ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ:
ಚಿಕ್ಕೋಡಿಯ ದೂಧಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಮತ್ತು ಬೆಳಗಾವಿಯ ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಗಳ ಸಹಯೋಗದಲ್ಲಿ ಚಿಕ್ಕೋಡಿ ತಾಲೂಕು ನನದಿ ಗ್ರಾಮದ ಕಬ್ಬು ಬೆಳೆಗಾರರಿಗೆ ಕಬ್ಬಿನ ಬೆಳೆಯಲ್ಲಿ ಗೊಣ್ಣೆ ಹುಳುವಿನ ಸಮಗ್ರ ನಿರ್ವಹಣೆ ಮತ್ತು ದೀಪಾಕರ್ಷಕ ಬಲೆಗಳ ಪ್ರಾತ್ಯಕ್ಷಿಕೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಖಾನೆಯ ಕಬ್ಬು ವಿಭಾಗದ ಅಧಿಕಾರಿ ವಿಕಾಸ ಪಾಟೀಲ ಮಾತನಾಡಿ, ಕಾರ್ಖಾನೆಯ ಸೌಲಭ್ಯಗಳ ಬಗ್ಗೆ ತಿಳಿಸಿ, ಗೊಣ್ಣೆ ಹುಳುವಿನ ನಿರ್ವಹಣೆಗಾಗಿ ಸಾಮೂಹಿಕವಾಗಿ ಎಲ್ಲರೂ ಕೈಜೋಡಿಸೋಣ ಎಂದರು.
ಸಕ್ಕರೆ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ (ಕೃಷಿ ಕೀಟಶಾಸ್ತ್ರ) ಡಾ. ಮಂಜುನಾಥ ಚೌರಡ್ಡಿ ಮಾತನಾಡಿ, ಕಬ್ಬಿನ ಬೆಳೆಗೆ ಬರುವ ಗೊಣ್ಣೆ ಹುಳುವಿನ ಜೀವನ ಚರಿತ್ರೆ ಹಾಗೂ ಹತೋಟಿ ಕ್ರಮಗಳ ಬಗ್ಗೆ ವಿವರಿಸಿದರು.
ಸಾಯಂಕಾಲದ ಸಮಯದಲ್ಲಿ ಗೊಣ್ಣೆ ಹುಳುವಿನ ನಿರ್ವಹಣೆಗಾಗಿ ದೀಪಾಕರ್ಷಕ ಬಲೆಗಳ ಪ್ರಾತ್ಯಕ್ಷಿತೆಯನ್ನು ಕೈಗೊಳ್ಳಲಾಯಿತು. ಕಾರ್ಖಾನೆಯ ಕಬ್ಬು ವಿಭಾಗದ ಸಿಬ್ಬಂದಿ ಸಚಿನ ಮೋಪಗಾರ ವಂದಿಸಿದರು. ಸಂಸ್ಥೆ ವತಿಯಿಂದ ಪ್ರಕಟಿಸಲಾದ ಗೊಣ್ಣೆ ಹುಳುವಿನ ನಿರ್ವಹಣೆಯ ಮಾಹಿತಿ ಕೈಪಿಡಿಯನ್ನು ರೈತರಿಗೆ ನೀಡಲಾಯಿತು. ನನದಿ ಗ್ರಾಮದ ಸುತ್ತಮುತ್ತಲಿನ ರೈತರು ಭಾಗವಹಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ