Latest

2ನೇ ರಾಜಧಾನಿ, ಕಚೇರಿಗಳ ಸ್ಥಳಾಂತರ ಘೋಷಿಸಿ -ಹುಕ್ಕೇರಿ ಶ್ರೀ

 ಸುವರ್ಣವಿಧಾನಸೌಧದ ಮೂಲಕ ಉಕಕ್ಕೆ ನ್ಯಾಯ ಒದಗಿಸಲು ಸಿಎಂಗೆ ಆಗ್ರಹ

 

 

    ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಬೆಳಗಾವಿಯಲ್ಲಿ ವಿಧಾನಮಂಡಳದ ಅಧಿವೇಶನ ಆರಂಭವಾಗಿ ದಶಕಗಳೇ ಕಳೆದರೂ, ಸುವರ್ಣ ವಿಧಾನಸೌಧ ನಿರ್ಮಾಣವಾಗಿ ಏಳೆಂಟು ವರ್ಷಗಳೇ ಕಳೆದರೂ ಉತ್ತರ ಕರ್ನಾಟಕಕ್ಕೆ ನ್ಯಾಯ ಒದಗಿಸುವ ಕೆಲಸ ಆಗುತ್ತಿಲ್ಲ ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ವಿಷಾದ ವ್ಯಕ್ತಪಡಿಸಿದ್ದಾರೆ.

ಬಾಗಲಕೋಟೆ ಜಿಲ್ಲಾ ಜೆಡಿಎಸ್ ಅಧ್ಯಕ್ಷ  ಎಸ್.ಆರ್.ನವಲಿಹಿರೇಮಠ ಮಂಗಳವಾರ ಹುಕ್ಕೇರಿ ಹಿರೇಮಠದ ಬೆಳಗಾವಿ ಶಾಖಾಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ವಾಮಿಗಳು ಮಾತನಾಡಿದರು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೇ ಬೆಳಗಾವಿಯಲ್ಲಿ ಅಧಿವೇಶನ ಆರಂಭಿಸಿದ್ದಾರೆ. ಆದರೆ ಜನರ ನಿರೀಕ್ಷೆಗೆ ತಕ್ಕಂತೆ ಈ ಭಾಗದ ಅಭಿವೃದ್ಧಿಯಾಗುತ್ತಿಲ್ಲ. ಕುಮಾರಸ್ವಾಮಿಯವರೇ ಇಂದು ಎರಡನೇ ರಾಜಧಾನಿಯಾಗಿ ಬೆಳಗಾವಿಯನ್ನು ಘೋಷಿಸಿದರೆ ಅದಕ್ಕಿಂತ ಖುಷಿಯ ಸಂಗತಿ ಬೇರೊಂದಿಲ್ಲ. ಜನರ ಕೂಗನ್ನು ಗಮನಿಸಿ ಅವರು ಎರಡನೇ ರಾಜಧಾನಿ ಘೋಷಣೆ ಮತ್ತು ಕೆಲವು ಕಚೇರಿಗಳನ್ನು ಇಲ್ಲಿಗೆ ಸ್ಥಳಾಂತರ ಮಾಡುವ ವಿಶ್ವಾಸವಿದೆ ಎಂದು ಸ್ವಾಮಿಗಳು ಹೇಳಿದರು.

ಉತ್ತರ ಕರ್ನಾಟಕ-ದಕ್ಷಿಣ ಕರ್ನಾಟಕ ಸಮಭಾವದಿಂದ ಹೋಗಬೇಕು. ಯಾರಲ್ಲೂ ಪ್ರತ್ಯೇಕತೆಯ ಭಾವನೆ ಬರುವುದು ಸರಿಯಲ್ಲ. ಈ ದಿಸೆಯಲ್ಲಿ ಕ್ರಮವಾಗಬೇಕೆನ್ನುವುದೇ ನಮ್ಮ ಆಶಯ ಎಂದು ಶ್ರೀಗಳು ತಿಳಿಸಿದರು.

ಕಳಕಳಿ ಇದೆ:

ಈ ವೇಳೆ ಮಾತನಾಡಿದ  ಎಸ್.ಆರ್.ನವಲಿಹಿರೇಮಠ, ಮುಖ್ಯಮಂತ್ರಿಗಳಿಗೆ ಉತ್ತರ ಕರ್ನಾಟಕದ ಬಗ್ಗೆ ಕಳಕಳಿ ಇದೆ. ಬುಧವಾರ ಅಥವಾ ಗುರುವಾರ ಬೆಳಗಾವಿಯನ್ನು ಎರಡನೇ ರಾಜಧಾನಿ ಘೋಷಿಸುವ ಮೂಲಕ, ಈ ಭಾಗಕ್ಕೆ ಒಂದಿಷ್ಟು ಕಚೇರಿಗಳನ್ನು ಸ್ಥಳಾಂತರಿಸುವ ಮೂಲಕ ಖಂಡಿತ ನ್ಯಾಯ ಒದಗಿಸುತ್ತಾರೆ. ಈ ದಿಸೆಯಲ್ಲಿ ನಾನು ಇಂದೇ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಸ್ವಾಮಿಗಳ ಆಶಯವನ್ನು ಅವರ ಗಮನಕ್ಕೆ ತರುತ್ತೇನೆ ಎಂದು ತಿಳಿಸಿದರು. 

ವಿರೂಪಾಕ್ಷಯ್ಯ ನೀರಲಿ ಮಠ, ಡಾ.ನಂದೀಶ್ ಮೊದಲಾದವರು ಈ ವೇಳೆ ಇದ್ದರು. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button