ಪ್ರಗತಿವಾಹಿನಿ ಸುದ್ದಿ, ಗೋಕಾಕ – ಮಾಜಿ ಸಚಿವ ರಮೇಶ ಜಾರಕಿಹೊಳಿ ನಿರೀಕ್ಷಿತ ಕಾರ್ಯಯೋಜನೆ ಕೈಗೂಡದ ಹಿನ್ನೆಲೆಯಲ್ಲಿ ಹತಾಶರಾಗಿದ್ದಾರೆಯೇ?
ಅವರ ಗುರುವಾರದ ವರ್ತನೆ ಅಂತಹ ಸಂಶಯ ಮೂಡುವಂತೆ ಮಾಡಿದೆ. ಬುಧವಾರ ಬೆಳಗ್ಗೆಯಿಂದಲೇ ಗೋಕಾಕದಲ್ಲಿ ಕಾಣಿಸಿಕೊಂಡಿರುವ ರಮೇಶ ಜಾರಕಿಹೊಳಿ ಮಾಧ್ಯಮಗಳಿಂದ ದೂರವೇ ಓಡಾಡುತ್ತಿದ್ದಾರೆ. ಗುರುವಾರ ಬೆಳಗ್ಗೆ ಬ್ಯಾಡ್ಮಿಂಟನ್ ಆಡಲು ಹೋದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು ಬಿಡದಂತೆ ಸೆಕ್ಯುರಿಟಿ ಗಾರ್ಡ್ ಗಳಿಗೆ ಸೂಚನೆ ನೀಡಿದ್ದರು. ನಂತರ ಮನೆಯ ಬಳಿ ಕಾರಿನಿಂದ ಇಳಿಯುವಾಗ ಮಾಧ್ಯಮದವರು ಎದುರಾಗಿರುವುದನ್ನು ಕಂಡು ಕೆಂಡಾಮಂಡಲರಾದರು. ನಿಮ್ಮದು ಅತಿಯಾಯ್ತು, ಹುಚ್ಚು ಹಿಡಿದಿದೆ ನಿಮಗೆ, ಒದಿ ಬೇಕು ಜಾಡಿಸಿ ನಿಮಗೆ ಎಂದೆಲ್ಲ ಹೇಳುತ್ತ ಮನೆ ಸೇರಿಕೊಂಡರು.
ಯಾವುದೇ ಮಾಹಿತಿ ನೀಡಲು ಮುಂದೆಬಾರದ ಅವರು, ತಮ್ಮ ಕಾರ್ಯಯೋಜನೆ ವಿಫಲವಾಗಿ ಹತಾಶರಾದಂತೆ ಕಾಣುತ್ತಿದ್ದರು. ಈ ಮಧ್ಯೆ ರಮೇಶ ಯೋಜನೆ ಕೈಗೂಡದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಲ್ಲೇ ಉಳಿಯಲು ಹೊಸ ತಂತ್ರ ಹೆಣೆಯುತ್ತಿದ್ದಾರೆ ಎನ್ನಲಾಗುತ್ತಿದೆ. ಅದಕ್ಕಾಗಿಯೇ ಲಖನ್ ಜಾರಕಿಹೊಳಿ 2 ದಿನದ ಹಿಂದೆ ರಮೇಶ ಮನವೊಲಿಸಲು ಸಿದ್ದರಾಮಯ್ಯ ಮುಂದಾಗಬೇಕು ಎಂದಿದ್ದರು.
ಈ ಎಲ್ಲ ಬೆಳವಣಿಗೆಗಳನ್ನು ನೋಡಿದರೆ ರಮೇಶ ಜೊತೆ ಯಾವುದೇ ಶಾಸಕರು ತೆರಳದಂತೆ ಕಾಂಗ್ರೆಸ್-ಜೆಡಿಎಸ್ ಸೂಕ್ತ ಬಂಧೋಬಸ್ತ್ ನಡೆಸಿರುವ ಸಾಧ್ಯತೆ ಕಾಣುತ್ತಿದೆ. ಹಾಗಾಗಿ ರಮೇಶ ಜಾರಕಿಹೊಳಿ ಸಧ್ಯಕ್ಕೆ ತಮ್ಮ ಕಾರ್ಯಾಚರಣೆ ಸ್ಥಗಿತಗೊಳಿಸಿರುವಂತೆ ತೋರುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ