ಪ್ರಗತಿವಾಹಿನಿ ಸುದ್ದಿ, ಚಿತ್ರದುರ್ಗ: ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಪೊಲೀಸರು ಎರಡು ಪ್ರತ್ಯೇಕ ಚಾರ್ಜ್ ಶೀಟ್‌ಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಶಿವಮೂರ್ತಿ ಮುರುಘಾ ಶರಣರಇಡೀ ರಾತ್ರಿ ಸಂತ್ರಸ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿದ ಚಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಲಾಗಿದ್ದು, ಪ್ರಕರಣದಲ್ಲಿ ಮುರುಘಾ ಶರಣರ ಸಂಕಷ್ಟ ಹೆಚ್ಚಾಗಿದೆ.
ಸಂತ್ರಸ್ತೆಯರಿಂದ ಪಡೆದ ಸಿಆರ್‌ಪಿಸಿ ೧೬೧ ಹಾಗೂ ೧೬೪ ಸಿಆರ್‌ಪಿಸಿ ಹೇಳಿಕೆ ಆಧರಿಸಿ ೩೪೭ ಹಾಗೂ ೩೩೧ ಪುಟಗಳ ಎರಡು ಪ್ರತ್ಯೇಕ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ೮೪ ಸಾಕ್ಷಿಗಳ ಹೇಳಿಕೆಯನ್ನು ಪೊಲೀಸರು ದಾಖಲಿಸಿದ್ದಾರೆ.
ಮುರುಘಾ ಶರಣರು ಮತ್ತು ವಾರ್ಡನ್ ರಶ್ಮಿ ಅವರ ಬಟ್ಟೆಗಳು, ಮೊಬೈಲ್ ಮೊದಲಾದವುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗಳು ಬರುವುದು ಬಾಕಿ ಇದ್ದು, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗಳಲ್ಲಿ ಲೈಂಗಿಕ ದೌರ್ಜನ್ಯದ ಆರೋಪ ಸಾಬೀತಾದರೆ ಮುರುಘಾ ಶರಣರಿಗೆ ಶಿಕ್ಷೆಯಾಗುವ ಸಾಧ್ಯತೆ ಹೆಚ್ಚಿದೆ.
ಸಂತ್ರಸ್ತೆಯರು ಹೇಳಿದ್ದೇನು ?
ಕಳೆದ ಜುಲೈ ೨೬ರಂದು ಮೈಸೂರಿನ ನಜರಾಬಾದ್ ಠಾಣೆಗೆ ಹಾಜರಾದ ಇಬ್ಬರು ಬಾಲಕಿಯರು ಮುರುಘಾ ಶರಣರ ವಿರುದ್ಧ ಲೈಂಗಿಕ ದೌರ್ಜನ್ಯದ ದೂರು ನೀಡಿದ್ದರು. ಬಳಿಕ ದೂರು ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ವರ್ಗಾವಣೆಯಾಯಿತು. ಸಿಆರ್‌ಪಿಸಿ ೧೬೧, ಸಿಆರ್‌ಪಿಸಿ ೧೬೪ರಲ್ಲಿ ಹೇಳಿಕೆ ಪಡೆಯಲಾಯಿತು.
ಮುರುಘಾ ಮಠದ ಅಕ್ಕಮಹಾದೇವಿ ಹಾಸ್ಟೇಲ್‌ನಲ್ಲಿ ಮಹಿಳಾ ವಾರ್ಡ್‌ನ್ ಬಾಲಕಿಯರನ್ನು ಒತ್ತಾಯಪೂರ್ವಕವಾಗಿ ರಾತ್ರಿ ವೇಳೆ ಮುರುಘಾ ಶರಣರ ಬಳಿ ಕಳಿಸುತ್ತಿದ್ದರು. ೯ ಗಂಟೆಯ ಸುಮಾರಿಗೆ ಮುರುಘಾ ಶರಣರು ವಚನ ಹೇಳಿಕೊಡುತ್ತಿದ್ದರು. ವಚನ ಮುಗಿದ ಬಳಿಕ ಚಾಕೋಲೇಟ್ ನೀಡುತ್ತಿದ್ದರು. ಅದರಲ್ಲಿ ಮತ್ತು ಬರುವ ವಸ್ತು ಸೇರಿಸಲಾಗುತ್ತಿತ್ತು.
ಚಾಕೋಲೇಟ್ ತಿಂದು ಅರಿವು ಕಳೆದುಕೊಳ್ಳುತ್ತಿದ್ದ ಬಾಲಕಿಯರ ಮೇಲೆ ಮುರುಘಾ ಶರಣರು ರಾತ್ರಿಯಿಡಿ ನಿರಂತರ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು. ಕೆಲವೊಮ್ಮೆ ಭಕ್ತರು ಮಠಕ್ಕೆ ನೀಡುವ ಹಣ್ಣುಗಳಲ್ಲೂ ಮತ್ತಿನ ಔಷಧ ಸೇರಿಸಿ ನೀಡಲಾಗುತ್ತಿತ್ತು.
ಒಂದೊಮ್ಮೆ ಮುರುಘಾ ಶರಣರ ಬಳಿ ಹೋಗಲು ಒಪ್ಪದಿದ್ದರೆ ಬಾಲಕಿಯರಿಗೆ ಮಹಿಳಾ ವಾರ್ಡನ್ ಧಮಕಿ ಹಾಕುತ್ತಿದ್ದರು ಎಂದು ಸಂತ್ರಸ್ತ ಬಾಲಕಿಯರು ಹೇಳಿಕೆ ನೀಡಿದ್ದಾರೆ. ಪರಿಶಿಷ್ಟ ಜಾತಿಗೆ ಸೇರಿದ ಬಾಲಕಿಯರ ಮೇಲೂ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ತಿಳಿಸಿದ್ದಾರೆ.
ಮುರುಘಾ ಶರಣರ ವಿರುದ್ಧ ದಾಖಲಿಸಲಾಗಿರುವ ಪ್ರಕರಣದ ತನಿಖೆ ಬಹುತೇಕ ಮುಕ್ತಾಯವಾಗಿದೆ. ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಮುರುಘಾ ಶರಣರು, ವಾರ್ಡನ್ ರಶ್ಮಿ ಮತ್ತು ಪರಮಶಿವಯ್ಯ ಮೇಲಿನ ಆರೋಪ ದೃಢಪಟ್ಟಿದೆ ಎಂದು ಎಸ್‌ಪಿ ಕೆ. ಪರಶುರಾಮ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇನ್ನು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಮಠದ ಉತ್ತರಾಧಿಕಾರಿ ಬಸವಾದಿತ್ಯ, ಹಾಗೂ ವಕೀಲ ಗಂಗಾಧರ ಅವರ ವಿರುದ್ಧ ಇನ್ನೂ ಸಾಕ್ಷಿಗಳು ಲಭ್ಯವಾಗಿಲ್ಲ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಎರಡನೇ ಪ್ರಕರಣದ ತನಿಖೆ
ಇನ್ನು, ಮುರುಘಾ ಶರಣರ ವಿರುದ್ಧದ ೨ನೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮುರುಘಾ ಶರಣರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಒಡನಾಡಿ ಸಂಸ್ಥೆಯವರನ್ನು ಕರೆಸಿ ಸಂತ್ರಸ್ತ ಬಾಲಕಿಯ ಮಾಹಿತಿ ಕೇಳಿದ್ದೇವೆ. ಕೆಲ ಮಾಹಿತಿಯನ್ನು ಅವರು ನೀಡಿದ್ದಾರೆ. ಮಾಹಿತಿ ಆಧಾರದಲ್ಲಿ ತನಿಖೆಗೆ ತೆರಳಿದಾಗ ಸಂತ್ರಸ್ತ ಬಾಲಕಿ ಸ್ಥಳದಲ್ಲಿ ಇರಲಿಲ್ಲ. ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದರೆ ದೂರು ನೀಡಬಹುದು ಎಂದು ಎಸ್‌ಪಿ ತಿಳಿಸಿದ್ದಾರೆ.
ಇನ್ನು, ಮೊದಲ ಪ್ರಕರಣದ ಸಂತ್ರಸ್ತ ಬಾಲಕಿಯರು, ಓರ್ವ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಕೊಲೆ ಮಾಡಲಾಗಿದೆ ಎಂದಿದ್ದರು. ಆದರೆ ಬಾಲಕಿಯ ಪೋಷಕರು ಆಕೆ ಆಂಧ್ರಪ್ರದೇಶದಲ್ಲಿ ರೈಲಿನಿಂದ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದ್ದಾಳೆ ಎಂದು ತಿಳಿಸಿದ್ದಾರೆ ಎಂದು ಎಸ್‌ಪಿ ಸ್ಪಷ್ಟನೆ ನೀಡಿದ್ದಾರೆ.
ಮುರುಘಾಶ್ರೀ ಇಷ್ಟು ಕೆಳಮಟ್ಟಕ್ಕೆ ಇಳಿತಾರೆ ಅಂದುಕೊಂಡಿರಲಿಲ್ಲ, ತಕ್ಕ ಶಿಕ್ಷೆಯಾಗಬೇಕು ಎಂದ ಮಾಜಿ ಸಿಎಂ ಯದಿಯೂರಪ್ಪ
https://pragati.taskdun.com/politics/murughashreepocso-caseb-s-yedyurappareaction/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ