ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆಯ ನಂತರ ಆಮ್ ಆದ್ಮಿ ಪಾರ್ಟಿ ‘ರಾಷ್ಟ್ರೀಯ ಪಕ್ಷ’ದ ಸ್ಥಾನಮಾನ ಗಿಟ್ಟಿಸಿದೆ. ದೇಶದಲ್ಲಿ ಅದೆಷ್ಟೋ ಪಕ್ಷಗಳು ಸ್ಥಳೀಯ ಮಟ್ಟದಲ್ಲೇ ಏದುಸಿರು ಬಿಡುತ್ತಿವೆ. ಇಂಥ ಸಂದರ್ಭದಲ್ಲಿ ‘ಪೊರಕೆ’ಯನ್ನೇ ಚಿಹ್ನೆಯಾಗಿಸಿಕೊಂಡು ದೇಶದ ದೈತ್ಯ ರಾಜಕೀಯ ಶಕ್ತಿಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಗೆ ಸೆಡ್ಡು ಹೊಡೆದು ನಿಂತು ತೃತೀಯ ಶಕ್ತಿಯ ಸ್ಥಾನ ಆಕ್ರಮಿಸಿಕೊಳ್ಳುವುದಲ್ಲದೆ ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನೂ ಅಲಂಕರಿಸಿದ ಆಪ್ ದಾಪುಗಾಲುಗಳ ಅವಲೋಕನ ಇಲ್ಲಿದೆ.
ಸ್ವಾತಂತ್ರ್ಯಾ ನಂತರ ಕಾಂಗ್ರೆಸ್ ಹಲವು ದಶಕಗಳ ಕಾಲ ತನ್ನ ಏಕಮೇವ ಪ್ರಾಬಲ್ಯ ಮೆರೆದಿದ್ದು ಈಗ ಇತಿಹಾಸ. ಇದಕ್ಕೆ ಸೆಡ್ಡು ಹೊಡೆದು ನಿಂತು ಜನಸಂಘದ ತಳಹದಿಯಿಂದ ಭಾರತೀಯ ಜನತಾ ಪಾರ್ಟಿಯಾಗಿ ಪರಿವರ್ತನೆಗೊಂಡು 90ರ ದಶಕದ ನಂತರ ಚೇತರಿಸಿಕೊಳ್ಳುತ್ತ ಇಂದು ಪ್ರಬಲಾತಿಪ್ರಬಲ ಶಕ್ತಿಯಾಗಿ ಹೊರಹೊಮ್ಮಿದೆ. ಈ ಹಿಂದೆ ಕಾಂಗ್ರೆಸ್ ಪ್ರಾಬಲ್ಯ ಯಾವ ಮಟ್ಟದಲ್ಲಿತ್ತೋ, ಬಿಜೆಪಿ ಇಂದು ಅದೇ ಪ್ರಾಬಲ್ಯವನ್ನು ಕಸಿದುಕೊಂಡಿದೆ ಎಂದರೆ ಅತಿಶಯೋಕ್ತಿಯಲ್ಲ.
ಜಾತಿ, ಧರ್ಮ, ಪ್ರಾಂತ್ಯ, ರಾಷ್ಟ್ರೀಯತೆ ಎಲ್ಲವುಗಳು ಇಂದು ರಾಜಕೀಯದ ಪ್ರಬಲ ಅಸ್ತ್ರಗಳಾಗಿವೆ. ಇವುಗಳನ್ನು ನೇರವಾಗಿ ಬಳಸುವಲ್ಲಿ ಕೈ- ಕಮಲ ಪಕ್ಷಗಳೆರಡೂ ಹಿಂದೆ ಬಿದ್ದಿಲ್ಲ. ಇವೆಲ್ಲದರಿಂದ ಹೊರತಾಗಿ ಅಭಿವೃದ್ಧಿ, ಅನಭಿವೃದ್ಧಿಗಳ ವಿಷಯಗಳನ್ನೇ ಬಂಡವಾಳವಾಗಿಟ್ಟುಕೊಂಡು ಕತ್ತೆತ್ತಿ ನೋಡುವುದರೊಳಗೆ ಎತ್ತರಕ್ಕೆ ಬೆಳೆದ ಪಕ್ಷಗಳಲ್ಲಿ ಆಪ್ ಒಂದೆನ್ನಬಹುದು. ದೇಶಾದ್ಯಂತ ತಳಮಟ್ಟದ ಬೇರುಗಳನ್ನು ಅಗಾಧವಾಗಿ ಇರಿಸಿಕೊಂಡ ಕಾಂಗ್ರೆಸ್- ಬಿಜೆಪಿಗೆ ಇದು ಸೆಡ್ಡು ಹೊಡೆಯುವ ಪರಿ, ಅವುಗಳ ಬಿರುಗಾಳಿಯ ಮಧ್ಯೆ ಸದ್ದಿಲ್ಲದೆ ಮತಪೆಟ್ಟಿಗೆಯಲ್ಲಿ ಅಗಣಿತ ಬೆಂಬಲದ ಬುತ್ತಿ ಕಟ್ಟಿಕೊಳ್ಳುತ್ತಿರುವ ಪರಿ ವಿಶ್ಲೇಷಣೆಗಳಿಗೂ ನಿಲುಕುತ್ತಿಲ್ಲ.
ಹಾಗಿದ್ದರೆ ಆಪ್ ರಾಷ್ಟ್ರೀಯ ಪಕ್ಷವಾಗಿ ಮಾನ್ಯತೆ ಹೊಂದಲು ಬೇಕಾದ ಮಾನದಂಡಗಳು, ಅರ್ಹತೆಗಳು ಏನು? ಆಪ್ ಇದನ್ನೆಲ್ಲ ಪೂರೈಸಿದ್ದು ಹೇಗೆ? ಎಂಬುದು ಅವಲೋಕನಕ್ಕೆ ಎಡೆ ಮಾಡಿದೆ.
ರಾಷ್ಟ್ರೀಯ ಪಕ್ಷವಾಗಲು ಮಾನದಂಡಗಳೇನು:
ರಾಜಕೀಯ ಪಕ್ಷವೊಂದು ರಾಷ್ಟ್ರೀಯ ಪಕ್ಷದ ಮಾನ್ಯತೆ ಹೊಂದಲು ಅದು ರಾಷ್ಟ್ರ ಮಟ್ಟದಲ್ಲಿ ಅಸ್ತಿತ್ವ ಹೊಂದಿರಬೇಕು. ಪ್ರಾದೇಶಿಕವಾಗಿ ಹುಟ್ಟಿಕೊಂಡ ಪಕ್ಷ ಈ ಮಾನ್ಯತೆ ಪಡೆಯುವುದು ಸುಲಭ ಸಾಧ್ಯವೇನವಲ್ಲ. ಅದನ್ನು ಸಾಧಿಸಲು ಕೆಲ ಷರತ್ತುಗಳನ್ನು ಪೂರೈಸಲೇಬೇಕು. ಭಾರತದ ಚುನಾವಣಾ ಆಯೋಗದ ಪ್ರಕಾರ, ಅರ್ಹತೆಗಳ ಪಟ್ಟಿಯಲ್ಲಿ ಯಾವುದಾದರೂ ಒಂದನ್ನು ಪೂರೈಸಿದರೂ ಅಂಥ ರಾಜಕೀಯ ಪಕ್ಷವನ್ನು ‘ರಾಷ್ಟ್ರೀಯ ಪಕ್ಷ’ವೆಂಬ ಮಾನ್ಯತಾರ್ಹ. ಆ ಮಾನದಂಡಗಳು ಇಂತಿವೆ:
* ಲೋಕಸಭೆ ಅಥವಾ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಯಾವುದೇ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಶೇ. 6ರಷ್ಟು ಮತಗಳನ್ನು ಪಡೆಯಬೇಕು. ಅಥವಾ ನಾಲ್ಕು ಲೋಕಸಭಾ ಸ್ಥಾನಗಳನ್ನು ಪಡೆದಿದ್ದರೆ ಅದು ರಾಷ್ಟ್ರೀಯ ಪಕ್ಷವೆಂಬ ಮಾನ್ಯತೆ ಪಡೆಯುತ್ತದೆ.
* ಲೋಕಸಭೆ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷ ಕನಿಷ್ಠ 3 ರಾಜ್ಯಗಳಿಂದ ಸ್ಪರ್ಧಿಸಿ ಶೇ 2 ಸ್ಥಾನಗಳನ್ನು ಗೆದ್ದಿರಬೇಕು.
ಆಮ್ ಆದ್ಮಿ ಹೆಜ್ಜೆಗಳೇನು?:
2012ರಲ್ಲಿ, ಅಂದರೆ ಬರೊಬ್ಬರಿ ದಶಕದ ಹಿಂದೆ ಅರವಿಂದ ಕೇಜ್ರಿವಾಲ್ ಸಂಚಾಲಕತ್ವದಲ್ಲಿ ಹುಟ್ಟಿಕೊಂಡು ಆಪ್ ಇತ್ತೀಚೆಗೆ ನಡೆದ ಪಂಚರಾಜ್ಯ ಚುನಾವಣೆಯಲ್ಲೂ ಸ್ಪರ್ಧಿಸಿ ಪಂಜಾಬ್ನಲ್ಲಿ ಭರ್ಜರಿ ಗೆಲುವಿನೊಂದಿಗೆ ಅಧಿಕಾರಕ್ಕೇರಿತು. ಆ ಮೂಲಕ ದೇಶಾದ್ಯಂತ ಆಪ್ ಶಾಸಕರ ಸಂಖ್ಯೆ 157ಕ್ಕೇರಿತು.
ದೆಹಲಿ ವಿಧಾನಸಭೆಯಲ್ಲಿ ಶೇ 23ರಷ್ಟು ಮತ, ಪಂಜಾಬ್ ವಿಧಾನಸಭೆಯಲ್ಲಿ ಶೇ 18.3ರಷ್ಟು, ಗೋವಾ ಚುನಾವಣೆಯಲ್ಲಿ ಶೇ 0.5ರಷ್ಟು ಮತ ಗಳಿಸಿತು. 2014ರ ಲೋಕಸಭೆ ಚುನಾವಣೆಯಲ್ಲಿ ಶೇ 2.1ರಷ್ಟು, 2019ರ ಚುನಾವಣೆಯಲ್ಲಿ ಶೇ 0.4 ರಷ್ಟು ಮತ ಗಳಿಸಿತು. ಹಿಮಾಚಲಪ್ರದೇಶದಲ್ಲಿ ಶೇ.1ಕ್ಕಿಂತ ಹೆಚ್ಚಿನ ಮತಗಳಿಸಿದ್ದು, ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಶೇ 12ಕ್ಕೂ ಹೆಚ್ಚು ಮತ ಗಳಿಸಿದೆ. ಇವೆಲ್ಲ ಮಾನದಂಡಗಳನ್ನು ಸುಲಭ ಸಾಧಿಸಿ ಭಾರತೀಯ ಜನತಾ ಪಾರ್ಟಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಅಖಿಲ ಭಾರತ ತೃಣಮೂಲ ಕಾಂಗ್ರೆಸ್, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ, ಬಹುಜನ ಸಮಾಜ ಪಕ್ಷ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ) ನಂತರ 7ನೇ ರಾಷ್ಟ್ರೀಯ ಪಕ್ಷವಾಗಿ ಪಟ್ಟಿಯಲ್ಲಿ ತನ್ನ ಹೆಸರು ದಾಖಲಿಸಿದೆ.
ರಾಷ್ಟ್ರೀಯ ಪಕ್ಷದ ಮಾನ್ಯತೆಯಿಂದ ಸಿಕ್ಕಿದ್ದೇನು ?:
ರಾಷ್ಟ್ರವ್ಯಾಪಿಯಾಗಿ ತಾನು ನಾಮನಿರ್ದೇಶನ ಮಾಡಿದ ಅಭ್ಯರ್ಥಿಗೆ ತನ್ನ ಮೀಸಲು ಚಿಹ್ನೆ ನೀಡುವ ಹಕ್ಕು ಪಡೆದಿದೆ. ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಪ್ರಸಾರದ ಹಕ್ಕು ಹೊಂದಿದೆ. ಸಾರ್ವತ್ರಿಕ ಚುನಾವಣೆಗಳ ಸಂದರ್ಭದಲ್ಲಿ 40 ಸ್ಟಾರ್ ಪ್ರಚಾರಕರನ್ನು ನಾಮನಿರ್ದೇಶನ ಮಾಡಬಹುದು. ರಾಷ್ಟ್ರೀಯ ಅಥವಾ ರಾಜ್ಯದ ಮಾನ್ಯತೆ ಹೊಂದಿರದ ಪಕ್ಷಗಳಿಗೆ 20ರ ಮಿತಿಯಿದೆ. ಪ್ರಧಾನ ಕಚೇರಿ ಹೊಂದಲು ಸರಕಾರದಿಂದ ಭೂಮಿ ಅಥವಾ ಕಟ್ಟಡ ಲಭಿಸಲಿದೆ.
ಬೆಳಗಾವಿ: ಬಿಜೆಪಿ ರಾಷ್ಟ್ರೀಯ ರೈತ ಮೋರ್ಚಾ ಕಾರ್ಯಕಾರಿಣಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ
https://pragati.taskdun.com/belgaum-former-chief-minister-bs-yeddyurappa-is-inaugarated-the-bjp-rashtriya-raita-morcha-executive/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ