EducationKarnataka NewsLatest

*ಒಂದನೇ ತರಗತಿ ದಾಖಲು ಮಾಡಲು ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ*

ಪ್ರಗತಿವಾಹಿನಿ ಸುದ್ದಿ: ಪ್ರಸಕ್ತ ಸಾಲಿನಿಂದ ಮಕ್ಕಳನ್ನು ಒಂದನೇ ತರಗತಿಗೆ ಸೇರಿಸಲು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ವಯೋಮಿತಿಯಲ್ಲಿ ಕೆಲ ಸಡಿಲಿಕೆ ಮಾಡಿದೆ.

ಒಂದನೇ ತರಗತಿ ದಾಖಲಾತಿಗೆ ಮಗುವಿಗೆ ಕಡ್ಡಾಯವಾಗಿ 6 ವರ್ಷ ತುಂಬಿರಬೇಕು ಎಂಬ ಆದೇಶ ಭಾರಿ ಚರ್ಚೆಗೆ ಕಾರಣವಾಗಿತ್ತು. ಬಳಿಕ ಶಿಕ್ಷಣ ಇಲಾಖೆ ವಿನಾಯಿತಿ ನೀಡಿತ್ತು. ಆದರೂ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಈ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯಲು ರಾಜ್ಯ ಸರ್ಕಾರ ಒಂದನೇ ತರಗತಿ ಸೇರಲು ಮಗುವಿಗೆ 60 ದಿನಗಳ ವಯೋಮಿತಿ ಸಡಿಲಿಕೆ ಮಾಡಿ ಅಂದರೆ 2 ತಿಂಗಳ ವಿನಾಯಿತಿ ನೀಡಿ ಆದೇಶ ಹೊರಡಿಸಿದೆ.

ಈ ಬಗ್ಗೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದು, 2026-27ನೇ ಶೈಕ್ಷಣಿಕ ಸಾಲಿಗೆ ಸೀಮಿತವಾಗಿ ಒಂದನೇ ತರಗತಿಗೆ ಮಕ್ಕಳನ್ನು ದಾಖಲು ಮಾಡಿಕೊಳ್ಳುವ ಸಂದರ್ಭದಲ್ಲಿ, ಶೈಕ್ಷಣಿಕ ವರ್ಷದ ಜೂನ್‌ 1 ರಿಂದ ಗರಿಷ್ಠ60 ದಿನಗಳ ಸಡಿಲಿಕೆಯನ್ನು ನೀಡಿ ಮಗುವಿನ ವಯಸ್ಸನ್ನು ಲೆಕ್ಕಹಾಕಿ ಶಾಲಾ ದಾಖಲಾತಿಗೆ ಪರಿಗಣಿಸುವಂತೆ ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ. ಇದರಿಂದ ಮಗುವಿನ ಜನ್ಮದಿನವು ಜೂನ್ 1ರಿಂದ ಮುಂದಿನ 60 ದಿನಗಳ ಒಳಗಿದ್ದರೆ (ಜುಲೈ 30ರ ವರೆಗೆ), ಅಂತಹ ಮಕ್ಕಳನ್ನು 1ನೇ ತರಗತಿಗೆ ದಾಖಲಿಸಿಕೊಳ್ಳಲು ಅವಕಾಶ ಕಲ್ಪಿಸಿದಂತಾಗಿದೆ. ಪೋಷಕರು ಸಲ್ಲಿಸಿದ ಮನವಿಗಳನ್ನು ಪುರಸ್ಕರಿಸಿ, ಕರ್ನಾಟಕ ಶಿಕ್ಷಣ ಅಧಿನಿಯಮ 1983ರ ಕಲಂ 20ರ ಅಡಿಯಲ್ಲಿ ಈ ವಿಶೇಷ ಅವಕಾಶವನ್ನು ಕಲ್ಪಿಸಲಾಗಿದೆ.

ಈ ಆದೇಶವನ್ನು ಜಾರಿಗೆ ತರಲು SATS ತಂತ್ರಾಂಶದಲ್ಲಿಯೂ ಸೂಕ್ತ ಬದಲಾವಣೆ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ.

Home add -Advt


Related Articles

Back to top button