ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಿಕ್ಕೆ ತರುವ ನಿಟ್ಟಿನಲ್ಲಿ ರಾಜ್ಯ ಯುವಮೋರ್ಚಾದಿಂದ ರಾಜ್ಯಾದ್ಯಂತ ವಿಜಯಲಕ್ಷ್ಯ-2019 ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ವೈ. ವಿಜಯೇಂದ್ರ ತಿಳಿಸಿದರು.
ಬೆಳಗಾವಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮ ಬೀದರ್ ನಲ್ಲಿ ಆರಂಭವಾಗಿದೆ. ಈಗಾಗಲೆ 9 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಪದಾಧಿಕಾರಿಗಳ ಸಭೆ ಮಾಡಿದ್ದೇವೆ. ಅದೇ ರೀತಿ ಬೆಳಗಾವಿಯಲ್ಲಿಯೂ ಪದಾಧಿಕಾರಿಗಳ ಸಭೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ವಿಜಯಲಕ್ಷ್ಯದ ಮೂಲಕ ಯುವಜನರನ್ನು ಬಿಜೆಪಿ ಕಡೆಗೆ ಸೆಳೆಯಲು ಕ್ರೀಡಾಕೂಟ, ನಾಟಕ ಸೇರಿದಂತೆ ವಿವಿಧ ಕಾರ್ಯಕ್ರಮ ಆಯೋಜನೆ ಮಾಡುತ್ತೇವೆ. ಜತೆಗೆ ಮೊದಲ ಮತ ಮೋದಿಗೆ ಅಭಿಯಾನ ಮಾಡುತ್ತೇವೆ ಎಂದರು.
ಮೈತ್ರಿ ಸರಕಾರ ಇನ್ನೂ ಟೇಕಾಫ್ ಆಗಿಲ್ಲ. ಎರಡು ಜಿಲ್ಲೆಗೆ ಮಾತ್ರ ರಾಜ್ಯ ಸರಕಾರ ಸೀಮಿತವಾಗಿದೆ. ಉತ್ತರ ಕರ್ನಾಟಕವನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಬೆಳಗಾವಿಯಲ್ಲಿ ಈಚೆಗೆ ನಡೆದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಚರ್ಚೆಯಾಗಿಲ್ಲ. ರಾಜ್ಯದಲ್ಲಿ ಬರಗಾಲ ಆವರಿಸಿದೆ. ಆದರೆ, ಸರಕಾರ ಯಾವುದೇ ಕೆಲಸ ಮಾಡುತ್ತಿಲ್ಲ. ಶಾಸಕರಿಗೆ ಸಮಾನ ಅನುದಾನ ನೀಡುತ್ತಿಲ್ಲ. ಸಿದ್ದರಾಮಯ್ಯನವರು ಶಾಸಕರ ಮೇಲೆ ವಿಶ್ವಾಸವಿಲ್ಲದಂತೆ ಮಾತನಾಡುತ್ತಿದ್ದಾರೆ ಎಂದರು.
ರಾಷ್ಟ್ರೀಯ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ರಮೇಶಗೌಡ, ಶಾಸಕ ಅನಿಲ ಬೆನಕೆ, ಮಾಜಿ ಶಾಸಕ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ವಿಶ್ವನಾಥ ಪಾಟೀಲ, ಸಂಜಯ ಪಾಟೀಲ, ಬಿಜೆಪಿ ಮುಖಂಡರಾದ ಶಂಕರಗೌಡ ಪಾಟೀಲ, ರಾಜು ಟೋಪಣ್ಣವರ, ಮಹಾನಗರ ಅಧ್ಯಕ್ಷ ರಾಜೇಂದ್ರ ಹರಕುಣಿ, ರಾಜು ಚಿಕ್ಕನಗೌಡರ ಮತ್ತಿತರರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ