ಪ್ರಗತಿವಾಹಿನಿ ಸುದ್ದಿ, ಪಣಜಿ:
ಕರ್ನಾಟಕದಲ್ಲಿ ಕಾಂಗ್ರೆಸ್ ಶಾಸಕರು ರಾಜಿನಾಮೆ ನೀಡಿ ಹೊರಬರಲು ದೊಡ್ಡ ಹೋರಾಟ ನಡೆಸಿದ್ದರೆ, ಗೋವಾದಲ್ಲಿ ಯಾವುದೇ ಹೋರಾಟವೂ ಇಲ್ಲದೆ, ಶಾಸಕತ್ವವನ್ನೂ ಕಳೆದುಕೊಳ್ಳದೆ ಶಾಸಕರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ.
ಅದು ಹೇಗೆ?
ಗೋವಾದ ವಿರೋಧ ಪಕ್ಷದ ನಾಯಕನೂ ಸೇರಿದಂತೆ 15 ಕಾಂಗ್ರೆಸ್ ಶಾಸಕರ ಪೈಕಿ 10 ಶಾಸಕರು ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ. ಮೂರನೇ ಎರಡು ಭಾಗ ಶಾಸಕರು ಬಿಜೆಪಿ ಬೆಂಬಲಿಸಿದ್ದರಿಂದ ಪಕ್ಷಾಂತರ ನಿಷೇಧ ಕಾಯ್ದೆ ಅವರಿಗೆ ಹೊಡೆತ ನೀಡಲೇ ಇಲ್ಲ.
ಗೋವಾದಲ್ಲಿ ಬಿಜೆಪಿಯು ಮಿತ್ರ ಪಕ್ಷದೊಂದಿಗೆ ಅಧಿಕಾರದಲ್ಲಿದ್ದು ಕೆಲವು ದಿನಗಳಿಂದ ಅಧಿಕಾರ ಉಳಿಸಿಕೊಳ್ಳಲು ಪರದಾಡುತ್ತಿತ್ತು. ಇದೀಗ ವಿರೋಧ ಪಕ್ಷವಾದ ಕಾಂಗ್ರೆಸ್ಸೇ ಗೋವಾ ಬಿಜೆಪಿ ಸರಕಾರ ಉಳಿಸಲು ಮುಂದೆ ಬಂದಂತಾಗಿದೆ!
ಕಾಂಗ್ರೆಸ್‌ನ ಹತ್ತು ಶಾಸಕರು ಒಟ್ಟಾಗಿ ಸರ್ಕಾರಕ್ಕೆ ತಮ್ಮ ಬೆಂಬಲವನ್ನು ಘೋಷಿಸಿ ಇಂದು ಸ್ಪೀಕರ್‌ಗೆ ಪತ್ರ ನೀಡಿದ್ದಾರೆ. ಬಾಬು ಕಾಲ್ವೇಕರ್, ಬಾಬುಶ್ ಮೊನ್ಸೆರಾಟೆ ಮತ್ತು ಅವರ ಪತ್ನಿ ಜೆನಿಫರ್ ಮೊನ್ಸೆರಾಟೆ, ಟೋನಿ ಫರ್ನಾಂಡಿಸ್, ಫ್ರಾನ್ಸಿಸ್ ಸಿಲ್ವೇರಿಯಾ, ಫಿಲಿಪಿ ನೇರಿ ರೋಡ್ರಿಗೋಸ್, ಕ್ಲಾಫಾಸಿಯೋ, ವಿಲ್‌ಫ್ರೆಡ್ ಡಿಸಾ, ನೀಲಕಂಠ ಹಲಂಕಾರ್, ಇಸಿಡೋರ್ ಫರ್ನಾಂಡೀಸ್ ಅವರುಗಳು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ.
ಕಾಂಗ್ರೆಸ್ ಶಾಸಕರು ಯಾವುದೇ ಬೇಡಿಕೆ ಇಲ್ಲದೆ, ಸ್ವತಂತ್ರ್ಯವಾಗಿ ಬಂದು ತಮ್ಮ ಪಕ್ಷ ಸೇರಿ, ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್ ಹೇಳಿದ್ದಾರೆ. ವಿಶಷವೆಂದರೆ ವಿಪಕ್ಷ ನಾಯಕರೇ ಪಕ್ಷಾಂತರ ಮಾಡಿದ್ದಾರೆ.
ಗೋವಾ ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿದ್ದ ಚಂದ್ರಕಾಂತ್ ಕಾವ್ಲೇಕರ್ ಮಾತನಾಡಿ, ಮುಖ್ಯಮಂತ್ರಿ ಮಾಡುತ್ತಿರುವ ಒಳ್ಳೆಯ ಕಾರ್ಯಕ್ಕೆ ಬೆಂಬಲ ನೀಡಲು ಬಿಜೆಪಿ ಸೇರಿದ್ದೇವೆ, ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಸಹ ನಾವು ಸರ್ಕಾರ ರಚಿಸಲು ಆಗಲಿಲ್ಲ, ಈಗ ಕೆಲಸ ಮಾಡುತ್ತಿರುವ ಸರ್ಕಾರಕ್ಕೆ ಬೆಂಬಲ ಸೂಚಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷ ನೀಡಿದ್ದ ಭರವಸೆಗಳನ್ನು ಈಡೇರಿಸಲಿಲ್ಲ, ಕಾಂಗ್ರೆಸ್‌ಗೆ ಹಲವು ಅವಕಾಶಗಳು ಸಿಕ್ಕಿದ್ದರೂ ಸಹ ಅವರು ಕೆಲಸ ಮಾಡಲಿಲ್ಲ, ಯಾವುದೇ ಅಭಿವೃದ್ಧಿಯನ್ನೇ ಮಾಡದಿದ್ದಲ್ಲಿ ನಮ್ಮನ್ನು ಜನ ಆರಿಸುವುದಾದರೂ ಹೇಗೆ? ಹಾಗಾಗಿ ನಾವು ಈ ನಿರ್ಣಯ ಕೈಗೊಂಡಿದ್ದೇವೆ ಎಂದು ಚಂದ್ರಕಾಂತ್ ಕಾವ್ಲೇಕರ್ ಹೇಳಿದ್ದಾರೆ.
ಕೆಲವು ದಿನಗಳ ಹಿಂದಷ್ಟೆ ತೆಲಂಗಾಣದಲ್ಲೂ ಸಹ ಕಾಂಗ್ರೆಸ್‌ಗೆ ಹೀಗೆಯೇ ಆಗಿತ್ತು, 18 ಶಾಸಕರಲ್ಲಿ 12 ಶಾಸಕರು ಆಡಿತಾರೂಢ ಟಿಆರ್‌ಎಸ್‌ಗೆ ಬೆಂಬಲ ಸೂಚಿಸಿ ಪಕ್ಷಾಂತರ ಮಾಡಿದ್ದರು. ಇದೀಗ ಕರ್ನಾಟಕದಲ್ಲಿಯೂ ಕಾಂಗ್ರೆಸ್ ಭಾರಿ ಸಂಕಷ್ಟದಲ್ಲಿದ್ದು ಕಾಂಗ್ರೆಸ್‌ನ ಉಳಿವು ಅಪಾಯದಲ್ಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ