Kannada NewsKarnataka NewsLatest

ವಿತಾವಿಯಿಂದ ಬೆಳಗಾವಿ ಜಿಲ್ಲೆಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿಯ ಪ್ರಸಾರಾಂಗ ವಿಭಾಗದಿಂದ 2022-23 ನೇ ಸಾಲಿನ 67 ನೇ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದ ಬೆಳಗಾವಿ ಜಿಲ್ಲೆಯ 5 ಜನ ಮಹನೀಯರನ್ನು ಸನ್ಮಾನಿಸಲಾಯಿತು.

ಚಿಕ್ಕೋಡಿ ತಾಲೂಕಿನ ಜಾಗನೂರ ಗ್ರಾಮದ ಹಣಮಂತ ಬಾ. ಹುಕ್ಕೇರಿ ಇವರಿಗೆ ಶಿಲ್ಪಕಲಾ ವಿಭಾಗದಲ್ಲಿ, ಗೋಕಾಕ ತಾಲೂಕಿನ ಶಿಂಧಿಕುರಬೇಟ ಗ್ರಾಮದ  ಅಶೋಕಬಾಬು ನೀಲಗಾರ ಹಾಗೂ ಬೆಳಗಾವಿಯ  ಶಂಕರ. ಬುಚಡಿ ಇವರಿಗೆ ಸಾಹಿತ್ಯ ಕ್ಷೇತ್ರದಲ್ಲಿ, ರಾಘವೇಂದ್ರ ಅಣ್ವೇಕರ ಇವರಿಗೆ ಕ್ರೀಡಾ ವಿಭಾಗದಲ್ಲಿ ಹಾಗೂ ಅರವಿಂದ ಪಾಟೀಲ್ ಅವರಿಗೆ ಹೊರನಾಡು ವಿಭಾಗದಲ್ಲಿ ಕರ್ನಾಟಕ ಸರ್ಕಾರವು ನವೆಂಬರ್ 1 ರಂದು ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು.  ಬೆಳಗಾವಿ ಜಿಲ್ಲೆಯವರಾದ ಈ ಐವರನ್ನು ವಿಶ್ವವಿದ್ಯಾಲಯದಲ್ಲಿ ಸನ್ಮಾನಿಸಲಾಯಿತು.

ವಿಶ್ವವಿದ್ಯಾಲಯದ ಪ್ರಭಾರಿ ಕುಲಸಚಿವರು ಹಾಗೂ ಪರೀಕ್ಷಾಂಗ ವಿಭಾಗದ ಕುಲಸಚಿವರಾದ ಡಾ.ಬಿ.ಈ. ರಂಗಸ್ವಾಮಿ ಸರ್ವರನ್ನು ಆತ್ಮೀಯವಾಗಿ ಸ್ವಾಗತಿಸಿ ಕಾರ್ಯಕ್ರಮದ ಕುರಿತು ಮಾತನಾಡಿದರು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವಿದ್ಯಾಶಂಕರ ಎಸ್ ಅವರು ಪ್ರಶಸ್ತಿ ಪುರಸ್ಕೃತರನ್ನು ವಿಶ್ವವಿದ್ಯಾಲಯದ ಪರವಾಗಿ ಸನ್ಮಾನಿಸಿ ಮಾತನಾಡಿ, ಪ್ರಶಸ್ತಿ ಪಡೆದಿರುವ ಎಲ್ಲರೂ ಅವರವರ ವಿಭಾಗದಲ್ಲಿ ಬಹಳಷ್ಟು ಶ್ರಮವಹಿಸಿ ಸಾಧನೆಗೈದವರಾಗಿದ್ದಾರೆ. ಇಂದು ಕರ್ನಾಟಕ ಹಾಗೂ ಕರ್ನಾಟಕದಲ್ಲಿನ ಬೆಂಗಳೂರು ವಿಶ್ವದ ಭೂಪಟದಲ್ಲಿ ಬೆರಳಿಟ್ಟು ಗುರುತಿಸುವಂತಹ ಸ್ಥಾನವಾಗಿ ಬೆಳೆದಿದೆ. ಈ ಬೆಳವಣಿಗೆಯ ಹಿಂದೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕೊಡುಗೆಯು ಸಹ ಇದೆ. ಇಡೀ ರಾಷ್ಟ್ರಕ್ಕೆ ಎಂಜಿನಿಯರಗಳನ್ನು ಒದಗಿಸಿಕೊಟ್ಟ ಹೆಮ್ಮೆ ವಿಶ್ವವಿದ್ಯಾಲಯದ್ದಾಗಿದೆ. ಇದೆ ಸಂದರ್ಭದಲ್ಲಿ ವಿಶ್ವವಿದ್ಯಾಲಯ ತನ್ನ 25 ನೇ ವರ್ಷದ ರಜತ ಮಹೋತ್ಸವ ಕೂಡ ಆಚರಿಸುತ್ತಿದೆ. ಈ 25 ವರ್ಷಗಳಲ್ಲಿ ಇಡೀ ರಾಷ್ಟ್ರ ಕಟ್ಟುವಲ್ಲಿ ಈ ದೇಶಕ್ಕೆ ಎಂಜಿನಿಯರಗಳನ್ನು ನೀಡಿದ್ದು ಈ ವಿಶ್ವವಿದ್ಯಾಲಯದ ಹೆಮ್ಮೆ, ಪ್ರಸ್ತುತ ಸಭೆಯಲ್ಲಿ ಸನ್ಮಾನಿತರಾದ ಅರವಿಂದ ಪಾಟೀಲ್ ಅವರು ಕೂಡ ಇದೇ ವಿಶ್ವದ್ಯಾಲಯದಿಂದ ಎಂಜಿನಿಯರಿಂಗ್ ಪದವಿ ಪಡೆದಿರುವ ವಿಷಯ ನೆನಪಿಸಿಕೊಂಡರು.

ಡಾ.ಸಿ.ಕೆ ಸುಬ್ಬರಾಯ ಅವರು ಪ್ರಶಸ್ತಿ ವಿಜೇತರ ಸೇವೆಯನ್ನು ಶ್ಲಾಘಿಸುತ್ತ ವಿತಾವಿ ಸಾಧನೆ ಇನ್ನೂ ಹೀಗೆ ಬೆಳೆಯಲಿ ಎಂದು ಆಶಿಸಿದರು. ಪ್ರಸಾರಾಂಗದ ನಿರ್ದೇಶಕ  ಡಾ. ಮಹಾಂತೇಶ ಎನ್. ಬಿರ್ಜೆ ಅವರು ಸಮಾರಂಭ ಆಯೋಜನೆ ಉದ್ದೇಶದ ಕುರಿತು ಮಾತನಾಡಿದರು. ಹಣಕಾಸು ಅಧಿಕಾರಿ ಎಂ.ಎ.ಸ್ವಪ್ನಾ ವಂದಿಸಿದರು. ಡಾ. ಶಾಂತಾ ಪೋರಾಪುರ ನಿರೂಪಿಸಿದರು.

ಕಾರ್ಯಕ್ರಮದ ತರುವಾಯ  ಧಾರವಾಡ ತಂಡದಿಂದ “ಜಯ ಭಾರತ ಜನನಿಯ ತನುಜಾತೆ” ಗೀತಕಥನ ಹಾಗೂ ನೃತ್ಯ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸಹ ಮನರಂಜನಾ ಕಾರ್ಯಕ್ರಮಗಳನ್ನು ನೀಡಿ ಎಲ್ಲರ ಗಮನ ಸೆಳೆದರು.

ರಾಷ್ಟ್ರೀಯ ಮಟ್ಟದ ಎನ್ ಸಿ ಸಿ ಶಿಬಿರದಲ್ಲಿ ಬೆಳಗಾವಿಯ ಕೆಡೆಟ್ ಅನುದೀಪ್ ಕುಲಕರ್ಣಿಗೆ ಕಂಚಿನ ಪದಕ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button