ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬಿಜೆಪಿಯ ಹಾಲಿ ಎಂಎಲ್ ಸಿ ಪುಟ್ಟಣ್ಣ ಅವರು ಇಂದು ತಮ್ಮ ಎಂ ಎಲ್ ಸಿ ಸ್ಥಾನಕ್ಕೆ ಹಾಗೂ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಕಾಂಗ್ರೆಸ್ ಪಕ್ಷ ಸೇರಲು ಇಚ್ಛಿಸಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ಪುಟ್ಟಣ್ಣ ಅವರ ಕೊಡುಗೆ ಅಪಾರವಾಗಿದೆ. ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿ ಸತತ ನಾಲ್ಕು ಬಾರಿ ಗೆಲವು ಸಾಧಿಸಿದ್ದಾರೆ. ಇನ್ನು ಕೆಲವು ವರ್ಷಗಳ ಕಾಲ ಅಧಿಕಾರವಿದ್ದರೂ ಬಿಜೆಪಿ ಆಡಳಿತಕ್ಕೆ ಬೇಸತ್ತು, ತಮ್ಮ ಕ್ಷೇತ್ರದ ಜನರಿಗೆ ನ್ಯಾಯ ಒದಗಿಸಲು ಸಾಧ್ಯವಾಗದೇ ಈ ತೀರ್ಮಾನ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ಅವರ ಈ ತೀರ್ಮಾನಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಪುಟ್ಟಣ್ಣ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ. ಈ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಪುಟ್ಟಣ್ಣ ಅವರು ಯಾವುದೇ ಟಿಕೆಟ್, ಅಧಿಕಾರದ ಆಕಾಂಕ್ಷೆ ಇಲ್ಲದೆ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂದಿದ್ದಾರೆ. ಅವರು ಇನ್ನು ಪಕ್ಷದ ಸದಸ್ಯತ್ವ ಸ್ಥಾನ ಪಡೆದಿಲ್ಲ. ಹೀಗಾಗಿ ಟಿಕೆಟ್ ನೀಡುವ ವಿಚಾರ ಈಗ ಪ್ರಸ್ತುತವಲ್ಲ ಎಂದರು.
ಕಳೆದ ಮೂರು ದಿನಗಳಿಂದ ಕಾಂಗ್ರೆಸ್ ಪಕ್ಷ ಸ್ಕ್ರೀನಿಂಗ್ ಕಮಿಟಿ ಸಭೆ ನಡೆಸಿದ್ದು, ಈ ಸಭೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲಿನ ಟಿಕೆಟ್ ಆಕಾಂಕ್ಷಿಗಳ ಅರ್ಜಿಗಳನ್ನು ಪರಿಶೀಲನೆ ಮಾಡಲಾಗಿದೆ. ಈ ಸಭೆಯಲ್ಲಿ ಎಲ್ಲರ ಅಭಿಪ್ರಾಯ ಪಡೆದು ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಲಾಗುವುದು. ನಾವು ಸ್ಥಳೀಯ ನಾಯಕರ ಜತೆ ಮಾತನಾಡಿ ಅವರ ಅಭಿಪ್ರಾಯ ಪಡೆದು ಎಲ್ಲ ಸಮಾಜದವರಿಗೆ ನ್ಯಾಯ ಒದಗಿಸಲು ಅನೇಕ ಶಿಫಾರಸ್ಸು ಮಾಡಿದ್ದೇವೆ. ಕೇಂದ್ರ ಚುನಾವಣಾ ಸಮಿತಿ ದಿನಾಂಕ ನಿಗದಿ ಮಾಡಿದ ನಂತರ ಪಟ್ಟಿ ಬಿಡುಗಡೆ ಮಾಡಲಾಗುವುದು.
ಪುಟ್ಟಣ್ಣ ಅವರ ಸೇರ್ಪಡೆಯಿಂದ ಪಕ್ಷದಲ್ಲಿ ಕೆಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಕೇಳಿದ ಪ್ರಶ್ನೆಗೆ, ‘ಪುಟ್ಟಣ್ಣ ಅವರು ಬಿಜೆಪಿಯ ವಿಧಾನ ಪರಿಷತ್ ಸದಸ್ಯರು. ಚುನಾವಣೆಯಲ್ಲಿ ಅವರ ವಿರುದ್ಧ ನಮ್ಮ ಅಭ್ಯರ್ಥಿ ಕಣಕ್ಕಿಳಿಸಿದ್ದರೂ ಸಾವಿರ ಮತಗಳನ್ನು ಪಡೆಯಲು ಸಾಧ್ಯವಾಗಲಿಲ್ಲ ಎಂಬುದು ವಾಸ್ತವ. ರಾಜಾಜಿನಗರ, ಚನ್ನಪಟ್ಟಣ, ಬಸವನಗುಡಿ, ರಾಮನಗರ ಸೇರಿದಂತೆ ಹಲವೆಡೆ ಅಕ್ರೋಶ ವ್ಯಕ್ತವಾಗಬಹುದು. ಇವರ ಸೇರ್ಪಡೆಯಿಂದ ತಮಗೆ ಸಮಸ್ಯೆ ಆಗಬಹುದು ಎಂಬ ಕಾರಣಕ್ಕೆ ಆಕ್ರೋಶ ಸಹಜ. ಅವರು ಬೇಷರತ್ತಾಗಿ ಪಕ್ಷ ಸೇರಲು ಅರ್ಜಿ ಸಲ್ಲಿಸಲಿದ್ದಾರೆ. ಅವರ ರಾಜೀನಾಮೆ ಸ್ವೀಕೃತವಾದ ನಂತರ ಪಕ್ಷದ ಸದಸ್ಯತ್ವ ನೀಡುತ್ತೇವೆ’ ಎಂದು ಉತ್ತರಿಸಿದರು.
ಸುಮಲತಾ ಅವರ ಬಿಜೆಪಿ ಸೇರ್ಪಡೆ ಬಗ್ಗೆ ಕೇಳಿದ ಪ್ರಶ್ನೆಗೆ, ‘ಅವರಿಗೆ ಒಳ್ಳೆಯದಾಗಲಿ’ ಎಂದರು.
ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಕ್ಷೇತ್ರಗಳಲ್ಲಿನ ಭಿನ್ನಾಭಿಪ್ರಾಯದ ಬಗ್ಗೆ ಕೇಳಿದಾಗ, ‘ಎಲ್ಲಾ 224 ಕ್ಷೇತ್ರಗಳ ಕುರಿತು ಚರ್ಚೆ ಮಾಡಲಾಗಿದ್ದು, ಎಲ್ಲ ಕ್ಷೇತ್ರಗಳಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಾಗುವುದು. ಅಂತಿಮ ತೀರ್ಮಾನವನ್ನು ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ತೆಗೆದುಕೊಳ್ಳಲಿದ್ದಾರೆ’ ಎಂದು ಸ್ಪಷ್ಟಪಡಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ