ಪ್ರಗತಿವಾಹಿನಿ ಸುದ್ದಿ, ಮೂಡಲಗಿ:
ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ತಾಳ್ಮೆಯ ಗುಣಗಳನ್ನು ವಿದ್ಯಾರ್ಥಿಗಳಲ್ಲಿ ಬೆಳಸಿದಾಗ ಮಾತ್ರ ಈ ಸಮಾಜ ನಮ್ಮ ಮೇಲಿಟ್ಟಿರುವ ವಿಶ್ವಾಸ ಉಳಿಸಿಕೊಂಡಂತೆ ಆಗುವುದು ಎಂದು ಬೆಳಗಾವಿ ವಿಭಾಗದ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಸಹ ನಿರ್ದೇಶಕ ಹಾಗೂ ವಿಭಾಗೀಯ ಕಾರ್ಯದರ್ಶಿ ಎಮ್. ಎಸ್. ಪ್ರಸನ್ನಕುಮಾರ ಹೇಳಿದರು.
ಅವರು ಮಂಗಳವಾರ ಜಿ.ಪಂ, ಉಪನಿರ್ದೇಶಕರ ಕಾರ್ಯಾಲಯ, ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯಗಳ ಸಂಯುಕ್ತಾಶ್ರಯದಲ್ಲಿ ಕಲ್ಲೋಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರ ಪ್ರೇರಣಾ ಕಾರ್ಯಾಗಾರದಲ್ಲಿ ಮಾತನಾಡಿದರು.
ವಿದ್ಯಾರ್ಥಿಯ ಜೀವನದಲ್ಲಿ ಪ್ರೌಢ ಹಂತವು ಅತಿ ಮುಖ್ಯವಾದದ್ದು, ಜೀವನ ಸಾಗಿಸಲು ಸೂಕ್ತ ನಿರ್ಧಾರ ತೆಗೆದುಕೊಳ್ಳಲು ತಮ್ಮನ್ನು ತಾವು ತೊಡಗಿಸಿಕೊಳ್ಳುವ ಸಮಯವಾಗಿರುತ್ತದೆ. ವಿದ್ಯಾರ್ಥಿಯ ಜೀವನ ಶೈಲಿಯನ್ನು ಬದಲಾಯಸಿ ಉನ್ನತ ವಿಚಾರಗಳನ್ನು ಅವರಿಗೆ ಕೊಟ್ಟಿದ್ದೆ ಆದರೆ ಪ್ರಬುದ್ಧ ಸಮಾಜದಲ್ಲಿ ಬೆಳೆಯಲು ಸಾದ್ಯವಾಗುವದು ಎಂದರು.
ಚಿಕ್ಕೋಡಿ ಡಿಡಿಪಿಐ ಎಮ್.ಜಿ ದಾಸರ ಮಾತನಾಡಿ, ವಿದ್ಯಾರ್ಥಿಗಳ ಜೀವನ ರೂಪಿಸಬೇಕಾದಲ್ಲಿ ಮೌಲ್ಯಯುಕ್ತ ಶಿಕ್ಷಣ ವ್ಯವಸ್ಥೆಯಿಂದ ಮಾತ್ರ ಸಾಧ್ಯ. ಅಂಕಗಳೆ ಮಾನದಂಡವಲ್ಲ ಬದಲಾಗಿ ಸಮಯ ಸಂದರ್ಭಕ್ಕನುಸಾರ ನಡೆದುಕೊಳ್ಳುವ ವರ್ತನೆಗಳು ಸಾಮಾಜಿಕವಾಗಿ ಬದಲಾಗುವಂತಿರಬೇಕು. ವಿದ್ಯಾರ್ಥಿಗಳು ಕಷ್ಟಪಟ್ಟು ಓದದೆ ಇಷ್ಟ ಪಟ್ಟು ಅಭ್ಯಾಸದ ಕಡೆ ಗಮನ ಕೊಡಬೇಕು ಎಂದರು.
ಪೋಬೆಷನರಿ ಡಿ.ವಾಯ್.ಎಸ್.ಪಿ ಪ್ರವೀಣ ಎಮ್, ಸಿಪಿಐ ವೆಂಕಟೇಶ ಮುರನಾಳ, ಬಿ.ಇ.ಒ ಗಳಾದ ಜಿ.ಬಿ ಬಳಗಾರ, ಅಜೀತ ಮನ್ನಿಕೇರಿ ಮಾತನಾಡಿದರು.
ಕಾರ್ಯಾಗಾರದಲ್ಲಿ ಡಿಡಿಪಿಐ ಕಛೇರಿ ಶಿಕ್ಷಣಾಧಿಕಾರಿ ಎ.ಸಿ ಗಂಗಾಧರ, ಉಪಹಾರ ಯೋಜನೆಯ ದೀಪಕ ಕುಲಕರ್ಣಿ, ರೇವತಿ ಮಠದ, ಎಸ್.ಎಸ್.ಎಲ್.ಸಿ ಪರೀಕ್ಷಾ ನೋಡಲ್ ಟಿ.ಟಿ ನಾಡಕರ್ಣಿ, ಎಸ್.ಎ ನಾಡಗೌಡರ, ಬಿ.ಎಮ್ ವಣ್ಣೂರ, ಉಪಹಾರ ಯೋಜನೆಯ ಸಹಾಯಕ ನಿರ್ದೇಶಕ ಎ.ಬಿ ಮಲಬನ್ನವರ, ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯ ಆರ್.ವಾಯ್ ಗಂಗರಡ್ಡಿ ಬಿ.ಆರ್.ಪಿಗಳಾದ ಕೆ.ಎಲ್.ಮೀಶಿ, ಎ.ಬಿ ಚವಡನ್ನವರ ಹಾಗೂ ಗೋಕಾಕ ಮೂಡಲಗಿ ವಲಯ ವ್ಯಾಪ್ತಿಯ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಎಮ್.ಪಿ ಶೇಗುನಶಿ ನಿರೂಪಿಸಿದರು. ಆರ್.ಎಸ್ ಎಮ್ಮಿ ಸ್ವಾಗತಿಸಿ, ಎಸ್.ವಾಯ್ ವಗ್ಗೆನ್ನವರ ವಂದಿಸಿದರು.