ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಧಾನಸಭಾ ಕಲಾಪ ಆರಂಭವಾಗುತ್ತಿದ್ದಂತೆಯೇ ಬಿಜೆಪಿ ಸದಸ್ಯರು ಸರ್ಕಾರದ ವಿರುದ್ಧ ಮುಗಿ ಬಿದ್ದು, ಗದ್ದಲ ನಡೆಸಿದ ಘಟನೆ ನಡೆದಿದೆ.
ವಿಧಾನಸಭೆ ಪ್ರಶ್ನೋತ್ತರ ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಶಾಸಕ ಶಿವಲಿಂಗೆಗೌಡ ಪ್ರಶ್ನೆ ಕೇಳುತ್ತಿದ್ದಂತೆ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ಆರ್.ಅಶೋಕ್ ಸೇರಿದಂತೆ ಬಿಜೆಪಿ ಸದಸ್ಯರು ಮೊದಲು ಗ್ಯಾರಂಟಿ ಯೋಜನೆಗಳ ಚರ್ಚೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಸ್ಪೀಕರ್ ಯು.ಟಿ.ಖಾದರ್, ಪ್ರಶ್ನೋತ್ತರ ಕಲಾಪ ಆರಂಭವಾಗಿದೆ. ನಂತರ ಚರ್ಚೆಗೆ ಅವಕಾಶ ನೀಡುವುದಾಗಿ ತಿಳಿಸಿದರು. ಸ್ಪೀಕರ್ ಮಾತಿಗೆ ಬಗ್ಗದ ಬಿಜೆಪಿ ಸದಸ್ಯರು ಈಗಲೇ ಚರ್ಚೆಗೆ ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದು ಗಲಾಟೆ ಆರಂಭಿಸಿದರು. ಈಗ ಚರ್ಚೆಗೆ ಅವಕಾಶ ನೀಡಲು ಸಾಧ್ಯವಿಲ್ಲ, ಪ್ರಶ್ನೋತ್ತರ ಕಲಾಪ ಆರಂಭವಾಗಿದೆ. ಶಾಸಕರ ಪ್ರಶ್ನೆಗೆ ಬೆಲೆಯಿಲ್ಲವೇ? ಈ ರೀತಿ ಗದ್ದಲ- ಗಲಾಟೆ ನಡೆಸುವುದು ಸರಿಯಲ್ಲ, ಜವಾಬ್ದಾರಿಯುತ ಸ್ಥಾನದಲ್ಲಿರುವವರು ಸ್ಪೀಕರ್ ಮಾತನ್ನೂ ಕೇಳಿಸಿಕೊಳ್ಳದೆ ಗಲಾಟೆ ಮಾಡುವುದು ಎಷ್ಟು ಸೂಕ್ತ ಎಂದು ಗರಂ ಆದರು. ಆದರೂ ಕೇಳಿಸಿಕೊಳ್ಳದ ಬಿಜೆಪಿ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆ ಕೂಗಲು ಆರಂಭಿಸಿದರು.
ಈ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್, ನಾವು ಜನರಿಗೆ ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆ ಜಾರಿಗೆ ತರುತ್ತೇವೆ ಎಂದು ಸಮಾಧಾನ ಪಡಿಸಲು ಮುಂದಾದರೂ ಬಿಜೆಪಿ ನಾಯಕರು ತಣ್ಣಗಾಗಿಲ್ಲ, ಈ ವೇಳೆ ಎದ್ದು ನಿಂತ ಸಿಎಂ ಸಿದ್ದರಾಮಯ್ಯ, ಬಿಜೆಪಿ ಸದಸ್ಯರು ಈ ರೀತಿ ವರ್ತಿಸುವುದು ಸರಿಯಲ್ಲ. ಮೊದಲು ಮೊಂಡಾಟ ಬಿಡಿ. ಮೊಂದಾಟ ಮಾಡುವುದರಿಂದ ಏನೂ ಪ್ರಯೋಜನವಿಲ್ಲ ಎಂದು ಗುಡುಗಿದರು.
ಸಿಎಂ ಸಿದ್ದರಾಮಯ್ಯ ಮೊಂಡಾಟ ಪದ ಬಳಸಿದ್ದಕ್ಕೆ ಇನ್ನಷ್ಟು ಕೋಪಗೊಂಡ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟಿಸಿದರು. ಸದನದಲ್ಲಿ ಗದ್ದಲ-ಕೋಲಾಹಲ ಆರಂಭವಾದ ಹಿನ್ನೆಲೆಯಲ್ಲಿ ಸ್ಪೀಕರ್ ಯು.ಟಿ.ಖಾದರ್ ಕಲಾಪವನ್ನು 15 ನಿಮಿಷ ಮುಂದೂಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ