Latest

ರಮೇಶ ಜಾರಕಿಹೊಳಿ ಸೇರಿ ಮೂವರು ಶಾಸಕರು ಅನರ್ಹ

ರಮೇಶ ಜಾರಕಿಹೊಳಿ ಸೇರಿ ಮೂವರು ಶಾಸಕರ ಅನರ್ಹತೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –

ಗೋಕಾಕ ಶಾಸಕ ರಮೇಶ ಜಾರಕಿಹೊಳಿ, ಅಥಣಿ ಶಾಸಕ ಮಹೇಶ ಕುಮಟಳ್ಳಿ ಹಾಗೂ ರಾಣೆಬೆನ್ನೂರು ಶಾಸಕ ಆರ್.ಶಂಕರ್ ಅವರನ್ನು ಶಾಸಕತ್ವದಿಂದ ಅನರ್ಹಗೊಳಿಸಲಾಗಿದೆ.

ಸ್ಪೀಕರ್ ರಮೇಶ ಕುಮಾರ ತುರ್ತು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದ್ದಾರೆ.

ಮೂವರು ಶಾಸಕರನ್ನು ಅನರ್ಹಗೊಳಿಸುವಂತೆ ಕಾಂಗ್ರೆಸ್ ಸ್ಪೀಕರ್ ರಮೇಶ್ ಕುಮಾರ ಅವರಿಗೆ ದೂರು ಸಲ್ಲಿಸಿತ್ತು.

ರಮೇಶ ಜಾರಕಿಹೊಳಿ ಸಚಿವರಾಗಿದ್ದಾಗಿನಿಂದಲೂ ಸಚಿವಸಂಪುಟ ಸಭೆಗೆ ಹೋಗುತ್ತಿರಲಿಲ್ಲ. ಕಾಂಗ್ರೆಸ್ ಶಾಸಕಾಂಗ ಸಭೆಗಳಿಗೂ ಗೈರಾಗಿದ್ದರು. ತಾವು ರಾಜಿನಾಮೆ ನೀಡುವುದಾಗಿ ಹಲವು ಬಾರಿ ಬಹಿರಂಗವಾಗಿಯೇ ಹಳಿದ್ದರು. ಕಳೆದ ಫೆಬ್ರವರಿಯಲ್ಲಿ ಮುಂಬೈ ಸೇರಿಕೊಂಡು ಪಕ್ಷವಿರೋಧಿ ಚಟುವಟಿಕೆ ನಡೆಸಿದ್ದರು ಎಂದು ಆರೋಪಿಸಲಾಗಿದೆ.

ಅನೇಕ ಬಾರಿ ಅಥಣಿ ಶಾಸಕ ಮಹೇಶ ಕುಮಟಳ್ಳಿ ಕೂಡ ರಮೇಶ ಜಾರಿಕಹೊಳಿ ಜೊತೆ ಕಾಣಿಸಿಕೊಂಡಿದ್ದರು. ರಮೇಶ ಜಾರಕಿಹೊಳಿ ಕೈಗೊಳ್ಳುವ ನಿರ್ಣಯಕ್ಕೆ ತಾವೂ ಬದ್ದ ಎಂದು ಹೇಳಿಕೆ ನೀಡಿದ್ದರು.

ಇಬ್ಬರ ವಿರುದ್ಧವೂ ಫೆಬ್ರವರಿಯಲ್ಲೇ ಸ್ಪೀಕರ್ ಗೆ ದೂರು  ಕಾಂಗ್ರೆಸ್ ದೂರು ನೀಡಿತ್ತು. ಇದಾದ ನಂತರ ಜುಲೈ ತಿಂಗಳಲ್ಲಿ ಅವರು ರಾಜಿನಾಮೆ ಸಲ್ಲಿಸಿದ್ದರು.

ಆರ್.ಶಂಕರ್ ತಮ್ಮ ಕೆಪಿಜೆಪಿ ಪಕ್ಷವನ್ನು ಈಚೆಗೆ ಕಾಂಗ್ರೆಸ್ ನಲ್ಲಿ ವಿಲೀನ ಮಾಡಿ, ಸಚಿವರಾಗಿದ್ದರು. ನಂತರ ಕಳೆದ ವಾರ ರಾಜಿನಾಮೆ ನೀಡಿ, ತಾವು ಬಿಜೆಪಿಗೆ ಬೆಂಬಲ ನೀಡುವುದಾಗಿ ರಾಜ್ಯಪಾಲರಿಗೆ ಪತ್ರ ಸಲ್ಲಿಸಿದ್ದರು. ಈ ಬಗ್ಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ದೂರು ಸಲ್ಲಿಸಿದ್ದರು. ಈ ಬಗ್ಗೆ ಶಂಕರ್ ಗೆ ನೊಟೀಸ್ ನೀಡಲಾಗಿತ್ತು.

ಒಟ್ಟೂ 17 ಶಾಸಕರ ವಿರುದ್ಧ ನನಗೆ ದೂರು ಬಂದಿತ್ತು, ಉಳಿದವರ ಬಗ್ಗೆ ಶೀಘ್ರ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ರಮೇಶ ಕುಮಾರ ತಿಳಿಸಿದರು.

ಈ ಮೂವರೂ ಪ್ರಸ್ತುತ ವಿಧಾನಸಭೆಯ ಪೂರ್ಣ ಅವಧಿಗೆ ಅನರ್ಹರಾಗಿದ್ದು, ಉಪಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂದು ಸ್ಪೀಕರ್ ತಿಳಿಸಿದರು.

 

 

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button