ಪ್ರಗತಿವಾಹಿನಿ ಸುದ್ದಿ, ಬೆಂಗಳೂರು:
ಅತೃಪ್ತ ಶಾಸಕರ ಮನವೊಲಿಕೆ ಕಾರ್ಯದಲ್ಲಿ ರಾಜ್ಯ ಜಲಸಂಪನ್ಮೂಲ ಸಚಿವ, ಟ್ರಬಲ್ ಶೂಟರ್ ಖ್ಯಾತಿಯ ಡಿ.ಕೆ.ಶಿವಕುಮಾರ ತಮ್ಮ ಪ್ರಯತ್ನ ಮುಂದುವರಿಸಿದ್ದಾರೆ.
ಮುಂಬೈಗೆ ಹೋಗಿ ವಾಪಸ್ ಬಂದಿದ್ದು ಎಲ್ಲರಿಗೂ ಗೊತ್ತಿದೆ. ಎಸ್.ಟಿ.ಸೋಮಶೇಖರ್ ಮನೆಗೆ ಬರುತ್ತಾರೆಂದು ರಾತ್ರಿಯಿಡೀ ಅವರ ಮನೆಯಲ್ಲಿ ಕಾದಿದ್ದೂ ಗೊತ್ತಿದೆ. ಇದೀಗ ಇಂದು ಬೆಳಗ್ಗೆ ವಸತಿ ಸಚಿವ ಎಂಟಿಬಿ ನಾಗರಾಜ್ ಮೆಗೆ ತೆರಳಿ ಅವರ ಮನವೊಲಿಸಲು ಪ್ರಯತ್ನ ನಡೆಸಿದರು.
ಸಿದ್ದರಾಮಯ್ಯನವರಿಗೂ ಬೆಲೆ ಇಲ್ಲ:
ಬೆಳಗ್ಗೆ 5 ಗಂಟೆಗೇ ನಾಗರಾಜ ಮನೆಗೆ ಹೋದ ಡಿಕೆಶಿ ಎಲ್ಲ ರೀತಿಯಿಂದಲೂ ಅವರನ್ನು ಕನ್ವಿನ್ಸ್ ಮಾಡಲು ಯತ್ನಿಸಿದರು. ಕುಮಾರಸ್ವಾಮಿ ಮತ್ತು ರೇವಣ್ಣ ಮೇಲೆ ತೀವ್ರ ಕಿಡಿಕಾರಿದ ನಾಗರಾಜ, ಅರ ಸಹವಾಸವೇ ಬೇಡ ಎಂದು ಕಡ್ಡಿಮುರಿದಂತೆ ಹೇಳಿದರು.
ನಾನು ಹೆಸರಿಗಷ್ಟೆ ಮಂತ್ರಿ ಆಡಳಿತವೆಲ್ಲ ರೇವಣ್ಣನವರದ್ದೇ. ಮುಖ್ಯಮಂತ್ರಿ ಬಳಿ ಹಲವು ಬಾರಿ ಹೇಳಿದರೂ ಅವರು ಕಿಮ್ಮತ್ತು ನೀಡಲಿಲ್ಲ. ನಮ್ಮ ನಾಯಕ ಸಿದ್ದರಾಮಯ್ಯನವರಿಗೂ ಯಾವುದೇ ಬೆಲೆ ಇಲ್ಲ. ಇಂತಹ ಸ್ಥಿತಿಯಲ್ಲಿ ಅಲ್ಲಿದ್ದು ಏನು ಮಾಡಬೇಕು. ಎಲ್ಲವನ್ನೂ ಯೋಚಿಸಿಯೇ ಹೊರಗೆ ಬಂದಿದ್ದೇನೆ. ದಯವಿಟ್ಟು ಮತ್ತೆ ಒತ್ತಾಯಿಸಬೇಡಿ ಎಂದು ನಾಗರಾಜ ಹೇಳಿದರು.
ನಾನೇ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ:
ಎಲ್ಲವನ್ನೂ ಶಾಂತವಾಗಿ ಆಲಿಸಿದ ಡಿ.ಕೆ.ಶಿವಕುಮಾರ, ”ಇದೊಂದು ಬಾರಿ ನನ್ನ ಮೇಲೆ ವಿಶ್ವಾಸವಿಡಿ. ನಾನೇ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ. ನಿಮ್ಮ ಪರವಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜೊತೆಗೂ ಮಾತನಾಡುತ್ತೇನೆ. ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಜೊತೆಗೂ ಮಾತನಾಡುತ್ತೇನೆ. ನಿಮ್ಮ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡದಂತೆ ಹೇಳುತ್ತೇನೆ” ಎಂದು ಭರವಸೆ ನೀಡಿದರು.
ನಿಮ್ಮ ಸಮಸ್ಯೆಗಳೇನೇ ಇದ್ದರೂ ಪರಿಹಾರ ಮಾಡುತ್ತೇವೆ. ಸರ್ಕಾರ ಬೀಳಲು ಬಿಡಬೇಡಿ. ರಾಜೀನಾಮೆ ವಾಪಸ್ ತೆಗೆದುಕೊಳ್ಳಿ ಎಂದು ಡಿಕೆ ಶಿವಕುಮಾರ್ ಕೋರಿದರು.
‘ನನಗೆ ತಿಳಿಯದಂತೆ ನನ್ನ ಇಲಾಖೆಯಲ್ಲಿರುವ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ. ರಾಜೀವ್ ವಸತಿ ಯೋಜನೆ ಅರ್ಧಕ್ಕೆ ನಿಂತಿದೆ. ಸಾವಿರಾರು ಕೋಟಿ ರೂ ಅನುದಾನ ಬಿಡುಗಡೆ ಮಾಡಬೇಕಿತ್ತು. ಸಿಎಂ ಬಳಿ ಹೋಗಿ ಕೇಳಿದರೆ ಕ್ಯಾರೇ ಅಂದಿಲ್ಲ’ ಎಂದು ಎಂಟಿಬಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಈ ಎಲ್ಲ ಬೆಳವಣಿಗೆಗಳಿಂದ ಸಾಕಾಗಿ, ಬೇಸೆತ್ತು ರಾಜೀನಾಮೆ ನೀಡಿದ್ದೇನೆ. ಅಧಿಕಾರ ಇಲ್ಲದೆ ಇದ್ದರೂ ಪರವಾಗಿಲ್ಲ. ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ. ಯಾರೇ ಮನವಿ ಮಾಡಿದರೂ ಒಪ್ಪಿಕೊಳ್ಳುವುದಿಲ್ಲ. ನಿಮಗೆ, ದೇವೇಗೌಡರ ಕುಟುಂಬಕ್ಕೆ ಮತ್ತು ಪರಮೇಶ್ವರ್ ಅವರಿಗೆ ಮಾತ್ರ ಮೈತ್ರಿ ಸರ್ಕಾರ ಬೇಕಿರುವುದು. ನಾನಿಲ್ಲಿ ಹೆಸರಿಗಷ್ಟೇ ಸಚಿವ. ಇಲಾಖೆಯ ಎಲ್ಲ ವ್ಯವಹಾರಗಳಲ್ಲೂ ಸಿಎಂ ಮತ್ತು ರೇವಣ್ಣ ಅವರು ಹಸ್ತಕ್ಷೇಪ ಮಾಡುತ್ತಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಆದರೂ ಪಟ್ಟುಬಿಡದ ಶಿವಕುಮಾರ, ನಾಗರಾಜ ಅವರ ಮನವೊಲಿಸಲು ಹಲವು ರೀತಿಯಿಂದ ಪ್ರಯತ್ನ ನಡೆಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ