Uncategorized

*ಈ ಟಿಪ್ಪಣಿಗಳ ಹಣ ಪಕ್ಷದ ಮಂಡಿಗೋ ಅಥವಾ YstTax ಹುಂಡಿಗೋ?; ಮತ್ತೆ ಕುಟುಕಿದ ಜೆಡಿಎಸ್*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಜೆಡಿಎಸ್ ವಾಕ್ಸಮರ ಮುಂದುವರೆಸಿದೆ. ಸಿಎಂ ಗೃಹಕಚೇರಿಯಲ್ಲಿಯೇ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಮ್ಮ ಆರೋಪಕ್ಕೆ ದಾಖಲೆ ನೀಡುವುದಾಗಿಯೂ ಹೇಳಿದ್ದರು. ಇದರ ಬೆನ್ನಲ್ಲೇ ಜೆಡಿಎಸ್ ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತಷ್ಟು ವಾಗ್ದಾಳಿ ಮುಂದುವರೆಸಿದೆ.

ಸತ್ಯಕ್ಕೆ ಸಮಾಧಿ ಕಟ್ಟುವುದು ಕಾಂಗ್ರೆಸ್ ಚಾಳಿ, ಅದು ಮೂಲತಃ ಸುಳ್ಳುಗಳ ವಾಚಾಳಿ. ಮುಖದ ಮೇಲೆ ಕೊಚ್ಚೆ ಹಾಕಿಕೊಂಡವನು ಆ ಗಲೀಜು ಅನ್ಯರ ಕಣ್ಣಿಗೆ ಬೀಳದಿರಲೆಂದು ಇನ್ನೊಬ್ಬರ ಮೇಲೆ ಅದನ್ನೇ ಎರಚಿ ಕುಣಿದನಂತೆ! ಹಂಗಿದೆ ನೋಡಿ ʼಕಮೀಷನ್ ಕಾಂಗ್ರೆಸ್ʼನ ‘ ಹೊಸ ವರಸೆ ಮತ್ತು ಹೊಸ ಕಸವರಿಕೆ ಕಮೀಷನ್ ಕಾಂಗ್ರೆಸ್ ಎಂದು ಕಿಡಿಕಾರಿದ್ದಾರೆ.

ವೆಸ್ಟ್‌ ಎಂಡ್‌ ಲೆಕ್ಕ ಇರಲಿ, ‘ ಸಿಎಂ ಟಿಪ್ಪಣಿ ಬಿಕರಿ’ಗೆ ಲೆಕ್ಕ ಇಡಿ. ಒಂದು ಎಸಿ ಹುದ್ದೆ, 3 ಟಿಪ್ಪಣಿ!! ಇದ್ಯಾವ ಸೀಮೆ ಅರ್ಥಶಾಸ್ತ್ರ?? ಕೌಟಿಲ್ಯನೂ ಬೆಚ್ಚಿಬೀಳುವ ಆಡಳಿತ ಹಾಗೂ ರಾಜನೀತಿ!! ಈ ಟಿಪ್ಪಣಿಗಳ ಹಣ ಪಕ್ಷದ ಮಂಡಿಗೋ ಅಥವಾ #YstTax ಹುಂಡಿಗೋ? ಇಲ್ಲೇ ಸಾಕ್ಷ್ಯ ಇದೆ. ಪಾಪ.. ಬೂಟಾಟಿಕೆ ದಾಸಯ್ಯನಿಗೆ ಮೈಯ್ಯೆಲ್ಲಾ ಪಂಗನಾಮ.

ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು YstTax ಬಗ್ಗೆ ಹೇಳಿ, ʼಕಾಸಿಗಾಗಿ ಹುದ್ದೆʼ ದಂಧೆಯನ್ನು ದಾಖಲೆ ಸಮೇತ ಬಿಚ್ಚಿಟ್ಟರೂ ಆ ಅಸಹ್ಯ ತನ್ನದಲ್ಲ ಎನ್ನುವ ‘ ಅವಿವೇಕ ‘ ಕಾಂಗ್ರೆಸ್ ಪಕ್ಷದ್ದು. ಆ ಅವಿವೇಕವನ್ನು ಮುಚ್ಚಿಕೊಳ್ಳಲು ಈಗ ವೆಸ್ಟ್ʼಎಂಡ್ ಎನ್ನುವ ಸವಕಲು ವಿಷಯ ನೆನಪು ಮಾಡಿಕೊಂಡಿದೆ ಎಂದು ಜೆಡಿಎಸ್ ಸರಣಿ ಟ್ವೀಟ್ ಮೂಲಕ ಕುಟುಕಿದೆ.

ವೆಸ್ಟ್‌ʼಎಂಡ್‌ ಬಾಡಿಗೆ ಮಾತಿರಲಿ; ಲುಲು ಮಾಲು ವಿಷಯಕ್ಕೆ ಬರೋಣ. ಹೊಲ ಉತ್ತಿ, ಬೀಜ ಬಿತ್ತಿ ಬೆವರಿನ ಹೊಳೆ ಹರಿಸಿ ತೆಗೆದ ಫಸಲಿಗೆ ಲುಲು ಮಾಡಬಹುದಾ!? ಒಂದು ವೇಳೆ ಮಾಡಬಹುದಾದರೆ, ನಿಮ್ಮ ʼಲುಲುಕುಮಾರ್ʼಗಿಂತ ಬೆಸ್ಟ್‌ ಎಕನಾಮಿಸ್ಟ್‌ ಇನ್ನೊಬ್ಬರಿಲ್ಲ!! ಹಾಗಿದ್ದರೆ, ಅವರನ್ನೇ ವಿತ್ತಮಂತ್ರಿ ಮಾಡಬಹುದಿತ್ತಲ್ಲ!? ಎಂದು ವ್ಯಂಗ್ಯವಾಡಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button