Latest

ಈ ಸಂದರ್ಭದಲ್ಲಿ ಹಾವೇರಿ ಜಿಲ್ಲಾಧಿಕಾರಿ ವರ್ಗಾವಣೆ ಸರಿಯೇ?

ಇದೊಂದು ಶಾಪಗ್ರಸ್ತ ಸಮ್ಮೇಳನವಾಗುತ್ತಿದ್ದೆಯೇ ಎನ್ನುವ ಅನುಮಾನ

 ಪ್ರಗತಿವಾಹಿನಿ ಸುದ್ದಿ,  ಬೆಂಗಳೂರು: ಹಾವೇರಿಯಲ್ಲಿ ನಡೆಯಬೇಕಿರುವ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಒಂದಾದ ಮೇಲೊಂದು ಸಮಸ್ಯೆಗಳು ಸೃಷ್ಟಿಯಾಗುತ್ತಿರುವುದು ಕಂಡರೆ  ಇದೊಂದು ಶಾಪಗ್ರಸ್ತ ಸಮ್ಮೇಳನವಾಗುತ್ತಿದ್ದೆಯೇ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ. ಸಮ್ಮೇಳನದ ಸಂಪೂರ್ಣ ಸಿದ್ಧತೆ ಮಾಡಿಕೊಳ್ಳುತ್ತಿದ್ದಂತೆ *ಹಾವೇರಿ ಜಿಲ್ಲಾಧಿಕಾರಿಯಾಗಿದ್ದ ಎಸ್.ಬಿ. ಶೆಟ್ಟಣ್ಣನವರ* ಅವರನ್ನು ವರ್ಗಾವಣೆ ಮಾಡಿದ್ದು ಸೂಕ್ತವೇ, ಎಂದು *ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ ಮಹೇಶ ಜೋಶಿ* ಕಳವಳ ವ್ಯಕ್ತಪಡಿಸಿದ್ದಾರೆ.
   ಆಡಳಿತ ಸುಧಾರಣೆಯ ಹೆಸರಿನಲ್ಲಿ ನಿನ್ನೆ ಕೆಲವು ಐಎಎಸ್ ಅಧಿಕಾರಿಗಳನ್ನು ಸರಕಾರ ವರ್ಗಾವಣೆ ಮಾಡಿದೆ. ಕಾಲ ಕಾಲಕ್ಕೆ ಆಡಳಿತ ಹಿತ ದೃಷ್ಟಿಯಿಂದ ಅಧಿಕಾರಿಗಳು ಅಥವಾ ಸಿಬ್ಬಂದಿಗಳ ವರ್ಗಾವಣೆ ಮಾಡುವುದರಲ್ಲಿ ಯಾವುದೇ ಆಕ್ಷೇಪ ಇಲ್ಲ. ಆದರೆ ಕೆಲವು ಮಹತ್ವದ ಯೋಜನೆಗಳು, ಕಾರ್ಯಗಳು ಜಾರಿಯಲ್ಲಿ ಇರುವಾಗ ಆ ಭಾಗದ ಅಧಿಕಾರಿಗಳು ಸಮರ್ಥವಾಗಿ ಕೆಲಸ ಮಾಡುತ್ತಿರುವಾಗ ಏಕಾ ಏಕಿ ಅಂಥವರನ್ನು ವರ್ಗಾವಣೆ ಮಾಡುವುದು ಎಷ್ಟರ ಮಟ್ಟಿಗೆ ಸೂಕ್ತ ಎಂದು ಪ್ರಶ್ನೆಮಾಡಿದ್ದಾರೆ.
   ಹಾವೇರಿಯಲ್ಲಿ ಇತಿಹಾಸ ಸೃಷ್ಟಿಸುವ ರೀತಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಬೇಕು ಎನ್ನುವ ಸಿದ್ದತೆ ನಡೆಸಲಾಗುತ್ತಿದೆ. ಅದಕ್ಕೆ ಸಾಕಷ್ಟು ಅಡೆತಡೆಗಳು  ಬಂದರೂ ಹಾವೇರಿ ಸಮ್ಮೇಳನ ಕನ್ನಡಿಗರಿಗೆ ಅಸ್ಮಿತೆಯ ಪ್ರತೀಕ ಎಂದು ಪರಿಗಣಿಸಿದ ಕನ್ನಡ ಸಾಹಿತ್ಯ ಪರಿಷತ್ತು ಏನೆ ಅಡೆತಡೆಗಳು ಬಂದರೂ ಅದನ್ನು ನಿಭಾಯಿಸಿ ಸಮ್ಮೇಳನ ಯಶಸ್ವಿಯಾಗಿ ನಡೆಸಲು ಕಂಕಣ ಕಟ್ಟಿ ನಿಂತಿದೆ.  ಅದಕ್ಕೆ ಬೆಂಬಲವಾಗಿ ಸರಕಾರದ ಸಹಕಾರವೂ ಇದ್ದೆ ಇದೆ. ನಾನಾ ಕಾರಣಗಳಿಗೆ ಮುಂದೂಡಲ್ಪಡುತ್ತಿರುವ ಈ ಸಮ್ಮೇಳನ ಕೊನೆಗೂ ೨೦೨೩ ರ ಜನವರಿ  ೬ ,೭ ಹಾಗೂ ೮ ರಂದು ನಡೆಸಲು ಸರಕಾರ ಘೋಷಿಸಿತು.
ಅದಕ್ಕೆ ತಕ್ಕಂತೆ ಕನ್ನಡ ಸಾಹಿತ್ಯ ಪರಿಷತ್ತು, ಹಾವೇರಿ ಜಿಲ್ಲಾಡಳಿತ ಸೇರಿ ಸಿದ್ಧತೆಗಳನ್ನು  ಹಮ್ಮಿಕೊಂಡಿತ್ತು. ಇದೇ ತಿಂಗಳ ೨೭ ರಂದು ಹಾವೇರಿಯಲ್ಲಿ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ  ಶಿವರಾಮ ಹೆಬ್ಬಾರ ನೇತೃತ್ವದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು, ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಗಳು ಸೇರಿದಂತೆ ತಜ್ಞರ ಸಭೆಯನ್ನು ಸಹ ಕರೆಯಲಾಗಿತ್ತು.
      ಹಾವೇರಿ ಜಿಲ್ಲಾಧಿಕಾರಿ  ಎಸ್. ಬಿ. ಶೆಟ್ಟಣ್ಣನವರ ಅವರ ನೇತೃತ್ವದಲ್ಲಿ ಹಾವೇರಿ ಸಮ್ಮೇಳನದ ನೀಲನಕ್ಷೆ ಸಿದ್ದಪಡಿಸಲಾಗಿದೆ. ಸುಮಾರು ೨೦ಕ್ಕೂ ಹೆಚ್ಚು ಸಮಿತಿಗಳನ್ನು ಸಿದ್ದಪಡಿಸಲು ವ್ಯವಸ್ಥೆ ಮಾಡಲಾಗಿದೆ. ಸದ್ಯದಲ್ಲಿಯೇ ಸಮ್ಮೇಳನದ ಲಾಂಛನ ಬಿಡುಗಡೆಗೆ ಸಿದ್ಧವಾಗಿದೆ, ಪರಿಷತ್ತಿನಲ್ಲಿ ಸಮ್ಮೇಳನದ ಹಿನ್ನೆಲೆಯಲ್ಲಿ ೮೬ ಗ್ರಂಥಗಳು ಪ್ರಕಟವಾಗುತ್ತಿವೆ, ಇದರ ಜೊತೆಗೆ ಸಾಕಷ್ಟು ಕೆಲಸಗಳು ಪ್ರಗತಿಯಲ್ಲಿದೆ. ಇಂತಹ ಸಂದರ್ಭದಲ್ಲಿ  ಹಾವೇರಿ ಜಿಲ್ಲಾಧಿಕಾರಿಯವರು ಸಮರ್ಥವಾಗಿ ಸಮ್ಮೇಳನದ ರೂಪುರೇಷೆ ಸಿದ್ಧಪಡಿಸಿದ್ದಾರೆ ಎಂದು ನಾಡೋಜ ಡಾ.ಮಹೇಶ ಜೋಶಿ ತಿಳಿಸಿದ್ದಾರೆ.
    ಸರಕಾರದ ಆಡಳಿತದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಯಾವತ್ತೂ ಹಸ್ತಕ್ಷೇಪ ಮಾಡುವುದಿಲ್ಲ.  ಆದರೆ ಸಮಸ್ತ ಕನ್ನಡಿಗರ ಅಭಿಮಾನ ಹಾಗೂ ಅಸ್ಮಿತೆಯ ಪ್ರತೀಕವಾಗಿರುವ ಹಾವೇರಿ ಸಾಹಿತ್ಯ ಸಮ್ಮೇಳನದ ಮೇಲೆ ಒಂದಿಲ್ಲೊಂದು ಕರಿನೆರಳು ಆವರಿಸುತ್ತಿರುವುದನ್ನು ಪರಿಷತ್ತು ಸಹಿಸುವುದಿಲ್ಲ.  ಈಗಾಗಲೆ ಹಾವೇರಿಗೆ ವರ್ಗಾವಣೆ ಮಾಡಿರುವ ಅಧಿಕಾರಿಗಳು ಸಮರ್ಥರಲ್ಲ ಎನ್ನುವ ಭಾವನೆ ನಮ್ಮಲ್ಲಿ ಇಲ್ಲ.  ಬದಲಾಗಿ ಈಗಾಗಲೇ ಎಲ್ಲ ಸಿದ್ಧತೆ ಮಾಡಿಕೊಂಡಿರುವ ಅಧಿಕಾರಿಗಳಿಂದಲೇ ಹಾವೇರಿಯಲ್ಲಿ ನಿಯೋಜಿತ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ವಿಯಾಗಿ  ನಡೆಸಿಕೊಂಡು ಹೋಗಲು ಅವಕಾಶ ಮಾಡಿಕೊಡಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತು  ಹಾವೇರಿ ಜಿಲ್ಲಾ ಉಸ್ತುವಾರಿ ಸಚಿರಾದ  ಶಿವರಾಮ ಹೆಬ್ಬಾರ ಅವರು  ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ  ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ ಆಗ್ರಹಿಸಿದ್ದಾರೆ.

 

 

https://pragati.taskdun.com/latest/kannada-rajyotsavakannada-flagedr-mahesh-joshi/

 

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button