Kannada NewsKarnataka NewsLatest

ಬೆಲೆ ಏರಿಕೆ, ಭ್ರಷ್ಟಾಚಾರಗಳಿಂದ ತತ್ತರಿಸಿ ಹೋಗಿರುವ ಜನರು ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲೇಬೇಕೆಂದು ತೀರ್ಮಾನಿಸಿದ್ದಾರೆ – ಲಕ್ಷ್ಮೀ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಉಗಾರ/ ಹಾರೂಗೇರಿ: ಬೆಲೆ ಏರಿಕೆ, ಭ್ರಷ್ಟಾಚಾರಗಳಿಂದ ತತ್ತರಿಸಿ ಹೋಗಿರುವ ಜನರು ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲೇ ಬೇಕೆಂದು ತೀರ್ಮಾನಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕಿ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ. 

ಮಂಗಳವಾರ ಕಾಗವಾಡ ಕ್ಷೇತ್ರದ ಉಗಾರದಲ್ಲಿ ರಾಜು ಕಾಗೆಯವರ ಪರವಾಗಿ ಹಾಗೂ  ಕುಡಚಿ ಕ್ಷೇತ್ರದ ಹಾರೂಗೇರಿಯಲ್ಲಿ ಮಹೇಂದ್ರ ತಮ್ಮಣ್ಣವರ್ ಪರವಾಗಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 

ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆ ಇದೆ. ಅದಕ್ಕೆ ಇಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸೇರಿರುವ ಜನರೇ ಸಾಕ್ಷಿ. ನನ್ನ ಮತ ಕ್ಷೇತ್ರವಾಗಿರುವ ಬೆಳಗಾವಿ ಗ್ರಾಮೀಣದಲ್ಲೂ ಜನರು ನಾನು ಪ್ರಚಾರಕ್ಕೆ ಹೋದಲ್ಲೆಲ್ಲ ಬರಮಾಡಿಕೊಳ್ಳುವ ರೀತಿ ನೋಡಿದರೆ ಕಾಂಗ್ರೆಸ್ ಖಂಡಿತ ಅತ್ಯಧಿಕ ಬಹುಮತದಿಂದ ಈ ಬಾರಿ ಸರಕಾರ ರಚಿಸಲಿದೆ ಎನ್ನುವುದು ಗೊತ್ತಾಗುತ್ತದೆ. ಬೆಲೆ ಏರಿಕೆಯಿಂದಾಗಿ ಜೀವನ ನಡೆಸಲಾಗದೆ ತತ್ತರಿಸಿ ಹೋಗಿರುವ ಜನರು ಕಾಂಗ್ರೆಸ್ ಪಕ್ಷದ ನಾಲ್ಕು ಗ್ಯಾರಂಟಿಗಳನ್ನು ಖಾತರದಿಂದ ಕಾಯುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೊದಲ ಸಚಿವಸಂಪುಟ ಸಭೆಯಲ್ಲೇ ನಾಲ್ಕು ಗ್ಯಾರಂಟಿಗಳಾದ 200 ಯುನಿಟ್ ಉಚಿತ ವಿದ್ಯುತ್, ಮನೆಯ ಯಜಮಾನಿಗೆ ತಿಂಗಳಿಗೆ 2 ಸಾವಿರ ರೂ., ಯುವಕರಿಗೆ ಉದ್ಯೋಗ ಮತ್ತು ನಿರುದ್ಯೋಗ ಭತ್ಯೆ ಹಾಗೂ ಪ್ರತಿ ವ್ಯಕ್ತಿಗೆ 10 ಕಿಲೋ ಅಕ್ಕಿ ಯೋಜನೆಗಳನ್ನು ಜಾರಿಗೊಳಿಸುವುದಾಗಿ ವಾಗ್ದಾನ ಮಾಡಿದ್ದೇವೆ. ಜನರು ನೆಮ್ಮದಿಯಿಂದ ಬದುಕಬೇಕು ಎನ್ನುವುದೇ ಈ ಯೋಜನೆಗಳ ಉದ್ದೇಶ ಎಂದು ಹೆಬ್ಬಾಳಕರ್ ಹೇಳಿದರು.

ಸಿದ್ದರಾಮಯ್ಯನವರು ಬಸವತತ್ವದಲ್ಲಿ ವಿಶ್ವಾಸವಿಟ್ಟು ಕೆಲಸ ಮಾಡುವವರು. ಅವರ ಬಗ್ಗೆ ಏನೇ ಅಪಪ್ರಚಾರ ಮಾಡಿದರೂ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಸಿದ್ದರಾಮಯ್ಯ ಏನು ಎಂದು ಭಗವಂತನಿಗೆ ಗೊತ್ತು, ಜನರಿಗೆ ಗೊತ್ತು. ಅವರು ಎಲ್ಲ ಸಮಾಜದ ಪ್ರಶ್ನಾತೀತ ನಾಯಕರು. ಅವರ ಆಡಳಿತವನ್ನು ನೀವೆಲ್ಲ ಕಣ್ಣಾರೆ ಕಂಡಿದ್ದೀರಿ. ಬಡರಿಗಾಗಿ ಎಷ್ಟೊಂದು ಯೋಜನೆಗಳನ್ನು ತಂದರು. ಅವರು ಹೋದಲ್ಲೆಲ್ಲ ಜನರು ದೇವರು ಬಂದಂತೆ ಅವರನ್ನು ಕಾಣುತ್ತಿದ್ದಾರೆ. ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರಿದ್ದರಿಂದಾಗಿ ಬೆಳಗಾವಿ ಜಿಲ್ಲೆಯಲ್ಲಿ ಆನೆ ಬಲ ಬಂದಂತಾಗಿದೆ. ಅವರ ಹಾಗೂ ಸತೀಶ್ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಜಿಲ್ಲೆಯ ಕನಿಷ್ಟ 15 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸಲಿದೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

  ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಮಾಜಿ ಉಪ ಮುಖ್ಯಮಂತ್ರಿ  ಲಕ್ಷ್ಮಣ ಸವದಿ, ವಿಧಾನ ಪರಿಷತ್ ಸದಸ್ಯ  ಪ್ರಕಾಶ ಹುಕ್ಕೇರಿ, ಕಾಗವಾಡ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ರಾಜು ಕಾಗೆ, ಕುಡಚಿ ಕ್ಷೇತ್ರದ ಅಭ್ಯರ್ಥಿ ಮಹೇಂದ್ರ ತಮ್ಮಣ್ಣವರ್ ಹಾಗೂ ಪಕ್ಷದ ಅನೇಕ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

https://pragati.taskdun.com/i-will-give-ashoka-pujari-a-good-position-in-the-congress-government-lakshmi-hebbalkar-promises/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button