ಚುನಾವಣೆಗಳ ಹಣೆಬರಹ ಮತ್ತು ರಾಜಕೀಯ ಸ್ಥಿತಿ-ಗತಿ

-ರವಿ ಕರಣಂ

ಹಿಮಾಚಲ ಪ್ರದೇಶದಲ್ಲಿ ‘ಭಾರತೀಯ ಜನತಾ  ಪಾರ್ಟಿ’ ಇನ್ನಿಲ್ಲದಂತೆ ನೆಲಕಚ್ಚಿದೆ. ಅದಕ್ಕೆ ಕಾರಣಗಳು,ಇವರು ಮಾಡಿಕೊಂಡ ಎಡವಟ್ಟುಗಳು ಏನೆಂಬುದನ್ನು ಅರ್ಥಮಾಡಿಕೊಂಡಲ್ಲಿ ಮಾತ್ರ ಅಲ್ಪ ಸ್ವಲ್ಪ ಉಸಿರನ್ನು ಕರ್ನಾಟಕದಲ್ಲಿ ಉಳಿಸಿಕೊಳ್ಳಬಹುದು. ಇಲ್ಲವಾದರೆ ಇಲ್ಲಿಯ ಕಥೆಯೂ ಅಷ್ಟೇ. ಇದು ಎಚ್ಚರಿಕೆಯ ಮೊದಲ ಸಂದೇಶದ ರವಾನೆ !

ಹಿಮಾಚಲ ಪ್ರದೇಶ ವಿಚಿತ್ತ ಮತ್ತು ವಿವೇಚನಾಯುಕ್ತ ಫಲಿತಾಂಶ ನೀಡಿದೆ ಎಂದರೆ ತಪ್ಪಿಲ್ಲ ಬಿಡಿ. ಹರಿಯುವ ನದಿಗೆ,ಓಡುವ ಕುದುರೆಗೆ ಒಂದು ವಿಶ್ರಾಂತ ನೆಲೆ ಬೇಕೇ ಬೇಕಲ್ಲವೇ ? ಹಾಗೆಯೇ ಇದೂ ಕೂಡಾ. ನಾವು ಇಪ್ಪತ್ತು ವರ್ಷ ಇದ್ದೇ ಬಿಡ್ತೇವೆ ಎಂಬ ಜಪದ ಮಂತ್ರಕ್ಕೆ, ಜನತೆ ಪ್ರತಿ ತಂತ್ರ ಹೆಣೆಯುತ್ತಾರೆಂಬುದು ಮನವರಿಕೆ ಮಾಡಿ ಕೊಟ್ಟಿದೆ. ಇದನ್ನು ಸರಳವಾಗಿ ತೆಗೆದುಕೊಳ್ಳಬಾರದು. ಹಿಮಾಚಲಕ್ಕಿಂತಲೂ ಗುಜರಾತ್ ದೊಡ್ಡ ರಾಜ್ಯ ವಶವಾಯಿತಲ್ಲ ಇದೇನು ಕೈತಪ್ಪಿದರೆ ನಷ್ಟವಿಲ್ಲ ಎಂದು ಉದಾಸೀನ ಮಾಡಿದರೆ ಪರಿಣಾಮ ವಿಪರೀತವಾದೀತು. ಕಾರಣ ಒಂದು ಸಣ್ಣ ರಾಜ್ಯವನ್ನು ಗೆಲ್ಲಲಾಗದ ಮೇಲೆ ದೊಡ್ಡ ರಾಜ್ಯಗಳನ್ನು ಗೆಲ್ಲಲಾದೀತೇ?

ಗುಜರಾತ್ ನಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದ ಹಿನ್ನೆಲೆ :

ಗುಜರಾತ್ ನಲ್ಲಿ ಬಿಜೆಪಿಗೆ ಮಣೆ ಹಾಕಲು ಕಾರಣ ಪ್ರಧಾನ ಮಂತ್ರಿ ನರೇಂದ್ರ ಮೋದಿ. ಸ್ವತಃ ತಮ್ಮ ರಾಜ್ಯದಿಂದ ಸತತವಾಗಿ ಎrಡನೇ ಬಾರಿಗೆ ಭಾರತದ ಪ್ರಧಾನ ಮಂತ್ರಿಯಾಗಿ ಅಧಿಕಾರ ಹಿಡಿದಿರುವುದಲ್ಲದೇ ಹಲವು ಲಾಭದಾಯಕ ಕೆಲಸಗಳನ್ನು ಮಾಡಿಕೊಟ್ಟಿರುವುದು ಮತ್ತೆ ಅಧಿಕಾರಕ್ಕೆ ಬರಲು ಕಾರಣವಾಗಿದೆ. ಅಲ್ಲಿ ಅಭಿವೃದ್ಧಿ ಕಾರ್ಯಗಳು ಆಗಿಲ್ಲವೆಂದಲ್ಲ. ಕೆಲವು ಕ್ಷೇತ್ರಗಳಲ್ಲಿ ಗಮನಾರ್ಹ ಅಭಿವೃದ್ಧಿಯಾಗಿವೆ.
ಜೊತೆಗೆ ಮುಖ್ಯಮಂತ್ರಿಯವರ ವರ್ಚಸ್ಸು ಕೆಲಸ ಮಾಡಿದೆ. ಮತ್ತು ಮಾಧ್ಯಮಗಳು ಸಾಕಷ್ಟು ಬಿಜೆಪಿ ಪರ ಪ್ರಚಾರ ಮಾಡಿದ್ದೂ ಕಾರಣವಿದೆ. ಡಬಲ್ ಇಂಜಿನ್ ನಿಂದ ಅಭಿವೃದ್ಧಿಗೆ ಸಹಾಯಕವಾಗಲಿವೆ ಎಂಬ ಮಾತು ಅಲ್ಲಿಯ ಜನಕ್ಕೆ ನಂಬಿಕೆ ತಂದಿರಲೂ ಬಹುದು.

ಅಂತೂ ಇಂತೂ ಕಾಂಗ್ರೆಸ್ ನ ಗಾಳಿ ಬೀಸದಂತೆ ತಡೆದಿರುವುದು ಸತ್ಯ. ಈ ಮಧ್ಯೆ ಅರವಿಂದ್ ಕೇಜ್ರಿವಾಲ್ ರ AAP ಪಾರ್ಟಿ ಹೆಜ್ಜೆಯಿಟ್ಟಿದ್ದು, ಪುಕ್ಕಟೆ ಕೊಡುವ ಯೋಜನೆಗಳ ಪಟ್ಟಿಯನ್ನು ಸಾರಾಸಗಟಾಗಿ ಜನ ತಿರಸ್ಕರಿಸಿದ್ದಾರೆ. ಬಂದ ದಾರಿಗೆ ಸುಂಕವಿಲ್ಲವೆಂದುಕೊಂಡು ಸುಮ್ಮನಾಗಿದ್ದಾರೆ. ಈಗ ಅಧಿಕಾರ ಹಿಡಿಯಲಿರುವ ಬಿಜೆಪಿ ಗುಜರಾತ್ ನಲ್ಲಿ ಗಟ್ಟಿ ಬೇರಿದೆ ಎಂಬುದನ್ನು ತೋರಿಸಲೆತ್ನಿಸಿದೆ.

ಕರ್ನಾಟಕದ ರಾಜಕೀಯ ಸಂಪೂರ್ಣ ಬದಲಾವಣೆ ಸಾಧ್ಯತೆ:

ಕರ್ನಾಟಕ ಯಾವತ್ತೂ ವಿಚಿತ್ರ ಮತ್ತು ಸಮಯೋಚಿತ ಫಲಿತಾಂಶಗಳನ್ನು ನೀಡಿದ್ದಿದೆ. ಕಳೆದ ಮೂರು ದಶಕಗಳ ಇತಿಹಾಸ ನೋಡಿ ಬಿಟ್ಟರೆ, ಇಲ್ಲಿಯ ಜನ ಕೈಗೊಂಡ ನಿರ್ಧಾರಗಳು ಕೆಲವೊಮ್ಮೆ ಒಳಿತು. ಮತ್ತೊಮ್ಮೆ ಅತಂತ್ರ ಸ್ಥಿತಿ ನಿರ್ಮಾಣ. ಮಗದೊಮ್ಮೆ ರಾಷ್ಟ್ರಪತಿ ಆಡಳಿಕ್ಕೂ ಅವಕಾಶ ಮಾಡಿಕೊಟ್ಟಿದಿದೆ.

ಬಂಗಾರಪ್ಪನವರು ಆರೋಪ ಹೊತ್ತು ಕೆಳಗಿಳಿದ ನಂತರ ವೀರಪ್ಪ ಮೊಯಿಲಿ,ಅವರ ನಂತರ ದೇವೇಗೌಡ ಅಧಿಕಾರಕ್ಕೆ ಬಂದು, ಪ್ರಧಾನಮಂತ್ರಿಯಾಗಿ ಹೋದರು. ಜೆ ಹೆಚ್ ಪಟೇಲ್ ಕರ್ನಾಟಕದಲ್ಲಿ ಮುನ್ನಡೆಸಿದರು. ನಂತರದಲ್ಲಿ ಎಸ್ಎಂ ಕೃಷ್ಣ. ಆನಂತರದಲ್ಲಿ ಅತಂತ್ರ ಸ್ಥಿತಿಯಲ್ಲಿ ಧರ್ಮಸಿಂಗ್ ಕಾಂಗ್ರೆಸ್ ಜನತಾದಳದ ಮೈತ್ರಿಯ ಮುಖ್ಯಮಂತ್ರಿಯಾದರು. ಆನಂತರ ಅವರ ಸರ್ಕಾರವನ್ನು ಕೆಡವಿ ಕುಮಾರಸ್ವಾಮಿ ಅವರು ಬಂದರು. ನಂತರ ನಡೆದದ್ದೇ ಬಿಜೆಪಿಯ ಹಾದಿಯನ್ನು ಸುಗಮಗೊಳಿಸಿತು. ನಡುವೆ ರಾಷ್ಟ್ರಪತಿ ಆಡಳಿತ, ನಂತರ ಮುಖ್ಯಮಂತ್ರಿ ಯಡಿಯೂರಪ್ಪ. ಅವರ ಮೇಲಿನ ಭ್ರಷ್ಟಾಚಾರ ಆರೋಪಗಳು ಅವರ ಕಾರ್ಯಯೋಜನೆಗಳು ಆಡಳಿತ ವಿರೋಧಿ ಅಲೆಯನ್ನು ಮಾಡಿತು. ಸದಾನಂದ ಗೌಡ, ಜಗದೀಶ ಶೆಟ್ಟರ್ ಒಂದೊಂದು ವರ್ಷ ಅಧಿಕಾರ ನಡೆಸಿದರು.ನಂತರದ ಚುನಾವಣೆಯಲ್ಲಿ ಬದಲಾವಣೆ. ಆಗ ಸಿದ್ದರಾಮಯ್ಯ ಸಂಪೂರ್ಣ ಬಹುಮತದೊಂದಿಗೆ ಐದು ವರ್ಷ ಪೂರೈಸಿದ್ದು ದಾಖಲೆಯಾಯಿತು. ಅದಾದ ಮೇಲಿನ ಚುನಾವಣೆಯೂ ಅತಂತ್ರವೇ. ಆಗ ಜನತಾದಳ ಕಾಂಗ್ರೆಸ್ ಮೈತ್ರಿಯ ಮುಖ್ಯಮಂತ್ರಿ ಕುಮಾರಸ್ವಾಮಿ, ಆನಂತರದಲ್ಲಿ ಅವರನ್ನು ಕೆಳಗಿಳಿಸಿ ಬಿಜೆಪಿಯನ್ನು 17 ಮಂದಿಯ ತಂಡ ಅಧಿಕಾರಕ್ಕೆ ತಂದಿತು. ಇಲ್ಲಿಯ ತನಕ ನಡೆದುಕೊಂಡು ಬಂದಿದೆ. ಇದು ಸ್ಥಿರತೆ ಕಾಣದ ಪಕ್ಷಗಳ ಹಣೆಬರೆಹ.

ಎಷ್ಟೇ ಭ್ರಷ್ಟಾಚಾರ ಆರೋಪ ಹೊತ್ತಿದ್ದರೂ ಬಿಜೆಪಿಯ ಜನಪ್ರಿಯ ನಾಯಕ ಯಡಿಯೂರಪ್ಪನವರನ್ನು ವಯೋಮಾನದ ಕಾರಣವೊಡ್ಡಿ ಮೂಲೆಗುಂಪು ಮಾಡ ಹೊರಟಿರುವುದು ಇದೀಗ ಅವರ ಪಕ್ಷಕ್ಕೆ ದೊಡ್ಡ ಮುಳ್ಳಾಗಲಿದೆ. ಮೇಲ್ನೋಟಕ್ಕೆ ಅವರು ನಾನು 150 ಸೀಟುಗಳನ್ನು ಗೆಲ್ಲಿಸಿ ಕೊಡುತ್ತೇನೆ, ಇಡೀ ರಾಜ್ಯದ್ಯಂತ ಓಡಾಡಿ, ನಾನು ಬಿ ಜೆ ಪಿ ಯನ್ನು ಅಧಿಕಾರಕ್ಕೆ ತರುತ್ತೇನೆ ಎಂದು ಮೇಲೆ ಮಾತಿಗೆ ಹೇಳುತ್ತಾರಾದರೂ ಕೂಡ ಒಳ ಮನಸ್ಸಿನಲ್ಲಿ ಅವರಿಗಿರುವ ವೇದನೆ ಮತ್ತೊಬ್ಬರಿಗೆ ಕಾಣಲಿಕ್ಕಿಲ್ಲ.ಅವರು ಅಧಿಕಾರ ಪ್ರಿಯರು. ಅದಕ್ಕೆಂದೇ ಆಪರೇಷನ್ ಕಮಲದ ತಂತ್ರವನ್ನು ಪ್ರಯೋಗ ಮಾಡಿ ಯಶಸ್ವಿಯಾದವರು. ಅವರು ಒಳಗೊಳಗೆ ಏನು ಮಾಡಬಹುದು ಗೊತ್ತಿಲ್ಲ.

ಮುಂದಿನ ದಿನಗಳಲ್ಲಿಯಾದರೂ ತಮ್ಮ ಮಗನನ್ನು ಉತ್ತರಾಧಿಕಾರಿಯಾಗಿ ಕುರ್ಚಿಯ ಮೇಲೆ ಕುಳ್ಳಿರಿಸಲು ಸಾಕಷ್ಟು ಹರಸಾಹಸ ಪ್ರಯತ್ನವನ್ನು ಮಾಡಬಹುದೇನೋ, ಆದರೆ ಇಲ್ಲಿರುವ ನಾಯಕರುಗಳು ತಾ ಮುಂದು ನೀ ಮುಂದು ಎಂದು ಅಧಿಕಾರಕ್ಕಾಗಿ ಹಂಬಲಿಸುವವರ ದೊಡ್ಡ ಸಂಖ್ಯೆಯೇ ಬೆಳೆದಿದೆ. ಇಲ್ಲಿ ಲಿಂಗಾಯತ, ಒಕ್ಕಲಿಗ,ಕುರುಬ ಮತಗಳ ಮೇಲೆ ಅತಿಹೆಚ್ಚಿನ ಭರವಸೆಯನ್ನು ಇಟ್ಟುಕೊಂಡಿರುವುದು ಒಂದು ಇದೆ. ಆದರೆ ಕುರುಬರ  ನಾಯಕನಾಗಿ ಅಲ್ಲದೇ ಅಹಿಂದ ಮತಗಳ ಕಬಳಿಕೆಯ ರೂವಾರಿಯಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದೊಂದು ದಿನ ಅಧಿಕಾರ ಹಿಡಿದರೂ ಅಚ್ಚರಿಯಿಲ್ಲ.

ಯಡಿಯೂರಪ್ಪನವರಿಗೆ ಸಿದ್ದರಾಮಯ್ಯರನ್ನು ಎದುರಿಸುವುದೇ ದೊಡ್ಡ ತಲೆನೋವಿನ ಸಂಗತಿಯಾಗಿದೆ. ಮೊನ್ನೆ ಮೊನ್ನೆ ಅವರು ದಾವಣಗೆರೆಯಲ್ಲಿ ನಡೆಸಿದ ಸಮಾವೇಶದಲ್ಲಿ (ಅವರ ಹುಟ್ಟು ಹಬ್ಬದ ನೆಪವನ್ನು ಒಡ್ಡಿ) ರಾಜಕೀಯ ಶಕ್ತಿಯ ಪ್ರದರ್ಶನವೇ ಆಗಿತ್ತು. ಈ ಮೂಲಕ ಅವರೇ ನಿರೀಕ್ಷಿಸದಷ್ಟು ಜನ ಅಲ್ಲಿ ಸೇರಿದ್ದು ಕಂಡುಬಂದಿದೆ.  ಇನ್ನು ಅವರ ವರ್ಚಸ್ಸನ್ನು ಕಡಿಮೆ ಮಾಡ ಹೊರಟರೂ ಕೂಡ ಅದು ಸಾಧ್ಯವಾಗುತ್ತಿಲ್ಲ. ಇವರು ತಮ್ಮ ಅಧಿಕಾರವನ್ನು ಉಳಿಸಿಕೊಳ್ಳುವುದರಲ್ಲಿ ತಿಪ್ಪರಲಾಗ ಹಾಕಬೇಕಾಗಿದೆ. ಅದರಲ್ಲೂ ಜಾರಕಿಹೊಳಿ ಸಹೋದರರ ಹಿಂದಿನ ಸಣ್ಣ ಮುನಿಸು ಕೂಡ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಅವರನ್ನು ಸಂತೈಸುವುದು ಮತ್ತೆ ಸಚಿವ ಸ್ಥಾನದ ಮೇಲೆ ಕುಳ್ಳಿರಿಸುವುದು ಅವರಿಂದಾಗದ ಕೆಲಸವಾಗಿದೆ. ಅವರ ಮೇಲಿದ್ದ ಸಿಡಿ ಪ್ರಕರಣ ಅವರನ್ನು ಕುರ್ಚಿಯ ಮೇಲೆ ತರಲು ಮುಜುಗರ ತರುತ್ತಿದೆ ಎಂಬುದು ಮಾಧ್ಯಮಗಳ ಪುಕಾರು.

ಜನತಾದಳದ ಗೋಲಿಯಾಟ :

ಇನ್ನು ಜನತಾದಳ ಪಕ್ಷವೂ ಮೈಕೊಡವಿ ನಾವು ಅಧಿಕಾರಕ್ಕೆ ಬಂದೇ ಬಿಡುತ್ತೇವೆ ಎಂಬ ಉತ್ಸಾಹದಿಂದ, ಅವರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಜನರ ಮನಸ್ಸನ್ನು ಸೆಳೆಯುವ ಪ್ರಯತ್ನ ಮಾಡುತ್ತಿದೆ ಅದೇನಿದ್ದರೂ ಕೂಡ ಕೇವಲ ಒಕ್ಕಲಿಗರ ಸಂಖ್ಯೆ ಇರುವಲ್ಲಿ ಮಾತ್ರ ಅವರ ಯೋಜನೆಗಳು ಪೂರ್ಣಗೊಳ್ಳಬಹುದೇನೋ? ಸಿಎಂ ಇಬ್ರಾಹಿಂ ಬಂದ ಮೇಲೆ ಒಂದು ಕೋಟಿ ಮುಸ್ಲಿಮರು ನಮ್ಮ ಜೊತೆಗಿದ್ದಾರೆ ಎಂಬ ಸಂದೇಶವನ್ನು ಹೊರಹಾಕುತ್ತಾ ಇದ್ದಾರೆ. ಆದರೆ ಅವರ ತಾಳಕ್ಕೆ ತಕ್ಕಂತೆ ಮುಸ್ಲಿಮರು ಕುಣಿಯುವುದಿಲ್ಲ. ಅವರದ್ದೇ ಆದ ಒಂದು ನೆಲೆಗಟ್ಟು ಇದೆ. ಅಲ್ಲದೆ ಜನತಾದಳಕ್ಕಿರುವ ದೊಡ್ಡ ಕಳಂಕದ ಟ್ಯಾಗ್ ಲೈನ್ ಏನೆಂದರೆ “ಕುಟುಂಬದ ಎಲ್ಲಾ ಸದಸ್ಯರು ಪಕ್ಷದಲ್ಲಿ ಕೈಯಾಡಿಸುತ್ತಿರುವುದು”.

ಇಬ್ಬರ ಜಗಳ ಮೂರನೆಯವನಿಗೆ ಲಾಭ ಎನ್ನುವುದನ್ನು ಅಚ್ಚುಕಟ್ಟಾಗಿ ಪಡೆದುಕೊಂಡಿರುವುದೆಂದರೆ ಅದು ಕೇವಲ ಜನತಾದಳ ಮಾತ್ರ. ಎರೆಡು ಬಾರಿ ಸಾಕ್ಷಿಯಾಗಿದೆ.

ಹೀಗೆ ಎಲ್ಲವನ್ನೂ ನೋಡಿದರೆ ಚುನಾವಣಾ ಫಲಿತಾಂಶ ಮೂರಾಬಟ್ಟೆಯಾಗಿ ಹೋಗುವುದರಲ್ಲಿ ಸಂದೇಹವೇ ಇಲ್ಲ. ಯಾವ ಪಕ್ಷವೂ ಸ್ಪಷ್ಟ ಬಹುಮತವನ್ನು ಪಡೆಯುವುದಿಲ್ಲ. ಎಷ್ಟೇ ಹಣ ಖರ್ಚು ಮಾಡಿದರೂ, ಏನೇ ಮಾಧ್ಯಮಗಳ ಅಬ್ಬರದ ಪ್ರಚಾರವಿದ್ದರೂ, ಮತದಾರರಲ್ಲಿ ಅಸಂತೋಷ ಉಂಟಾಗಿರುವುದಂತೂ ಸ್ಪಷ್ಟವಾಗಿ ಕಂಡಿದೆ. ಇವರು ಕೂಡ ಆಳ್ವಿಕೆ ಮಾಡಲು ಯೋಗ್ಯರಲ್ಲ ಎಂಬುದನ್ನು ತೋರಿಸಿಕೊಟ್ಟಿದೆ. ಜನಪ್ರಿಯ ಕಾರ್ಯಕ್ರಮಗಳೇ ಇಲ್ಲ. ಸಾಧಾರಣ ಸರಕಾರವಾಗಿದೆ ಎಂಬುದು ಮತದಾರರ ಅಳಲು. ಹೀಗಾಗಿ ಬೇರೆ ಬೇರೆ ರಾಜ್ಯಗಳ ಚುನಾವಣೆಯ ಫಲಿತಾಂಶ ನಮ್ಮ ಮೇಲೆ ಆಗುವುದಿಲ್ಲ ಎಂಬ ಮಾತು ಸುಳ್ಳಾಗುತ್ತದೆ.

ಸಾರ್ವಜನಿಕವಾಗಿ ಮರಣ ದಂಡನೆ ಕ್ರಮ ಸಮರ್ಥಿಸಿಕೊಂಡ ತಾಲಿಬಾನ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button