Kannada NewsKarnataka NewsLatest

*15 ದಿನಗಳಲ್ಲಿ 51 ಶಾಲೆ*: *4500 ವಿದ್ಯಾರ್ಥಿಗಳಿಗೆ ಪರೀಕ್ಷಾ ಭಯ ಗೆಲ್ಲಲು ದಾರಿ ತೋರಿದ 15 ವರ್ಷದ ಬಾಲಕಿ*

ಪ್ರಗತಿವಾಹಿನಿ ಸುದ್ದಿ: ಪರೀಕ್ಷೆ ಎಂದರೆ ಬಹುತೇಕ ವಿದ್ಯಾರ್ಥಿಗಳಿಗೆ ಒತ್ತಡ. ಕೆಲವರಿಗೆ ಭಯವೂ ಕಾಡುತ್ತದೆ. ಇದನ್ನು ಹೋಗಲಾಡಿಸಲು ಶಿಕ್ಷಕರು, ತಜ್ಞರು ಸಲಹೆ ನೀಡುವುದು ಸಾಮಾನ್ಯ. ಆದರೆ, ತನ್ನದೇ ವಯಸ್ಸಿನ ವಿದ್ಯಾರ್ಥಿಗಳಿಗೆ ಪರೀಕ್ಷಾ ಭಯ ಹೋಗಲಾಡಿಸಲು 15 ವರ್ಷದ ಬಾಲಕಿಯೊಬ್ಬಳು ವಿಭಿನ್ನ ಹೆಜ್ಜೆ ಇಟ್ಟಿದ್ದಾಳೆ.

ಮೂಡುಬಿದಿರೆಯ ಆಳ್ವಾಸ್ ಸೆಂಟ್ರಲ್ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ವಿಷ್ಣುಪ್ರಿಯಾ ಪೈ ಈ ವಿಶೇಷ ಅಭಿಯಾನ ನಡೆಸಿದ್ದಾರೆ. ಕೇವಲ 15 ದಿನಗಳಲ್ಲಿ 51 ಶಾಲೆಗಳಿಗೆ ಭೇಟಿ ನೀಡಿ ಸುಮಾರು 4,500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪರೀಕ್ಷಾ ಒತ್ತಡ ನಿರ್ವಹಣೆ ಕುರಿತು ಮಾರ್ಗದರ್ಶನ ನೀಡಿದ್ದಾರೆ.

ಆಗಸ್ಟ್ 24ರಿಂದ ಸೆಪ್ಟೆಂಬರ್ 11ರವರೆಗೆ ವಿಷ್ಣುಪ್ರಿಯಾ ಈ ಅಭಿಯಾನ ನಡೆಸಿದ್ದಾರೆ. ಹಾಸನ, ಕೊಡಗು, ಬೆಂಗಳೂರು, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಶಾಲೆಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ.

ಪ್ರತಿ ಶಾಲೆಯಲ್ಲೂ ಸುಮಾರು ಒಂದು ಗಂಟೆಯ ಕಾರ್ಯಾಗಾರ ನಡೆಸಿದ್ದಾರೆ. ಪರೀಕ್ಷಾ ಒತ್ತಡವನ್ನು ಹೇಗೆ ನಿಭಾಯಿಸಬೇಕು? ಸಮಯವನ್ನು ಹೇಗೆ ನಿರ್ವಹಿಸಬೇಕು? ಸುಲಭವಾಗಿ ಓದುವುದು ಹೇಗೆ? ಪರೀಕ್ಷೆಗೆ ವೈಜ್ಞಾನಿಕವಾಗಿ ಸಿದ್ಧರಾಗುವುದು ಹೇಗೆ? ಈ ಕುರಿತು ವಿದ್ಯಾರ್ಥಿಗಳಿಗೆ ಸರಳವಾಗಿ ವಿವರಿಸಿದ್ದಾರೆ.

ವಿಷ್ಣುಪ್ರಿಯಾಗೆ ಈ ವಿಷಯದ ಆಸಕ್ತಿ ಹೊಸದಲ್ಲ. 6ನೇ ತರತಿಯಲ್ಲಿದ್ದಾಗಲೇ ಮಾನಸಿಕ ಆರೋಗ್ಯ, ಕೌನ್ಸೆಲಿಂಗ್ ಮತ್ತು ಸೈಕಾಲಜಿ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದರು. ಕಳೆದ ನಾಲ್ಕು ವರ್ಷಗಳಲ್ಲಿ ಇಂಡಿಯನ್ ಕೌನ್ಸೆಲಿಂಗ್ ಸರ್ವಿಸಸ್ ಮೂಲಕ ಆನ್‌ಲೈನ್ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ್ದಾರೆ. ತಾವು ಕಲಿತ ವಿಚಾರಗಳನ್ನು ತಮ್ಮಲ್ಲೇ ಇಟ್ಟುಕೊಳ್ಳದೆ, ಇತರ ವಿದ್ಯಾರ್ಥಿಗಳಿಗೂ ತಲುಪಿಸಬೇಕು ಎಂಬ ಉದ್ದೇಶದಿಂದ ಈ ಅಭಿಯಾನ ಆರಂಭಿಸಿದ್ದಾರೆ.

ಈ ಪ್ರಯತ್ನ ಇದೀಗ ವಿಶ್ವ ದಾಖಲೆಯ ಮಾನ್ಯತೆಯನ್ನೂ ಪಡೆದಿದೆ. ವಿಷ್ಣುಪ್ರಿಯಾ ಅವರ 15 ದಿನಗಳ ಜಾಗೃತಿ ಅಭಿಯಾನವನ್ನು ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ ಗುರುತಿಸಿ ಸನ್ಮಾನಿಸಿದೆ.

ಅಕ್ಟೋಬರ್ 1ರಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅವರ ಉಪಸ್ಥಿತಿಯಲ್ಲಿ ವಿಶ್ವ ದಾಖಲೆಯ ಪ್ರಮಾಣಪತ್ರ ಹಸ್ತಾಂತರಿಸಲಾಗುತ್ತಿದೆ. ತನ್ನದೇ ವಯಸ್ಸಿನ ವಿದ್ಯಾರ್ಥಿಗಳ ಪರೀಕ್ಷಾ ಆತಂಕವನ್ನು ಅರ್ಥ ಮಾಡಿಕೊಂಡು, ಅವರಿಗೆ ಮಾರ್ಗದರ್ಶನ ನೀಡಲು ಮುಂದಾದ ವಿಷ್ಣುಪ್ರಿಯಾ ಅವರ ಪ್ರಯತ್ನ ಇದೀಗ ಗಮನ ಸೆಳೆದಿದೆ. ವಿದ್ಯಾರ್ಥಿಯೊಬ್ಬಳು ವಿದ್ಯಾರ್ಥಿಗಳಿಗಾಗಿಯೇ ಕೈಗೊಂಡ ಈ ಅಭಿಯಾನ ಹೊಸ ಮಾದರಿಯ ಪ್ರಯತ್ನವಾಗಿ ಗುರುತಿಸಿಕೊಂಡಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button