Latest

*ಒಂದೇ ಕುಟುಂಬದ ಮೂವರು ನೀರು ಪಾಲು*

ಪ್ರಗತಿವಾಹಿನಿ ಸುದ್ದಿ, ಖಾನಾಪುರ:

ಚಳಿಗಾಲದ ರಜೆಯ ಅಂಗವಾಗಿ ಪ್ರವಾಸಕ್ಕೆ ತೆರಳಿದ್ದ ಖಾನಾಪುರ ತಾಲೂಕಿನ ಲೋಂಡಾ ಗ್ರಾಮದ ಒಂದೇ ಕುಟುಂಬದ ಮೂವರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಶುಕ್ರವಾರ ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆ ಸಾವಂತವಾಡಿ ಬಳಿಯ ಶಿರೋಡಾ ಬೀಚ್ ನಲ್ಲಿ ಸಂಭವಿಸಿದೆ.

ಶಿರೋಡಾ ಬೀಚ್ ಬಳಿ ಸಮುದ್ರದಲ್ಲಿ ಆಟವಾಡುವಾಗ ನೀರಿನಲ್ಲಿ ಮುಳುಗಿ ಮೂವರು ಮೃತಪಟ್ಟಿದ್ದು, ನೀರಿಗಿಳಿದಿದ್ದ ಮತ್ತೋರ್ವ ಮಹಿಳೆ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಶಾಲಾ ಕಾಲೇಜುಗಳಿಗೆ ರಜೆ ಇದ್ದಿದ್ದರಿಂದ ತಾಲೂಕಿನ ಲೋಂಡಾ ಗ್ರಾಮದ ಕಿತ್ತೂರ ಕುಟುಂಬ ಮತ್ತು ಅವರ ಹತ್ತಿರದ ಸಂಬಂಧಿ, ಅಳ್ನಾವರದ ಅಖ್ತರ ಕುಟುಂಬದ ಒಟ್ಟು ೮ ಸದಸ್ಯರು ಮಹಾರಾಷ್ಟ್ರ ಪ್ರವಾಸಕ್ಕೆ ಗುರುವಾರ ತೆರಳಿದ್ದರು. ಅಂಬೋಲಿ ಜಲಪಾತ ವೀಕ್ಷಿಸಿ ಸಾವಂತವಾಡಿಯಲ್ಲಿ ವಾಸ್ತವ್ಯ ಮಾಡಿ ಶುಕ್ರವಾರ ಶಿರೋಡಾ ಬೀಚ್ ವೀಕ್ಷಣೆಗೆ ತೆರಳಿದ್ದರು.

Home add -Advt

ಬೀಚ್ ನಲ್ಲಿ ನೀರಾಟದಲ್ಲಿ ತೊಡಗಿದ್ದ ಲೋಂಡಾದ ಫರೀನ್ ಇರ್ಫಾನ್ ಕಿತ್ತೂರ (34), ಇಕ್ಬಾದ್ ಕಿತ್ತೂರ (13) ಮತ್ತು ಅಳ್ನಾವರದ ನಮೀರಾ ಅಕ್ತರ್ (16) ಸಮುದ್ರದ ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟರು.
ಲೋಂಡಾದ ಫರ್ಹಾನಾ ಕಿತ್ತೂರ (34) ಎಂಬ ಮಹಿಳೆಯನ್ನು ಸ್ಥಳೀಯರು ರಕ್ಷಿಸಿದ್ದು, ಅವರನ್ನು ಸಾವಂತವಾಡಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಮಹಾರಾಷ್ಟ್ರದ ಸಿಂಧದುರ್ಗ ಜಿಲ್ಲೆಯ ಅಗ್ನಿಶಾಮಕ ದಳ ಮತ್ತು ಪೊಲೀಸರಿಂದ ಶೋಧಕಾರ್ಯ ಮುಂದುವರೆದಿದೆ. ಲೋಂಡಾ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದ್ದು, ಸುದ್ದಿ ತಿಳಿಯುತ್ತಲೇ ಮೃತರ ಸಂಬಂಧಿಕರು ಸಾವಂತವಾಡಿಗೆ ಧಾವಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Related Articles

Back to top button