Kannada NewsKarnataka NewsLatest

*ಹಾಲು, ಮೊಸರು, ಬಸ್ ದರ ಏರಿಕೆ ಸಮರ್ಥಿಸಿಕೊಂಡ ಡಿಕೆಶಿ*: *ರೈತರ ಹಿತಕ್ಕಾಗಿ ಕಠಿಣ ನಿರ್ಧಾರ ಎಂದ ಸಿಎಂ*

ಪ್ರಗತಿವಾಹಿನಿ ಸುದ್ದಿ: ನಂದಿನಿ ಹಾಲು, ಮೊಸರು ಹಾಗೂ ಸಾರಿಗೆ ಬಸ್ ದರ ಏರಿಕೆ ವಿರುದ್ಧ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಜನರಲ್ಲಿ ಅಸಮಾಧಾನ ಇರುವುದು ನಿಜ. ಆದರೆ ರಾಜ್ಯದ 25 ಲಕ್ಷ ಹೈನುಗಾರ ರೈತರ ಹಿತ ರಕ್ಷಣೆ ಮತ್ತು ಸಾರಿಗೆ ಸಂಸ್ಥೆಗಳನ್ನು ಉಳಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಮೊಸರಿನ ಬೆಲೆಯನ್ನು ಒಂದೆರಡು ರೂಪಾಯಿ ಕಡಿಮೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು. ಹಾಲು ಮತ್ತು ಮೊಸರಿನ ಬೆಲೆ ಏರಿಕೆಯಿಂದ ಜನರಿಗೆ ಆಕ್ರೋಶ ಇದೆ ಎಂಬುದನ್ನು ಒಪ್ಪಿಕೊಂಡ ಅವರು, ರೈತರಿಗೆ ಪ್ರತಿ ಲೀಟರ್‌ಗೆ 7 ರೂಪಾಯಿ ಹೆಚ್ಚುವರಿ ನೀಡಲಾಗುತ್ತಿದೆ. ಇದನ್ನು ಕೇವಲ 8 ರೂಪಾಯಿ ಏರಿಕೆ ಎಂದು ಹೇಳುವುದು ಸರಿಯಲ್ಲ ಎಂದು ಸಮರ್ಥಿಸಿಕೊಂಡರು.

ಹಾಲಿನ ಖರೀದಿ ದರ ಪರಿಷ್ಕರಣೆಯ ಬಳಿಕ ಪೂರೈಕೆಯಲ್ಲೂ ಬದಲಾವಣೆಯಾಗಿದೆ ಎಂದು ಡಿಕೆಶಿ ಹೇಳಿದ್ದಾರೆ. ಈ ಹಿಂದೆ ನಂದಿನಿ ಹಾಲು ಹೆಚ್ಚಿನ ಪ್ರಮಾಣದಲ್ಲಿ ಬೇರೆ ರಾಜ್ಯಗಳಿಗೆ ಪೂರೈಕೆಯಾಗುತ್ತಿತ್ತು. ಇದೀಗ ಬೆಲೆ ಪರಿಷ್ಕರಣೆಯಾದ ಬಳಿಕ ಸುಮಾರು 10 ಲಕ್ಷ ಲೀಟರ್ ಹಾಲು ಮತ್ತೆ ಕರ್ನಾಟಕಕ್ಕೆ ಬರುತ್ತಿದೆ. ಈ ಬದಲಾವಣೆ ನಿನ್ನೆಯಿಂದಲೇ ಆರಂಭವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದರು.

ಸರ್ಕಾರದ ನಿರ್ಧಾರದಿಂದ ಸುಮಾರು 25 ಲಕ್ಷ ರೈತರಿಗೆ ಅನುಕೂಲವಾಗಲಿದೆ ಎಂದ ಡಿಕೆಶಿ, ನೀರಿನ ಬಾಟಲಿ ಬೆಲೆ ಏರಿಕೆ, ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಾದಾಗ ಹೆಚ್ಚು ಚರ್ಚೆಯಾಗುವುದಿಲ್ಲ ಎಂದು ಹೇಳಿದರು.

ಬಸ್ ದರ ಏರಿಕೆ ವಿಚಾರದಲ್ಲೂ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡ ಡಿಕೆ ಶಿವಕುಮಾರ್, ಸಾರಿಗೆ ಸಂಸ್ಥೆಗಳ ಬಳಿ ಬಸ್‌ಗಳಿಗೆ ಡೀಸೆಲ್ ಖರೀದಿಸಲು ಕೂಡ ಹಣದ ಕೊರತೆಯಿತ್ತು. ಸಾರಿಗೆ ಸಂಸ್ಥೆಗಳಿಗೆ ಸರ್ಕಾರದಿಂದ ಹಣಕಾಸಿನ ನೆರವು ಮತ್ತು ವಿಶೇಷ ಅನುದಾನ ನೀಡಿದ್ದರೂ ನಿರ್ವಹಣೆಯ ಸವಾಲುಗಳಿದ್ದವು. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಬಸ್ ಪ್ರಯಾಣ ದರ ಕಡಿಮೆ ಇದೆ. ಸಾರಿಗೆ ಸಂಸ್ಥೆಗಳು ಸಮರ್ಪಕವಾಗಿ ಬಸ್‌ಗಳನ್ನು ಓಡಿಸಬೇಕಾದರೆ ದರ ಪರಿಷ್ಕರಣೆ ಅನಿವಾರ್ಯವಾಗಿದೆ ಎಂದು ವಿವರಿಸಿದರು.

Related Articles

Back to top button