*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಹಲವು ವರ್ಷಗಳ ಹೋರಾಟದ ನಂತರ ಅಂತೂ ಬೆಳಗಾವಿಯಲ್ಲಿ ಕೆಎಟಿ (ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ) ಪೀಠ ಆರಂಭವಾಗಿದೆ. ರಾಜ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಭೈರೇಗೌಡ ಸೋಮವಾರ ಪೀಠವನ್ನು ಉದ್ಘಾಟಿಸಿದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಧ್ಯಪ್ರದೇಶ ಮತ್ತು ರಾಜಸ್ಥಾನ ಮುಖ್ಯಮಂತ್ರಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ತೆರಳಿರುವ ಹಿನ್ನೆಲೆಯಲ್ಲಿ ಆಗಮಿಸಿರಲಿಲ್ಲ.
ಈ ವೇಳೆ ಮಾತನಾಡಿದ ಕೃಷ್ಣ ಭೈರೇಗೌಡ, ಕೆಎಟಿಗೆ ಐದು ಸದಸ್ಯರನ್ನು ನೇಮಿಸುವ ಪ್ರಸ್ತಾವವನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ. ಜನವರಿ ಅಂತ್ಯದೊಳಗೆ ಭರ್ತಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿಯ ಎರಡು ಪೀಠಗಳು ಉತ್ತರ ಕರ್ನಾಟಕ ಭಾಗದಲ್ಲಿ ಕಾರ್ಯನಿರ್ವಹಿಸುವ ಸಲುವಾಗಿ ನ್ಯಾಯಮಂಡಳಿಗೆ ಐದು ಸದಸ್ಯರನ್ನು ನೇಮಿಸುವ ಪ್ರಸ್ತಾವವನ್ನು ಕೇಂದ್ರ ಗೃಹ ಇಲಾಖೆ ಹಾಗೂ ಕಾನೂನು ಇಲಾಖೆಗೆ ಒಂದೂವರೆ ತಿಂಗಳ ಹಿಂದೆ ಕಳುಹಿಸಲಾಗಿದೆ. ಶೀಘ್ರವೇ ಕೇಂದ್ರ ಸರ್ಕಾರ ಇದಕ್ಕೆ ಒಪ್ಪಿಗೆ ನೀಡಲಿದ್ದು, ಜನವರಿ ಅಂತ್ಯದೊಳಗೆ ಐದು ಸದಸ್ಯರನ್ನು ಭರ್ತಿ ಮಾಡಲಾಗುವುದು. ಈ ಮೂಲಕ ಆಡಳಿತ ನ್ಯಾಯಮಂಡಳಿಯ ಬೆಳಗಾವಿ ಮತ್ತು ಕಲಬುರ್ಗಿ ಪೀಠಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಲಿವೆ ಎಂದು ಹೇಳಿದರು.
2015ರಲ್ಲಿ ಬೆಳಗಾವಿ ಮತ್ತು ಕಲಬುರ್ಗಿಯಲ್ಲಿ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ ಪೀಠಗಳನ್ನು ಸ್ಥಾಪಿಸಲು ಸರ್ಕಾರ ನಿರ್ಧಾರ ಕೈಗೊಂಡಿತ್ತು. ಅದರಂತೆ ಬೆಳಗಾವಿ ಪೀಠ ಉದ್ಘಾಟನೆಗೊಂಡು ಇಂದಿನಿಂದಲೇ ಕಾರ್ಯ ನಿರ್ವಹಿಸಲಿದೆ. ಇನ್ನೆರಡು ವಾರಗಳಲ್ಲಿ ಕಲಬುರ್ಗಿ ನ್ಯಾಯ ಮಂಡಳಿ ಪೀಠವು ಉದ್ಘಾಟನೆಗೊಳ್ಳಲಿದೆ ಎಂದು ಸಚಿವರು ಭರವಸೆ ನೀಡಿದರು.
ಉತ್ತರ ಕರ್ನಾಟಕ ಭಾಗಕ್ಕೆ ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿಯ ಎರಡೂ ಪೀಠಗಳು ಕಾರ್ಯನಿರ್ವಹಿಸುತ್ತಿರುವುದರಿಂದ ಈ ಭಾಗದ ಪ್ರಕರಣಗಳು ಶೀಘ್ರ ಗತಿಯಲ್ಲಿ ಇತ್ಯರ್ಥವಾಗಲು ಅನುಕೂಲವಾಗಲಿದೆ. ಈ ಮೂಲಕ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿ ಜನರ ಬಳಿಗೆ ಆಡಳಿತ ವ್ಯವಸ್ಥೆಯನ್ನು ಕೊಂಡೊಯ್ದಿದೆ ಎಂದು ಅವರು ತಿಳಿಸಿದರು.
ಬೆಳಗಾವಿ ಉತ್ತರ ವಿಧಾನಸಭೆ ಕ್ಷೇತ್ರದ ಶಾಸಕ ಅನಿಲ ಬೆನಕೆ ಮಾತನಾಡಿ, ಕರ್ನಾಟಕ ರಾಜ್ಯ ನ್ಯಾಯ ಮಂಡಳಿ ಬೆಳಗಾವಿ ಪೀಠ ಸ್ಥಾಪನೆ ಮಾಡಬೇಕೆಂಬ ಉದ್ದೇಶದಿಂದ ನಡೆದ ಹೋರಾಟಕ್ಕೆ ಜಯ ಸಂದಿದೆ. ಈ ಹಂತದಲ್ಲಿ ಹೋರಾಟದಲ್ಲಿ ಭಾಗಿಯಾದ ಹಲವಾರು ವಕೀಲರ ಮೇಲೆ ಪ್ರಕರಣಗಳನ್ನು ದಾಖಲಿಸಲಾಗಿದ್ದು, ಪ್ರಕರಣಗಳನ್ನು ಹಿಂಪಡೆಯುವಂತೆ ಸರ್ಕಾರಕ್ಕೆ ಮನವಿ ಮಾಡಿದರು. ಅಲ್ಲದೆ ನ್ಯಾಯ ಮಂಡಳಿ ಪೀಠಕ್ಕೆ ಸ್ವಂತ ಕಟ್ಟಡ ಶೀಘ್ರದಲ್ಲಿ ಒದಗಿಸುವಂತೆ ಅವರು ಸಚಿವರ ಗಮನಕ್ಕೆ ತಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿ ಅಧ್ಯಕ್ಷ ನ್ಯಾಯಮೂರ್ತಿ ಡಾ.ಕೆ. ಭಕ್ತವತ್ಸಲ ಮಾತನಾಡಿ, ಉತ್ತರ ಕರ್ನಾಟಕ ಭಾಗದಲ್ಲಿ ನ್ಯಾಯಮಂಡಳಿ ಪೀಠ ಸ್ಥಾಪನೆಗೆ ಹೋರಾಟಗಳು ನಡೆದಿದ್ದವು. ಅದರ ಪ್ರತಿಫಲವಾಗಿ ಸುಸಜ್ಜಿತ ನ್ಯಾಯಪೀಠ ಉದ್ಘಾಟನೆಗೊಂಡಿದ್ದು, ಇಂದಿನಿಂದಲೇ ಪೀಠ ಕರ್ತವ್ಯ ನಿರ್ವಹಿಸಲಿದೆ. ಎಲ್ಲರಿಗೂ ನ್ಯಾಯ ಸಿಗುವ ನಿಟ್ಟಿನಲ್ಲಿ ನ್ಯಾಯಮಂಡಳಿ ಕಾರ್ಯ ನಿರ್ವಹಿಸಲಿದ್ದು, ಇದರ ಸದ್ಬಳಕೆ ಆಗಬೇಕು ಎಂದರು.
ಸರ್ಕಾರದ ಮುಖ್ಯ ಸಚೇತಕ ಗಣೇಶ್ ಹುಕ್ಕೇರಿ ಉಪಸ್ಥಿತರಿದ್ದರು. ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯ ರಿಜಿಸ್ಟ್ರಾರ್ ರಾಜನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕರ್ನಾಟಕ ಸರ್ಕಾರ ಮುಖ್ಯ ಕಾರ್ಯದರ್ಶಿ ಟಿ.ಎನ್. ವಿಜಯಭಾಸ್ಕರ್ ಸ್ವಾಗತಿಸಿದರು. ಬೆಳಗಾವಿ ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್. ಕಿವಡಸಣ್ಣವರ್ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ