ಆತ್ಮರಕ್ಷಣೆಗಾಗಿ ಬಾಲಕಿಯರ ಪ್ರತಿಜ್ಞೆ
ಪ್ರಗತಿವಾಹಿನಿ ಸುದ್ದಿ – ಯಮಕನಮರಡಿ ( ಹುಕ್ಕೇರಿ) : ಹೆಣ್ಣು ಮಕ್ಕಳು ಅತ್ಯಮೂಲ್ಯವಾಗಿದ್ದು ಕುಟುಂಬ, ಸಮಾಜದ ಶ್ರೇಯೋಭಿವೃದ್ಧಿಗಾಗಿ ಅನೇಕ ಕೊಡುಗೆಗಳನ್ನು ಕೊಡುತ್ತಿದ್ದಾರೆ. ಆದರೆ ಇಂಥ ಬಾಲಕಿಯರು ವೇಶ್ಯಾವಾಟಿಕೆ, ಅತ್ಯಾಚಾರ, ಕಳ್ಳಸಾಗಾಣಿಕೆಯಂಥ ಸಮಸ್ಯೆಗಳಿಗೆ ಒಳಗಾಗಿ ತಮ್ಮ ಅಮೂಲ್ಯ ಜೀವನವನ್ನು ಅಂದಕಾರದಲ್ಲಿ ಕಳೆಯುವಂತಾಗಿದೆ. ಈ ಸಮಸ್ಯೆಗಳ ಬಗ್ಗೆ ಜಾಗೃತರಾಗಿ ತಮ್ಮ ಅಮೂಲ್ಯ ಜೀವನವನ್ನು ಸಂರಕ್ಷಿಸಿಕೊಳ್ಳುತ್ತೇವೆ ಎಂದು ಯಮಕನಮರಡಿ ಸಿ. ಇ. ಎಸ್. ಪ್ರೌಢ ಶಾಲೆಯ ಕಿಶೋರಿಯರು ಸ್ವ-ಪ್ರತಿಜ್ಞೆ ಮಾಡುವ ಮೂಲಕ ಪಣತೊಟ್ಟಿದ್ದಾರೆ.
ಹೈದರಾಬಾದ್ ಮೈ ಚಾಯ್ಸ್ ಫೌಂಡೇಶನ್, ಆಪರೇಶನ್ ರೆಡ್ ಅಲರ್ಟ ಯೋಜನೆ, ಮಹಿಳಾ ಕಲ್ಯಾಣ ಸಂಸ್ಥೆ, ಹಾಗೂ ಉಜ್ಜಲಾ ಮಹಿಳೆಯರ ರಕ್ಷಣೆ ಮತ್ತು ಪುನರ್ವಸತಿ ಕೇಂದ್ರ ಬೆಳಗಾವಿ ಜಂಟಿಯಾಗಿ ಆಯೋಜಿಸಿದ್ದ ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆ ಕುರಿತು ಜಾಗೃತಿ ಮೂಡಿಸಲು ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದ ಸಿ. ಇ. ಎಸ್. ಪ್ರೌಢ ಶಾಲೆಯ ಕಿಶೋಯರಿಗೆ ಆಯೋಜಿಸಿದ ಮಾನವ ಕಳ್ಳ ಸಾಗಾಣಿಕೆ ತಡೆ ಕಾರ್ಯಕ್ರಮದಲ್ಲಿ ಕಿಶೋರಿಯರು ಈ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಗ್ರಾಮ ಪಂಚಾಯತ್ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆನಂದ ಹೊಳೆಣ್ಣವರ ಮಾತನಾಡಿ ಮಾನವ ಕಳ್ಳಸಾಗಾಣಿಕೆ ಒಂದು ಸಂಘಟಿತ ಅಪರಾಧವಾಗಿದ್ದು ಅಪರಿಚಿತರು ಗ್ರಾಮಕ್ಕೆ ಬಂದು ನಗರಗಳಲ್ಲಿರುವ ಉತ್ತಮ ಅವಕಾಶಗಳ ಬಗ್ಗೆ ಆಮಿಷವೊಡ್ಡಿ ಸಾಗಾಣಿಕೆಗೆ ಗುರಿಪಡಿಸಬಹುದು. ತಂದೆ ಮತ್ತು ತಾಯಿ ಜಾಗೃತರಾದರೇ ಗ್ರಾಮದಲ್ಲಿ ಬಾಲಕಾರ್ಮಿಕ, ಬಾಲ್ಯವಿವಾಹ, ವರದಕ್ಷಿಣೆಯಂಥ ಸಮಸ್ಯೆಗಳನ್ನು ಹೊಡೆದೊಡಿಸಿ ಹೆಣ್ಣು ಮಗುವಿಗೆ ಆರೋಗ್ಯಕರ ವಾತಾವರಣ ನಿರ್ಮಿಸಬಹುದು ಹಾಗೂ ಶಾಲಾಯಿಂದ ಹೊರಗಳಿದ ಮಕ್ಕಳ ಮನೆಯ ಭೇಟಿಯ ಮಾಡಿ ಶಿಕ್ಷಕರು ವರದಿ ನೀಡಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮುಖ್ಯೋಪಾಧ್ಯಾಯ ಎಂ ಆರ್. ಘಸ್ತಿ ಮಾತನಾಡಿ ವಿದ್ಯಾರ್ಥಿಗಳಿಗೆ ಇಂತಹ ವಿಷಯಗಳ ಜಾಗೃತಿ ಮೂಡಿಸುವದು ಇಂದಿನ ಅಗತ್ಯತೆಯಾಗಿದೆ. ಪಾಲಕರು ಕಷ್ಟಪಟ್ಟು ಮಕ್ಕಳನ್ನು ಬೆಳಿಸಿ ಅನೇಕ ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ ಅವುಗಳನ್ನು ಸರಿಯಾದ ದಾರಿಯಲ್ಲಿ ಹೋಗಿ ಸಾಕಾರಗೊಳಿಸಬೇಕಾದುದು ಮಕ್ಕಳ ಕರ್ತವ್ಯ ಎಂದರು.
ಕಾರ್ಯಕ್ರಮದಲ್ಲಿ ಯಮಕನಮರಡಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಅವಕ್ಕ ಮಾದರ ಉಪಾಧ್ಯಕ್ಷರಾದ ಓಂಕಾರ ತುಬಚಿ, ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಎಂ ಎಂ ದವಲಟ್ಟಿ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಸುರೇಖಾ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನು ಸ್ವಾಗತಿಸಿದರು. ಅನೈತಿಕ ಸಾಗಾಣಿಕೆ ತಡೆ ಕುರಿತು ಚಲನಚಿತ್ರ ಪ್ರದರ್ಶನ, ಕೊನೆಯಲ್ಲಿ ಎಂ ಎಂ ಗಡಗಲಿ ವಂದಿಸಿದರು.///
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ