Karnataka NewsLatestPolitics

*ರಾಹುಲ್ ಗಾಂಧಿ ಮುಂದೆ ಖಡಕ್ ಮಾತನಾಡಿದ ಸಿದ್ದರಾಮಯ್ಯ*: *ಅಸಮಾಧಾನ ಸ್ಫೋಟ*

ಪ್ರಗತಿವಾಹಿನಿ ಸುದ್ದಿ: ದೆಹಲಿಗೆ ತೆರಳಿರುವ ಮಾಜಿ ಸಿಎಂ ಸಿದ್ದರಾಮಯ್ಯ, ನಿನ್ನೆ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿರುವ ನಕಲಿ ಸ್ಟಿಂಗ್ ಕಾರ್ಯಾಚರಣೆಯ ಕಿಚ್ಚು ಈಗ ಕಾಂಗ್ರೆಸ್‌ ಹೈಕಮಾಂಡ್ ಅಂಗಳ ತಲುಪಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಸಮ್ಮುಖದಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸ್ವಪಕ್ಷೀಯರೇ ಹೆಣೆದಿರುವ ವ್ಯವಸ್ಥಿತ ಚಾರಿತ್ರ್ಯಹರಣದ ಕುತಂತ್ರದ ವಿರುದ್ಧ ಸಿಡಿದೆದ್ದಿರುವ ಅವರು, ಪಕ್ಷದ ವರಿಷ್ಠರಿಗೆ ನೇರ ಅಲ್ಟಿಮೇಟಂ ನೀಡುವ ಮೂಲಕ ಕಾಂಗ್ರೆಸ್ ಪಾಳೆಯದಲ್ಲಿ ಭಾರೀ ಭೂಕಂಪ ಸೃಷ್ಟಿಸಿದ್ದಾರೆ.

ನಿಮ್ಮ ಮಾತಿಗೆ ಗೌರವ ಕೊಟ್ಟು ಅಧಿಕಾರ ತ್ಯಾಗ ಮಾಡಿದೆ. ಭವಿಷ್ಯದಲ್ಲಿ ಚುನಾವಣಾ ಕಣಕ್ಕೂ ಇಳಿಯಲ್ಲ, ಸಿಎಂ ಗದ್ದುಗೆಯ ಆಸೆಯೂ ನನಗಿಲ್ಲ ಎಂದು ಜಗಜ್ಜಾಹೀರಾಗಿ ಹೇಳಿಯಾಗಿದೆ. ಆದರೂ ಕತ್ತಲಕೋಣೆಯಲ್ಲಿ ಕುಳಿತು ನನ್ನ ಮುಗಿಸಲು ಸಂಚು ರೂಪಿಸುತ್ತಿರುವ ಆ ಕಾಣದ ಕೈಗಳು ಯಾರವು? ಎಂದು ಸಿದ್ದರಾಮಯ್ಯ ನೇರವಾಗಿ ಪ್ರಶ್ನಿಸಿ ಆಕ್ರೋಶ ಹೊರಹಾಕಿದ್ದಾರೆ.

ನಕಲಿ ವಿಡಿಯೋವನ್ನು ವಾಟ್ಸಾಪ್, ಮಾಧ್ಯಮಗಳಿಗೆ ಸೋರಿಕೆ ಮಾಡಿದವರು ಯಾರು ಎಂಬುದು ನನಗೆ ಚೆನ್ನಾಗಿಯೇ ಗೊತ್ತಿದೆ. ಆದರೆ ನನ್ನ ವ್ಯಕ್ತಿತ್ವವನ್ನೇ ಧೂಳೀಪಟ ಮಾಡಲು ಈ ಕೃತ್ರಿಮ ಸಂಚಿನ ಸ್ಕ್ರಿಪ್ಟ್ ಬರೆಸಿದ ಮಹಾರಾಯ ಯಾರು? ಅಧಿಕಾರ ಕಳೆದುಕೊಂಡ ಮೇಲೂ ನನ್ನ ರಕ್ತ ಹೀರುವ ಈ ಹೊಲಸು ರಾಜಕೀಯ ಯಾಕೆ? ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ನಮ್ಮದೇ ಆಡಳಿತವಿದ್ದರೂ, ಕಿಡಿಗೇಡಿಗಳ ಈ ನಕಲಿ ಜಾಲವನ್ನು ಮಟ್ಟಹಾಕುವಲ್ಲಿ ಸರ್ಕಾರ ಮತ್ತು ಇಲಾಖೆ ಸಂಪೂರ್ಣ ವಿಫಲವಾಗಿದೆ. ಈ ಷಡ್ಯಂತ್ರವನ್ನು ಸಕಾಲದಲ್ಲಿ ಹೊಸಕಿ ಹಾಕದ ಕಾರಣಕ್ಕಾಗಿಯೇ ಇತ್ತೀಚಿನ ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷ ಬೆಲೆ ತೆರಬೇಕಾಯಿತು ಎಂದು ತಿಳಿಸಿದ್ದಾರೆ.

ನಾಲ್ಕು ದಶಕಗಳ ಕಾಲ ರಕ್ತ ಸುರಿಸಿ ಕಟ್ಟಿಕೊಂಡ ನನ್ನ ರಾಜಕೀಯ ವರ್ಚಸ್ಸಿಗೆ ಸ್ವಪಕ್ಷೀಯರಿಂದಲೇ ಮಸಿ ಬಳಿಯುವ ಕೆಲಸ ಮುಂದುವರಿದರೆ, ಮುಂಬರುವ ಯಾವುದೇ ಚುನಾವಣೆಯಲ್ಲೂ ನಾನು ಕಾಂಗ್ರೆಸ್ ಪರ ಮತಬೇಟೆಗೆ ಕಾಲಿಡುವುದಿಲ್ಲ ಎಂದಿದ್ದಾರೆ. ನನ್ನ ವ್ಯಕ್ತಿತ್ವಕ್ಕೆ ಚ್ಯುತಿ, ಧಕ್ಕೆಯಾದರೆ ನಾಅನು ಮುಂದಿನ ಚುನಾಅವಣೆಯಲ್ಲಿ ಯಾಅವುದೇ ಪ್ರಚಾರ ಕಾರ್ಯಗಳಿಗೂ ಬರುವುದಿಲ್ಲ ಎಂದು ಸಿದ್ದರಾಮ್ಯಯ ಖಡಕ್ ಮಾತುಗಳನ್ನಾಡಿದ್ದಾರೆ ಎಂದು ತಿಳಿದುಬಂದಿದೆ.

Related Articles

Back to top button