CrimeKannada NewsKarnataka NewsLatest

*9 ವರ್ಷಗಳ ಸಂಬಂಧಕ್ಕೆ ಮದುವೆಯೇ ಮುಳುವಾಯಿತೇ?*: *ದೇವಸ್ಥಾನಕ್ಕೆ ಹೋದ ಮಹಿಳೆಯ ಭೀಕರ ಹತ್ಯೆ*

ಪ್ರಗತಿವಾಹಿನಿ ಸುದ್ದಿ: ಒಂಬತ್ತು ವರ್ಷಗಳಿಂದ ಇಬ್ಬರ ನಡುವೆ ಸಂಬಂಧವಿತ್ತು. ಆದರೆ ಯುವಕ ಬೇರೊಬ್ಬ ಯುವತಿಯನ್ನು ಮದುವೆಯಾಗಲು ನಿರ್ಧರಿಸಿದಾಗ ಪರಿಸ್ಥಿತಿಯೇ ಬದಲಾಗಿದೆ. ಮದುವೆ ವಿಚಾರವಾಗಿ ಇಬ್ಬರ ನಡುವೆ ಕಲಹ ಆರಂಭವಾಗಿದೆ. ದೇವಸ್ಥಾನಕ್ಕೆ ಹೋದ ಮಹಿಳೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾಳೆ. ಇದೀಗ ಪೊಲೀಸರ ತನಿಖೆಯಲ್ಲಿ ಆಕೆಯ ನಾಪತ್ತೆಯ ಹಿಂದಿನ ಭಯಾನಕ ಘಟನೆ ಬಯಲಾಗಿದೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಚನ್ಯಾನದಡ್ಡಿ ಗ್ರಾಮದ ಹೊರವಲಯದಲ್ಲಿ ಘಟನೆ ನಡೆದಿದೆ. ಕೊಲೆಯಾದ ಮಹಿಳೆಯನ್ನು ನನದಿ ಗ್ರಾಮದ ಐರಾವತಿ ಖೋತ (38) ಎಂದು ಗುರುತಿಸಲಾಗಿದೆ. ಕೊಲೆ ಆರೋಪದ ಮೇಲೆ ಬಾಗಲಕೋಟೆ ಜಿಲ್ಲೆಯ ನರೇನೂರು ಗ್ರಾಮದ ಸಂಜಯ ಚವ್ಹಾಣ (28) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಸಂಜಯ್ ಹುಕ್ಕೇರಿ ತಾಲೂಕಿನ ಯಾದಗೂಡು ಗ್ರಾಮದ ಡಾಬಾದಲ್ಲಿ ಕೆಲಸ ಮಾಡುತ್ತಿದ್ದಾಗ ಐರಾವತಿ ಪರಿಚಯವಾಗಿದ್ದರು. ಬಳಿಕ ಇಬ್ಬರೂ ಸುಮಾರು 9 ವರ್ಷಗಳಿಂದ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಈ ನಡುವೆ ಸಂಜಯ್ ಬೇರೊಬ್ಬ ಯುವತಿಯನ್ನು ಮದುವೆಯಾಗಲು ಮುಂದಾಗಿದ್ದ. ಆದರೆ ಐರಾವತಿ ಇದಕ್ಕೆ ಅಡ್ಡಿಪಡಿಸುತ್ತಿಳು ಎನ್ನಲಾಗಿದೆ. ಈ ಹಿಂದೆ ಎರಡು ಬಾರಿ ಮದುವೆಗೆ ಹೆಣ್ಣು ನಿಶ್ಚಯವಾದಾಗಲೂ ಐರಾವತಿ ಅದನ್ನು ತಪ್ಪಿಸಿದ್ದಳು ಎನ್ನಲಾಗಿದೆ. ಮೂರನೇ ಬಾರಿಗೆ ಮದುವೆಗೆ ಹೆಣ್ಣು ನಿಶ್ಚಯವಾದಾಗಲೂ ತನ್ನನ್ನು ಬಿಟ್ಟು ಮದುವೆಯಾಗಬಾರದು ಎಂದು ಪಟ್ಟು ಹಿಡಿದಿದ್ದಳು ಎಂದು ಹೇಳಲಾಗಿದೆ. ಇದೇ ವಿಚಾರವಾಗಿ ಸಂಜಯ್ ಕೊಲೆಗೆ ಸಂಚು ರೂಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ನವೆಂಬರ್ 14ರಂದು ಐರಾವತಿ ತೋರಣಹಳ್ಳಿಯ ದೇವಸ್ಥಾನಕ್ಕೆ ತೆರಳಿದ್ದಳು. ಆದರೆ ಮನೆಗೆ ಮರಳಿರಲಿಲ್ಲ. ಹೀಗಾಗಿ ಕುಟುಂಬಸ್ಥರು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು ಕರೆಗಳ ವಿವರಗಳನ್ನು ಪರಿಶೀಲಿಸಿದ್ದಾರೆ. ಸಿಡಿಆರ್ ಆಧರಿಸಿ ಸಂಜಯ್‌ನನ್ನು ಪತ್ತೆಹಚ್ಚಿ ವಿಚಾರಣೆ ನಡೆಸಿದಾಗ ಮಹಿಳೆಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂಜಯ್ ಕಲ್ಲು ಹಾಗೂ ಬಿಯರ್ ಬಾಟಲಿಯಿಂದ ಐರಾವತಿ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಬಳಿಕ ಚನ್ಯಾನದಡ್ಡಿ ಗ್ರಾಮದ ಹೊರವಲಯದ ಕಾಡಿನಲ್ಲಿ ಮೃತದೇಹವನ್ನು ಎಸೆದು ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳ ಪರಿಶೀಲನೆ ನಡೆಸಿದ ಪೊಲೀಸರಿಗೆ ಮಹಿಳೆಯ ಮೂಳೆಗಳು ಹಾಗೂ ಬಟ್ಟೆಗಳು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ. ಎಫ್‌ಎಸ್‌ಎಲ್ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಸದ್ಯ ಆರೋಪಿ ಸಂಜಯ್ ಚವ್ಹಾಣನನ್ನು ಬಂಧಿಸಲಾಗಿದ್ದು, ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button