ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಅವರ ಮೇಲೆ ನಡೆದ ಹಲ್ಲೆ ಘಟನೆಯನ್ನು ಬೆಳಗಾವಿ ಗ್ರಾಮಿಣ ಕ್ಷೇತ್ರದ ಶಾಸಕಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳಕರ ಹಾಗೂ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ತೀವ್ರವಾಗಿ ಖಂಡಿಸಿದ್ದಾರೆ.
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಗ್ರಾಮವೊಂದರಲ್ಲಿ ಚುನಾವಣಾ ಪ್ರಚಾರದ ರೋಡ್ ಶೋ ವೇಳೆ ದುಷ್ಕರ್ಮಿಗಳು ಜಿ. ಪರಮೇಶ್ವರ ಅವರ ಮೇಲೆ ಕಲ್ಲು ತೂರಿ ಗಂಭೀರ ಗಾಯಗೊಳಿಸಿದ್ದಾರೆ. ಇಂಥ ಘಟನೆ ಕಾನೂನು ಸುವ್ಯವಸ್ಥೆಯ ಕಗ್ಗೊಲೆಯಾಗಿದೆ ಎಂದು ಅವರು ಹೇಳಿದ್ದಾರೆ.
ಜಿ. ಪರಮೇಶ್ವರ ಅವರು ಅತ್ಯಂತ ಸೌಮ್ಯ, ಸರಳ ಸಜ್ಜನ ರಾಜಕಾರಣಿಯಾಗಿ ಪರಿಚಿತರು. ನಿರ್ವಿವಾದದಿಂದ ಕೂಡಿದ ರಾಜಕೀಯ ಜೀವನ ನಡೆಸುತ್ತಿರುವ ಹಿರಿಯ ರಾಜಕಾರಣಿ. ಅಂಥವರನ್ನು ಈ ರೀತಿಯ ಹಿಂಸಾತ್ಮಕ ರೀತಿಯಲ್ಲಿ ನಡೆಸಿಕೊಳ್ಳುವುದು ಯಾರಿಗೂ ಶೋಭೆಯಲ್ಲ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯವನ್ನು ವೈಯಕ್ತಿಕ ದ್ವೇಷಕ್ಕಾಗಿ ಬಳಸುವುದು ಹೀನಾಯ ಕೃತ್ಯ. ಹಿಂಸೆಯ ರೂಪದಲ್ಲಿ ರಾಜಕೀಯ ದ್ವೇಷದ ಇಂಥ ಕೃತ್ಯಗಳು ಭವಿಷ್ಯದಲ್ಲಿ ಎಂದಿಗೂ ಮರುಕಳಿಸಬಾರದು. ಈ ಹಿಂದೆಯೂ ನಾಮಪತ್ರ ಸಲ್ಲಿಕೆ ವೇಳೆ ಅವರ ಮೇಲೆ ಕಲ್ಲು ತೂರಿ ಹಲ್ಲೆ ಯತ್ನ ನಡೆಸಿದ ಘಟನೆ ನಡೆದಿತ್ತು. ಈ ವೇಳೆ ಪೊಲೀಸ್ ಪೇದೆಯೊಬ್ಬರು ಗಾಯಗೊಂಡಿದ್ದರು. ಒಬ್ಬಆರೋಪಿಯನ್ನು ಬಂಧಿಸಿದ್ದರೂ ಮತ್ತೆ ಘಟನೆ ಮರುಕಳಿಸಿದೆ.
ಈ ನಿಟ್ಟಿನಲ್ಲಿ ಸರಕಾರ ಸೂಕ್ತ ಕ್ರಮ ವಹಿಸಬೇಕು. ಅಪರಾಧಿ ಯಾರೇ ಆಗಿದ್ದರೂ, ಎಷ್ಟೇ ಪ್ರಭಾವಿಯಾಗಿದ್ದರೂ ಬಂಧಿಸಿ ಕಠಿಣ ಕಾನೂನು ಕ್ರಮಕ್ಕೆ ಒಳಪಡಿಸಬೇಕು. ಚುನಾವಣೆ ಎಂಬುದು ರಾಜಕೀಯದ ಹಬ್ಬವಾಗಬೇಕೇ ಹೊರತು ಹಿಂಸೆಯ ರಣಾಂಗಣವಾಗಲು ಅವಕಾಶ ನೀಡಬಾರದು. ಸರಕಾರ ಜಿ. ಪರಮೇಶ್ವರ ಅವರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಲಕ್ಷ್ಮೀ ಹೆಬ್ಬಾಳಕರ ಹಾಗೂ ಚನ್ನರಾಜ ಹಟ್ಟಿಹೊಳಿ ಜಂಟಿ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ