Kannada NewsKarnataka News

ಹೆಸ್ಕಾಂ ಕಚೇರಿಯಲ್ಲೇ ರೈತರ ಠಿಕಾಣಿ

ಪ್ರಗತಿವಾಹಿನಿ ಸುದ್ದಿ, ಅಥಣಿ  –  ಮಹಾರಾಷ್ಟ್ರದಿಂದ ಅನಿರೀಕ್ಷಿತವಾಗಿ ಹರಿದು ಬಂದ ಕೃಷ್ಣಾ ನದಿ ನೀರಿಗೆ ಬೆಳಗಾವಿ ಜಿಲ್ಲೆಯ ಹಲವಾರು ತಾಲೂಕಿನ ಸಾವಿರಾರು ಎಕರೆ ಬೆಳೆ, ಮನೆ ಎಲ್ಲಾ ಹಾಳಾದರೆ, ಸರಕಾರದ ಆಸ್ತಿ ಕೋಟಿ ಕೋಟಿ  ಹಾಳಾಗಿದೆ. ಅದಕ್ಕೆ ಒಂದು ಜ್ವಲಂತ ಉದಾಹರಣೆಯೆಂದರೆ ಅಥಣಿ ಹೆಸ್ಕಾಂ ಗೆ ಸುಮಾರು ೨೫ ಕೋಟಿ ರೂ ನಷ್ಟವಾಗಿದ್ದು.
ಕೃಷ್ಣಾ ನದಿಯ ಪ್ರವಾಹದಿಂದ ತಾಲೂಕಿನ ಸುಮಾರು ೨೪ ಹಳ್ಳಿಗಳು ತತ್ತರಿಸಿ ಹೋಗಿವೆ, ಅದರೊಂದಿಗೆ ರೈತರ ಹೊಲ ಗದ್ದೆಗಳಲ್ಲಿರುವ ವಿದ್ಯುತ್ ಪರಿವರ್ತಕಗಳು ಕೂಡ ಹಾಳಾಗಿದ್ದು ಅವುಗಳನ್ನು ಹೆಸ್ಕಾಮ್ ಕಛೇರಿಯವರು ವಾಪಸ್ ತಂದಿದ್ದನ್ನು ಮರಳಿ ತೆಗೆದುಕೊಂಡು ಹೋಗಲು ತಾಲೂಕಿನ ಎಲ್ಲ ಗ್ರಾಮದ ರೈತರು ಸುಮಾರು ೨೦ ರಿಂದ ೨೫ ದಿನಗಳಿಂದ ಕಾಯುತ್ತಾ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ.

ಹೆಸ್ಕಾಂ ಕಛೇರಿಯಲ್ಲಿ ಬಿದ್ದಿರುವ ಚಾಲ್ತಿಯಲ್ಲಿರುವ ವಿದ್ಯುತ್ ಪರಿವರ್ತಕಗಳನ್ನ ವೀಕ್ಷಣೆ ಮಾಡುತ್ತಿರುವ ಹೆಸ್ಕಾಂ ಅಧಿಕಾರಿಗಳು

ಅಥಣಿ ಹೆಸ್ಕಾಂಗೆ ಆಗಿರುವ ಒಟ್ಟು ನಷ್ಟ- ಹೆಸ್ಕಾಮ್ ವರದಿಯ ಪ್ರಕಾರವಾಗಿ ತಾಲೂಕಿನಲ್ಲಿ ಸುಮಾರು ೨೫ ಕೋಟಿ ರೂಪಾಯಿಯಷ್ಟು ಹಾನಿ ಆಗಿದ್ದರೂ ಸಹ ರೈತರ ಸಮಸ್ಯಗೆ ಸ್ಪಂದಿಸುವುದು ನಮ್ಮ ಜವಾಬ್ದಾರಿ ಆಗಿದೆ. ಪ್ರವಾಹದಲ್ಲಿ ೨೧೬೩ ಕ್ಕೂ ಮೇಲ್ಪಟ್ಟು ವಿದ್ಯುತ್ ಕಂಬಗಳು ಬಿದ್ದಿವೆ, ಕೇವಲ ಎರಡು, ಮೂರು ದಿನಗಳಲ್ಲಿ ಅರ್ಧಕ್ಕಿಂತ ಹೆಚ್ಚು ವಿದ್ಯುತ್ ಕಂಬಗಳನ್ನು ಬದಲಾವಣೆ ಮಾಡಲಾಗಿದ್ದು ಇನ್ನು ಕೇವಲ ೬೩೮ ಕಂಬಗಳು ಬಾಕಿ ಉಳಿದಿವೆ ಮತ್ತು ೧೫೨೪ ವಿದ್ಯುತ್ ಪರಿವರ್ತಕಗಳಿಗೆ ಪ್ರವಾಹದಿಂದ ಸಂಪೂರ್ಣ ಧಕ್ಕೆ ಆಗಿದ್ದು ಇವುಗಳಲ್ಲಿ ೯೩೭ ಬದಲಾಯಿಸಿ ರೈತರಿಗೆ ಕೊಡಲಾಗುತ್ತಿದೆ ಹಾಗೂ ಇನ್ನು ಕೇವಲ ೫೮೭ ವಿದ್ಯುತ್ ವಾಹಕಗಳು ಉಳಿದಿವೆ ಎಂದು ಮಾಹಿತಿ ನೀಡುತ್ತಾರೆ.
ಸರಕಾರದ ಆದೇಶದ ಪ್ರಕಾರ ಸುಮಾರು ೭೨ ಗಂಟೆಗಳಲ್ಲಿ ರೈತರಿಗೆ ಹಾಳಾಗಿರುವ ವಿದ್ಯುತ್ ಪರಿವರ್ತಕಗಳನ್ನ ಬದಲಾಯಿಸಕೊಡಬೇಕು. ಆದರೆ ರೈತರು ಹಾಳಾದ ವಿದ್ಯುತ್ ಪರಿವರ್ತಕಗಳನ್ನು ತಂದು ಸುಮಾರು ೨೦ ದಿನಗಳ ಹಿಂದೆಯೇ ವಿದ್ಯುತ್ ಸರಬರಾಜು ಕೇಂದ್ರದಲ್ಲಿ ಇಟ್ಟಿದ್ದಾರೆ. ಹಾಗೆಯೇ ಹೊರಗಡೆಗೆ ಇಟ್ಟಿದ್ದು ಇವತ್ತಿನವರೆಗೂ ಸಹ ಅವರಿಗೆ ಮರಳಿ ವಿದ್ಯುತ್ ಪರಿವರ್ತಕಗಳು ಸಿಕ್ಕಿಲ್ಲ.   ಅವುಗಳಿಗಾಗಿ ದಿನನಿತ್ಯವೂ ತಮ್ಮ ಕೆಲಸ  ಬಿಟ್ಟು ಹೆಸ್ಕಾಮ್ ಕಛೇರಿಗೆ ಅಲೆದಾಡುವುದು ಬೇಸರದ ಸಂಗತಿಯಾಗಿದೆ ಎಂದು ರೈತರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.

ಸಾಕಷ್ಟು ವಿದ್ಯುತ್ ಪರಿವರ್ತಕಗಳು ಹೆಸ್ಕಾಂ ಆವರಣದಲ್ಲಿವೆ-

ಮೂಲಗಳ ಪ್ರಕಾರ ಅಥಣಿ ಹೆಸ್ಕಾಂ ಕಛೇರಿಯಲ್ಲಿ ಸಾಕಷ್ಟು ವಿದ್ಯುತ್ ಪರಿವರ್ತಕಗಳು ಬಂದಿಳಿದರೂ ಸಹ ಇದುವರೆಗೂ ಹಲವಾರು ರೈತರಿಗೆ ಹಳೆಯ ಹಾಳಾದ ಪರಿವರ್ತಕಗಳ ಬದಲಿಗೆ ಹೊಸ ಪರಿವರ್ತಕಗಳನ್ನು ತಲುಪಿಸುವ ಕೆಲಸ ನಡೆದಿಲ್ಲ.

ಹಾಳಾದ ವಿದ್ಯುತ್ ಪರಿವರ್ತಕಗಳು ರಿಪೇರಿ ಮಾಡವವರಿಲ್ಲಾ– ಹಾಳಾದ ವಿದ್ಯುತ್ ಪರಿವರ್ತಕಗಳನ್ನ ಸುಮಾರು ಎರಡು ಮೂರು ದಿನಗಳಲ್ಲಿ ರಿಪೇರಿ ಮಾಡಿ ವಾಪಾಸ್ ಮಾಡಬಹುದು. ಆದರೆ ರೀಪೆರಿ ಮಾಡುವವರೇ ಗತಿಯಿಲ್ಲದೆ ಹೆಸ್ಕಾಂ ಕಛೇರಿಯ ಆವರಣದಲ್ಲಿ ರೈತರು ತಂದು ಇಟ್ಟಿರುವ ಸ್ಥಿತಿಯಲ್ಲೆ ಈಗಲೂ ಇವೆ, ಹೆಸ್ಕಾಂ ಅಧಿಕಾರಿಗೆ ಕೇಳಿದಾಗ ವಿದ್ಯುತ್ ಪರಿವರ್ತಕಗಳನ್ನು ಇಲ್ಲಿ ರಿಪೇರಿ ಮಾಡುವುದಿಲ್ಲಾ. ನಾವು ಇವುಗಳನ್ನು ಹಾವೇರಿಗೆ ಕಳುಹಿಸಿ ರಿಪೇರಿ ಮಾಡಿಸಿಕೊಂಡು ಬರುತ್ತೇವೆ ಎಂದು ಹೇಳುತ್ತಾರೆ.

 ನಾನು ಇವತ್ತಿಗೆ ೨೦ ದಿನದ ಹಿಂದೆ  ಹಾಳಾದ ವಿದ್ಯುತ್ ಪರಿವರ್ತಕವನ್ನು ತಂದು ಹೆಸ್ಕಾಂಗೆ ಒಪ್ಪಿಸಿದ್ದೇನೆ ಆದರೂ ಈವರೆಗೂ ನನಗೆ ವಿದ್ಯುತ್ ಪರಿವರ್ತಕವನ್ನು ನೀಡಿಲ್ಲಾ, ನಾವು ಕುಟುಂಬ ಸಮೇತವಾಗಿ ಹೊಲಗಳಲ್ಲಿ ಇರುತ್ತೇವೆ. ಈವರೆಗೂ ನಮಗೆ ವಿದ್ಯುತ್ ಪರಿವರ್ತಕ ನೀಡದೆ ಇರುವುದರಿಂದ ನಾವು ಕತ್ತಲೆಯಲ್ಲೇ ಕಾಲ ಕಳೆಯುತ್ತಿದ್ದೇವೆ, ಮೊಬೈಲ್ ಗಳಿಗೆ ಚಾರ್ಜ್ ಕೂಡ ಇಲ್ಲ, ರಾತ್ರಿಯಾದರೆ ಸಾಕು ನಾವು ಮೇಣದಬತ್ತಿ ಹಚ್ಚಿಕೊಂಡು ಕಾಲಕಳೆಯುತ್ತೇವೆ. ೨೦ ದಿನದಿಂದ ನಾವು ಪ್ರತಿದಿನವೂ ಹೆಸ್ಕಾಂ ಕಛೇರಿಗೆ ಬಂದು ಹೋಗುತ್ತೇವೆ. ಇವತ್ತಾದರೂ ಕೊಡುತ್ತಾರೇನೋ ಎಂದು ಕಾದು ನೋಡುತ್ತಿದ್ದೇನೆ.

-ಅಶ್ವತ ಪಾಟೀಲ (ಝುಂಜುರವಾಡ ಗ್ರಾಮದ ರೈತ)

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button