ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಮಾರಕ ಕಾಯಿಲೆಯಿಂದ ಬಳಲುತ್ತಿದ್ದ ಮಾರಿಹಾಳದ ಯುವಕನ ಚಿಕಿತ್ಸೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 3 ಲಕ್ಷ ರೂ. ಮಂಜೂರಾಗಿದೆ.
ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರು ಈ ಸಂಬಂಧ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿಕೊಂಡಿದ್ದರು.
ಮಾರಿಹಾಳ ಗ್ರಾಮದ 31 ವರ್ಷದ ವಿಜಯ ಮ ಅಲ್ಲಯ್ಯನವರಮಠ ಎನ್ನುವ ಯುವಕ ಮಾರಕ ಕಾಯಿಲೆಯ ಸರ್ಜರಿ ಚಿಕಿತ್ಸೆಯನ್ನು ಬೆಳಗಾವಿಯ ಕೆಎಲ್ಇ ಎಸ್ ಆಸ್ಪತ್ರೆಯಲ್ಲಿ ಮಾಡಿಸಿಕೊಂಡಿದ್ದರು. ಇದಕ್ಕಾಗಿ ಸುಮಾರು 5.20 ಲಕ್ಷ ರೂ. ಖರ್ಚಾಗಿತ್ತು. ತೀರಾ ಬಡಕುಟುಂಬದವರಾದ ವಿಜಯ್ ಗೆ ಚಿಕಿತ್ಸೆ ವೆಚ್ಚ ಭರಿಸುವ ಶಕ್ತಿ ಇರಲಿಲ್ಲ. ಹಾಗಾಗಿ ಅವರು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಬಳಿ ತಮ್ಮ ಅಳಲನ್ನು ತೋಡಿಕೊಂಡಿದ್ದರು.
ಆಸ್ಪತ್ರೆಯ ಚಿಕಿತ್ಸೆಯ ವೆಚ್ಚ ರೂ, 1,98,403 ಮತ್ತು ಔಷಧಿಯ ಅಂದಾಜು ವೆಚ್ಚ 3,20,723 ರೂಪಾಯಿಗಳಾಗಿದ್ದು, ಇವರ ಕಷ್ಟವನ್ನು ಲಕ್ಷ್ಮಿ ಹೆಬ್ಬಾಳಕರ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಗಮನಕ್ಕೆ ತಂದಿದ್ದರು.
ಮುಖ್ಯಮಂತ್ರಿಗಳು ಶಾಸಕಿಯ ಮನವಿ ಪತ್ರದ ಮೇಲೆಯೇ 3 ಲಕ್ಷ ರೂ. ಗಳನ್ನು ಬಿಡುಗಡೆ ಮಾಡುವುದಾಗಿ ಬರೆದು ಸಹಿ ಹಾಕಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ