ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಲೋಕಸಭೆಯಲ್ಲಿ ಇಂಗ್ಲೀಷ್ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿರುವ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆಗೆ ಮುಂದಾಗಿದೆ.
ಅವರಿಬ್ಬರು ಮಾತ್ರ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಲಿಲ್ಲ!
ಬುಧವಾರ 12 ಗಂಟೆಗೆ ಬೆಳಗಾವಿಯ ನಗರದ ಕ್ಲಬ್ ರಸ್ತೆಯಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ರಕ್ಷಣಾ ವೇದಿಕೆಯ ಯುವಘಟಕದ ಅಧ್ಯಕ್ಷ ದೀಪಕ್ ಗುಡಗನಟ್ಟಿ ತಿಳಿಸಿದ್ದಾರೆ.
ಈ ಸಂಬಂಧ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ.
ಲೋಕಸಭೆಯ ನೂತನ ಸದಸ್ಯರು ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿ, ಕರ್ನಾಟಕದ ಬಹುತೇಕ ಎಲ್ಲ ಸಂಸದರು ಕನ್ನಡದಲ್ಲಿಯೇ ಪ್ರಮಾಣವಚನ ಸ್ವೀಕರಿಸಿರುವುದನ್ನು ಕರ್ನಾಟಕ ರಕ್ಷಣಾ ವೇದಿಕೆ ಹೃತ್ಪೂರ್ವಕವಾಗಿ ಅಭಿನಂದಿಸುತ್ತದೆ. ಅದೇ ಸಂದರ್ಭದಲ್ಲಿ ಇಂಗ್ಲಿಷ್ ಮತ್ತು ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿರುವ ಬೆಳಗಾವಿ ಸಂಸದ ಸುರೇಶ್ ಅಂಗಡಿ ಮತ್ತು ಉತ್ತರ ಕನ್ನಡ ಸಂಸದ ಅನಂತ ಕುಮಾರ್ ಹೆಗಡೆಯವರ ನಿಲುವನ್ನು ತೀವ್ರವಾಗಿ ಖಂಡಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿರುವ ೨೨ ಭಾಷೆಗಳಲ್ಲಿ ಯಾವ ಭಾಷೆಯಲ್ಲಾದರೂ ಪ್ರಮಾಣವಚನ ಸ್ವೀಕರಿಸುವ ಅವಕಾಶವಿರುವಾಗ, ಸುರೇಶ್ ಅಂಗಡಿ ಮತ್ತು ಅನಂತ ಕುಮಾರ್ ಹೆಗಡೆ ಬೇರೆ ಭಾಷೆಗಳಲ್ಲಿ ಪ್ರಮಾಣವಚನ ಸ್ವೀಕರಿಸಿರುವುದು ಅವರ ಬೌದ್ಧಿಕ ದಿವಾಳಿತನ, ನಾಡದ್ರೋಹ ಮತ್ತು ದುರಹಂಕಾರದ ಮನಸ್ಥಿತಿಯನ್ನು ಪ್ರತಿನಿಧಿಸುತ್ತದೆ ಎಂದು ಅವರು ಹೇಳಿದ್ದಾರೆ.
ಸುರೇಶ್ ಅಂಗಡಿ, ಹಿಂದಿನಿಂದಲೂ ಎಂಇಎಸ್ ಎಂಬ ನಾಡದ್ರೋಹಿ ಸಂಘಟನೆಯ ಜತೆ ಅನೈತಿಕ ಮೈತ್ರಿ ಮಾಡಿಕೊಂಡೇ ಸಂಸದರಾಗಿ ಆಯ್ಕೆಯಾಗಿ ಬರುತ್ತಿದ್ದಾರೆ. ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಪ್ರತಿಪಾದಿಸುತ್ತಿರುವವರ ಜತೆ ಅವರ ಸ್ನೇಹ ಗುಟ್ಟಿನ ವಿಚಾರವೇನೂ ಅಲ್ಲ. ಸುರೇಶ್ ಅಂಗಡಿ ಪ್ರತಿನಿಧಿಸುವ ಭಾರತೀಯ ಜನತಾ ಪಕ್ಷ ಹಲವು ಚುನಾವಣೆಗಳ ಸಂದರ್ಭದಲ್ಲಿ ಎಂಇಎಸ್ ಜತೆ ಹೊಂದಾಣಿಕೆ ಮಾಡಿಕೊಂಡಿದೆ. ಎಂಇಎಸ್ ಅನ್ನು ಸಂತೃಪ್ತಿಗೊಳಿಸುವ ಸಲುವಾಗಿಯೇ ಸುರೇಶ್ ಅಂಗಡಿ ಮಿಕ್ಕೆಲ್ಲ ಸದಸ್ಯರೂ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸುವಾಗ ತಾವು ಮಾತ್ರ ಇಂಗ್ಲಿಷ್ನಲ್ಲಿ ಪ್ರಮಾಣ ಸ್ವೀಕರಿಸಿದ್ದಾರೆ. ಇದು ಸ್ವಾಭಿಮಾನಿ ಕನ್ನಡಿಗರನ್ನು ಕೆರಳಿಸುವ ವಿಷಯವಾಗಿದ್ದು, ಕರ್ನಾಟಕ ರಕ್ಷಣಾ ವೇದಿಕೆ ಇದನ್ನು ಸಹಿಸುವುದಿಲ್ಲ ಎಂದು ನಾರಾಯಣ ಗೌಡ ಹೇಳಿದ್ದಾರೆ.
ಇದೇ ರೀತಿ ಉತ್ತರ ಕನ್ನಡ ಸಂಸದ ಅನಂತ ಕುಮಾರ ಹೆಗಡೆ ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸುವ ಮೂಲಕ ತಾಯ್ನುಡಿ ಕನ್ನಡವನ್ನು ಕಡೆಗಣಿಸಿದ್ದಾರೆ. ಕಾಲಕಾಲದಿಂದ ಕನ್ನಡಿಗರ ಮೇಲೆ ಸಂಸ್ಕೃತ-ಹಿಂದಿ ಭಾಷೆಗಳನ್ನು ಹೇರುವ ಪ್ರಯತ್ನಗಳು ನಡೆಯುತ್ತಲೇ ಇವೆ. ಶಿಕ್ಷಣದಲ್ಲಿ ಸಂಸ್ಕೃತದ ಹೇರಿಕೆಯ ವಿರುದ್ಧ ವರನಟ ಡಾ.ರಾಜಕುಮಾರ್ ಅವರ ನೇತೃತ್ವದಲ್ಲಿ ‘ಗೋಕಾಕ್ ಚಳವಳಿ’ ನಡೆದಿದ್ದನ್ನು ಯಾರೂ ಮರೆಯುವಂತಿಲ್ಲ. ಆದರೂ ಹಿಂಬಾಗಿಲ ಮೂಲಕ ಸಂಸ್ಕೃತ ಹೇರುವ ಹುನ್ನಾರದ ಭಾಗವಾಗಿಯೇ ಹೆಗಡೆ ಆ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದು ಗುಲಾಮಗಿರಿಯ ಸಂಕೇತ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಭಿಪ್ರಾಯಪಡುತ್ತದೆ ಎಂದಿದ್ದಾರೆ.
ಸುರೇಶ್ ಅಂಗಡಿ ಮತ್ತು ಅನಂತಕುಮಾರ್ ಹೆಗಡೆ ಹೊರತಾಗಿ ಮಿಕ್ಕೆಲ್ಲ ಸದಸ್ಯರು ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿರುವುದನ್ನು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಗತಿಸುತ್ತದೆ. ಸಂಸತ್ತಿನಲ್ಲಿ ಮೊದಲ ಬಾರಿ ಕನ್ನಡದಲ್ಲಿ ಮಾತನಾಡಿ ಹೊಸ ಕ್ರಾಂತಿಯನ್ನೇ ಮಾಡಿದ ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲರ ಪರಂಪರೆಯನ್ನು ಮುಂದುವರೆಸಿ, ಎಲ್ಲ ಸದಸ್ಯರು ಕನ್ನಡದಲ್ಲೇ ಲೋಕಸಭೆಯಲ್ಲಿ ವ್ಯವಹರಿಸಬೇಕೆಂದು ವೇದಿಕೆ ಒತ್ತಾಯಿಸುತ್ತದೆ ಎಂದು ಹೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ