿಯವರ ಸದ್ಯದ ಸ್ಥಿತಿಯ ಬಗ್ಗೆ ಸಾಂತ್ವನದ ಮಾತುಗಳನ್ನು ಆಡಿರುವದು ಹೊರಟ್ಟಿಯವರ ವ್ಯಕ್ತಿತ್ವವನ್ನು ತೋರಿಸುತ್ತದೆ.   

   ಹೊರಟ್ಟಿಯವರ ಗಾಯದ ಮೇಲೆ ಉಪ್ಪು ತಿಕ್ಕಿದವರು ತಮ್ಮ ಕೈಗೆ ಗಾಯ ಮಾಡಿಕೊಂಡರೂ ಮಾಡಿಕೊಳ್ಳಬಹುದು.

– ಅಶೋಕ ಚಂದರಗಿ,ಬೆಳಗಾವಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button