ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಹಾಳಾದ ಹೃದಯ ಕವಾಟವನ್ನು ತೆಗೆದು ನೂತನ ಕವಾಟವನ್ನು ಶಸ್ತ್ರಚಿಕಿತ್ಸೆ ಇಲ್ಲದೇ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಮರುಜೋಡಿಸುವಲ್ಲಿ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಹೃದ್ರೋಗ ತಜ್ಞವೈದ್ಯರು ಯಶಸ್ವಿಯಾಗಿದ್ದಾರೆ.
ಕಳೆದ ಒಂದು ವರ್ಷದ ಹಿಂದೆ ಈ ತಂತ್ರಜ್ಞಾನವನ್ನು ವೈದ್ಯಕೀಯ ಕ್ಷೇತ್ರದಲ್ಲಿ ಅಳವಡಿಸಿಕೊಳ್ಳಲಾಗಿದೆ. ಸುಮಾರು ೬೫ ವರ್ಷ ಮೇಲ್ಪಟ್ಟ ಶೇ.೪೦ರಷ್ಟು ಹಿರಿಯ ನಾಗರಿಕರಲ್ಲಿ ಅತ್ಯಂತ ಕಠಿಣವಾದ ತೆರೆದ ಹೃದಯ ಶಸ್ತ್ರಚಿಕಿತ್ಸೆ ನೆರವೇರಿಸಿ ಕವಾಟವನ್ನು ಜೋಡಿಸುವುದು ಅತ್ಯಂತ ಕಠಿಣವಾದ ಪ್ರಕ್ರಿಯೆ.
ಅಲ್ಲದೇ ಪಾರ್ಶ್ವವಾಯು, ಅಸ್ಥಮಾ, ಕಿಡ್ನಿ ತೊಂದರೆ ಸೇರಿದಂತೆ ಇನ್ನಿತರ ಸಮಸ್ಯೆಗಳು ಕಂಡುಬರಬಹುದು ಮತ್ತು ಗುಣಮುಖವಾಗಲು ಒಂದು ತಿಂಗಳವರೆಗೆ ದೀರ್ಘಕಾಲ ತೆಗೆದುಕೊಳ್ಳುತ್ತದೆ. ಈ ತಂತ್ರಜ್ಞಾನ ಆಧಾರಿತ ಕೌಶಲ್ಯದ ಮೂಲಕ ಕವಾಟವನ್ನು ಜೋಡಿಸಲಾಗುತ್ತಿದ್ದು, ಬಲೂನಿನಲ್ಲಿ ವಾಲ್ವ್ (ಕವಾಟ)ಅನ್ನು ಈಗಿರುವುದನ್ನು ತೆಗೆದು ಅದೇ ಸ್ಥಳದಲ್ಲಿ ಕೂಡಿಸಲಾಗುವ ಪ್ರಕ್ರಿಯೆ ಕೇವಲ ೯೦ ನಿಮಿಷದಲ್ಲಿ ನಡೆಸಲಾಗುತ್ತದೆ.
ಇದರಿಂದ ಎದೆಯನ್ನು ಸೀಳಿ ಶಸ್ತ್ರಚಿಕಿತ್ಸೆ ನಡೆಸುವುದು ತಪ್ಪುವುದಲ್ಲದೇ, ಯಾವುದೇ ಬಾಹ್ಯ ತೊಂದರೆಗಳಿಂದ ಮುಕ್ತವಾಗಿರುತ್ತದೆ. ಈ ಭಾಗದಲ್ಲಿ ಈ ತಂತ್ರಜ್ಞಾನವನ್ನು ಅಳವಡಿಸಿಕೊಂಡ ಆಸ್ಪತ್ರೆ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಒಂದೇ. ಅಮೇರಿಕದಲ್ಲಿ ತರಬೇತಿಯನ್ನು ಪಡೆದ ಜೈಪುರದ ಡಾ ರವೀಂದ್ರಸಿಂಗ್ ರಾವ್ ಅವರ ಮಾರ್ಗದರ್ಶನದಲ್ಲಿ ಆಸ್ಪತ್ರೆಯ ಡಾ. ಸುರೇಶ ಪಟ್ಟೇದ, ಡಾ. ಸಂಜಯ ಪೋರವಾಲ್, ಡಾ ಸಮೀರ್ ಅಂಬರ, ಡಾ. ಪ್ರಸಾದ ಎಮ್ ಆರ್ ಅವರ ತಂಡವು ಯಶಸ್ವಿಯಾಗಿ ನೆರವೇರಿಸಿದೆ.
ಅತ್ಯಂತ ಕಠಿಣ ಹಾಗೂ ಶಸ್ತ್ರಚಿಕಿತ್ಸೆ ಇಲ್ಲದೇ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಕವಾಟವನ್ನು ಜೋಡಿಸಿದ ವೈದ್ಯರ ತಂಡವನ್ನು ಕೆಎಲ್‌ಇ ಸಂಸ್ಥೆಯ ಕಾರ‍್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ, ಕುಲಪತಿ ಡಾ. ವಿವೇಕ ಸಾವೋಜಿ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಎಂ. ವಿ. ಜಾಲಿ ಅವರು ಅಭಿನಂದಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ