Latest

95.15 ಲಕ್ಷ ರೂ. ಚಿನ್ನದ ಘಟ್ಟಿ ಬಿಡುಗಡೆಗೆ ಆದೇಶ


  ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬಸ್ಸಿನಲ್ಲಿ ವಶಪಡಸಿಕೊಂಡಿದ್ದ 95.15 ಲಕ್ಷ ರೂ. ಮೌಲ್ಯದ 3 ಚಿನ್ನದ ಘಟ್ಟಿಗಳನ್ನು ಬಿಡುಗಡೆ ಮಾಡಲು ನ್ಯಾಯಾಲಯ ಆದೇಶ ನೀಡಿದೆ.
ಕಳೆದ ಫೆ.8ರಂದು ರಂದು ಮುಂಬೈ ಮೂಲದ ಮೋಹನ ಪ್ರಭಾಕರ ದೇವಕರ ಅವರು ಯಾವುದೇ ಅಧಿಕೃತ ಕಾಗದ ಪತ್ರಗಳು ಹಾಗೂ ಬಿಲ್ಲುಗಳು ಇಲ್ಲದೆ 3 ಚಿನ್ನದ ಘಟ್ಟಿಗಳನ್ನು ಬೆಳಗಾವಿಯಿಂದ ಮುಂಬೈಗೆ ಬಸ್ಸಿನಲ್ಲಿ ಸಾಗಿಸುತ್ತಿದ್ದರು. ಗಸ್ತಿಯಲ್ಲಿದ್ದ ಸಿಸಿಐಬಿ ಪೊಲೀಸ್ ಇನ್ಸಪೆಕ್ಟರ್ ಗುದಿಗೂಪ್ಪ ಮತ್ತು ಸಿಬ್ಬಂದಿ ಆತನನ್ನು ತಪಾಸಣೆ ಮಾಡಿ ಚಿನ್ನದ ಗಟ್ಟಿಗಳ ಸಾಗಾಣಿಕೆ ಬಗ್ಗೆ ಯಾವುದೇ ಸಮರ್ಪಕ ಉತ್ತರ, ಕಾಗದ ಪತ್ರ ಕೊಡದ್ದರಿಂದ, ಅವುಗಳನ್ನು ಜಪ್ತು ಮಾಡಿ ಆತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.
ಚಿನ್ನದ ಗಟ್ಟಿಗಳ ಅಧಿಕೃತ ಮಾಲಿಕರಾದ ಸಂತೋಷ ಪಂಡಿತ ಬಾಬರ, ಜಯಂತ ಪಾಂಡುರಂಗ ಜಾಧವ, ರಾಜೇಂದ್ರ ಬಾಪು ಸಿಂಧೆ ಹಾಗೂ ಶಶಿಕಾಂತ ಅಕಾರಾಮ ಲೆಂಡಾವೆ ಇವರು ಅಧಿಕೃತ ಬಿಲ್ಲು, ಬ್ಯಾಂಕಿನ ವ್ಯವಹಾರ ಹಾಗೂ ಜಿಎಸ್ಟಿ ಮತ್ತು ಆದಾಯ ತೆರಿಗೆ ಇತ್ಯಾದಿಗಳನ್ನು ಹಾಜರುಪಡಿಸಿ ಚಿನ್ನದ ಗಟ್ಟಿಗಳನ್ನು ತಮ್ಮ ವಶಕ್ಕೆ ನೀಡಲು ಅರ್ಜಿ ಹಾಕಿದ್ದರು. ಅರ್ಜಿಯನ್ನು ಪುರಸ್ಕರಿಸಿದ ಉಚ್ಚ ನ್ಯಾಯಾಲಯ ನ್ಯಾಯಾಲಯ ಕೆಲವೊಂದು ಶರತ್ತುಗಳನ್ನು ವಿಧಿಸಿ ಜಪ್ತಾದ 3 ಚಿನ್ನದ ಘಟ್ಟಿಗಳ ಕಿಮ್ಮತ್ತಿನ ಇಂಡೆಮನ್‌ನಿಟಿ ಬಾಂಡ್ ಮತ್ತು ಅದಕ್ಕೆ ತಕ್ಕ ಜಾಮೀನು ನೀಡಬೇಕೆಂದು ಆದೇಶ ಮಾಡಿತ್ತು. ಉಚ್ಚ ನ್ಯಾಯಾಲಯದ ಆದೇಶದಂತೆ ಜಾಮೀನು ಮತ್ತು ಇಂಡೆಮ್‌ನಿಟಿ ಬಾಂಡ್ ಸ್ವೀಕರಿಸಿ, ಸಂಬಂಧಪಟ್ಟ ಮಾಲೀಕರಿಗೆ ಚಿನ್ನದ ಘಟ್ಟಿಗಳನ್ನು ಬಿಡುಗಡೆ ಮಾಡಲು ನ್ಯಾಯಾಧೀಶರಾದ ಸಂದೀಪ ರೆಡ್ಡಿ ಆದೇಶ ಮಾಡಿದರು. ಅರ್ಜಿದಾರರ ಪರವಾಗಿ ನ್ಯಾಯವಾದಿ ದಿನಕರ ಶೆಟ್ಟಿ ವಾದ ಮಂಡಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button