ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಇಲ್ಲಿನ ಪ್ರಮುಖ ಪ್ರವಾಸಿ ಆಕರ್ಷಣೆಯ ಐತಿಹಾಸಿಕ ಗೇಟ್ ವೇ ಆಫ್ ಇಂಡಿಯಾದ ಮೇಲ್ಮೈಯಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ.
ಲೋಕಸಭೆಯಲ್ಲಿ ಕೇಂದ್ರ ಸಂಸ್ಕೃತಿ ಸಚಿವ ಕಿಶನ್ ರೆಡ್ಡಿ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಈ ವಿಷಯ ತಿಳಿಸಿದ್ದಾರೆ. ಇತ್ತೀಚೆಗೆ ಪರಿಶೀಲನೆ ನಡೆಸಿದ ವೇಳೆ ಈ ವಿಷಯ ತಿಳಿದುಬಂದಿದೆ. ಆದರೆ ನಿರ್ಮಾಣ ಸುಸ್ಥಿರವಾಗಿದೆ ಎಂದು ಅವರು ತಿಳಿಸಿದ್ದಾರೆ.
ಬ್ರಿಟಿಷ್ ದೊರೆ ಕಿಂಗ್ ಜಾರ್ಜ್ ಆಗಮನದ ನೆನಪಿಗಾಗಿ 1911ರಲ್ಲಿ ಗೇಟ್ ವೇ ನಿರ್ಮಾಣ ಕಾರ್ಯ ಆರಂಭಿಸಲಾಗಿತ್ತು. 1924ರಲ್ಲಿ ಕಾಮಗಾರಿ ಮುಕ್ತಾಯಗೊಂಡಿತ್ತು. ಇದು ಮಹಾರಾಷ್ಟ್ರ ಪುರಾತತ್ವ ವಸ್ತುಸಂಗ್ರಹಾಲಯದ ವ್ಯಾಪ್ತಿಗೆ ಒಳಪಡುತ್ತದೆಯೇ ಹೊರತು ಕೇಂದ್ರದ ರಕ್ಷಿತ ಸ್ಮಾರಕವಲ್ಲ ಎಂದು ತಿಳಿಸಿರುವ ಸಚಿವರು, ಇದರ ಪುನರ್ ಸ್ಥಾಪನೆಗೆ ಕೇಂದ್ರ ಪುರಾತತ್ವ ಮತ್ತು ವಸ್ತುಸಂಗ್ರಹಾಲಯ ನಿರ್ದೇಶನಾಲಯದಿಂದ ಈವರೆಗೆ ಯಾವುದೇ ಪ್ರಸ್ತಾವ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದರ ದುರಸ್ತಿ ಮತ್ತು ಸಂರಕ್ಷಣೆಗೆ ಪುರಾತತ್ವ ಮತ್ತು ವಸ್ತುಸಂಗ್ರಹಾಲಯ ಇಲಾಖೆ 8.90 ಕೋಟಿ ರೂ. ಅನುದಾನ ಕಾಯ್ದಿರಿಸಿದ್ದು ಮಾ. 10ರಂದು ಅನುಮೋದನೆ ಕೂಡ ನೀಡಿದೆ ಎಂದು ಸಚಿವರು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ