ವೈದ್ಯಕೀಯರಂಗದಲ್ಲಿ ಎಲ್ಲರಿಗೂ ತಕ್ಕಮಟ್ಟಿಗೆ ಜ್ಞಾನ ಅಗತ್ಯ, ಏಕೆ?
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಹೃದಯಾಘಾತ ಹಾಗೂ ಅಪಘಾತಗಳಿಂದ ಅಸುನೀಗುವವರ ಸಂಖ್ಯೆ ಅಧಿಕವಾಗುತ್ತಿದೆ. ಆದ್ದರಿಂದ ವೈದ್ಯಕೀಯರಂಗದಲ್ಲಿ ಅವರಿವರೆನ್ನದೇ ಎಲ್ಲರೂ ತಕ್ಕಮಟ್ಟಿನ ಜ್ಞಾನ ಹೊಂದಿರುವುದು ಅತ್ಯವಶ್ಯಕವಾಗಿದೆ ಎಂದು ಯು ಎಸ್ ಎಮ್ ಕೆ ಎಲ್ ಇ ಯ ನಿರ್ದೇಶಕ ಡಾ. ಹೆಚ್ ಬಿ ರಾಜಶೇಖರ ಹೇಳಿದ್ದಾರೆ.
ಅವರು ಇಂದು ನಗರದ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಸಿಪಿಆರ್ ದಿನಾಚರಣೆಯ ಅಂಗವಾಗಿ ಆರೋಗ್ಯ ಸಹಾಯಕಿ ಪ್ರಶಿಕ್ಷಣಾರ್ಥಿಗಳು ಹಾಗೂ ನಗರದ ಜೈನ್ ಕಾಲೇಜಿನ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಬಿಎಲ್ಎಸ್ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ತುರ್ತು ಸಂದರ್ಭಗಳು ಜೀವನದಲ್ಲಿ ಹೇಳಿಕೇಳಿ ಬರುವುದಿಲ್ಲ. ಆದರೆ ಆ ಸಂದರ್ಭವನ್ನು ಎದುರಿಸುವ ತಾಳ್ಮೆ ಜ್ಞಾನವನ್ನು ಹೊಂದಿ ತಮ್ಮ ಹಾಗೂ ಪರಿಸ್ಥಿತಿಗೊಳಗಾದವರ ಜೀವ ರಕ್ಷಣೆಗೆ ಕಾರಣಿಭೂತರಾಗಿ ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿಯೋಜಿತ ನಿರ್ದೇಶಕ ಡಾ. ಆರ್ ಜಿ ನೆಲವಿಗಿ ಮಾತನಾಡುತ್ತ, ಸಿ ಪಿ ಆರ್ ಇದು ಜೀವ ರಕ್ಷಣೆಯ ಅದ್ಭುತ ಕಲೆಯಾಗಿದ್ದು ಪ್ರತಿಯೊಬ್ಬರೂ ಅರಿಯಬೇಕಾದ ವಿಷಯವಾಗಿದೆ. ಅಲ್ಲದೇ ಮಾನವೀಯತೆಯನ್ನು ಮೆರೆಯಲು ಅವಶ್ಯಕ ಅಂಶವಾಗಿದೆ. ಆದ್ದರಿಂದ ಇದನ್ನು ಕಲಿಯಿರಿ ಎಂದು ಪ್ರಶಿಕ್ಷಣಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಐಎಪಿಯ ಸದಸ್ಯ ಡಾ. ಶರದ ಶ್ರೇಷ್ಠಿ, ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಚಿಕ್ಕಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಎಮ್ ಎಸ್ ಕಡ್ಡಿ, ಡಾ. ಅನಿತಾ ಮೋದಗೆ , ಡಾ. ಸೌಮ್ಯ ವೇರ್ಣೇಕರ, ಡಾ. ಸಂತೋಷ ಕರಮಸಿ, ಡಾ. ಬಸವರಾಜ ಕುಡಸೋಮಣ್ಣವರ ಹಾಗೂ ಡಾ. ಪ್ರಜ್ಞಾ ಕುರಕುರೆ ಮುಂತಾದವರು ತರಬೇತಿ ನೀಡಿದರು.
ಕಾರ್ಯಕ್ರಮದಲ್ಲಿ ಜೈನ್ ಕಾಲೇಜಿನ ೨೫ ಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ೨೫ಕ್ಕೂ ಅಧಿಕ ಆರೋಗ್ಯ ಸಹಾಯಕಿಯರು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಡಾ. ಪ್ರಜ್ಞಾ ಕುರಕುರೆ ನಿರೂಪಿಸಿದರು, ಡಾ. ಬಸವರಾಜ ಕುಡಸೋಮಣ್ಣವರ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ