Kannada NewsLatest

15 ರೂ.ಗೆ ಪೆಟ್ರೋಲ್ ಸಿಗುವ ದಿನ ದೂರವಿಲ್ಲ: ನಿತಿನ್ ಗಡ್ಕರಿ

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಕೇವಲ 15 ರೂ.ಗೆ ಒಂದು ಲೀಟರ್ ಪೆಟ್ರೋಲ್ ಸಿಗುವ ದಿನಗಳು ಇನ್ನು ದೂರವಿಲ್ಲ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

“ದೇಶದಲ್ಲಿ ಪೆಟ್ರೋಲ್ ಬೆಲೆ 100 ರೂ. ಮೀರಿ ಹೋಗಿದೆ. ರಾಜ್ಯಗಳು ಪೆಟ್ರೋಲ್ ಮೇಲಿನ ತೆರಿಗೆ ಕಡಿಮೆ ಮಾಡಿದರೂ 100ರೂ.ಗಿಂತ ಕಡಿಮೆ ಬೆಲೆಗೆ ಸಿಗುತ್ತಿಲ್ಲ. ಹೀಗಾಗಿ ಇದಕ್ಕೆ ಪರ್ಯಾಯವಾಗಿ ಎಥೆನಾಲ್ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು ಸಂಪೂರ್ಣ ಎಥೆನಾಲ್ ನಿಂದಲೇ ಓಡುವ ವಾಹನಗಳು ಸಹ ತಯಾರಾಗುತ್ತಿವೆ. ಸದ್ಯ ಪೆಟ್ರೋಲ್ ಗೆ ಶೇ.20ರಷ್ಟು ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ. ಹೀಗಾದರೆ ಪೆಟ್ರೋಲ್ ಕೇವಲ 15 ರೂ.ಗೆ ಸಿಗುವ ದಿನಗಳು ದೂರವಿಲ್ಲ” ಎಂದು ಅವರು ಹೇಳಿದ್ದಾರೆ.

ದೇಶದಲ್ಲಿ ಬರುವ ದಿನಗಳಲ್ಲಿ ಕೇವಲ ಎಥೆನಾಲ್‌ನಿಂದಲೇ ಸಂಚರಿಸುವ ವಾಹನಗಳನ್ನು ಬಜಾಜ್‌, ಟಿವಿಎಸ್‌, ಹೀರೋ ಕಂಪನಿಗಳು ಬಿಡುಗಡೆ ಮಾಡಲಿವೆ. ಬರುವ ಆಗಸ್ಟ್‌ ವೇಳೆಗೆ ಬಿಡುಗಡೆಯಾಗಲಿರುವ ಟೊಯೊಟಾ ಕಂಪನಿಯ ಕ್ಯಾಮ್ರಿ ಕಾರು ಸಂಪೂರ್ಣವಾಗಿ ಎಥೆನಾಲ್‌ನಿಂದ ಓಡಲಿದೆ. ಜೊತೆಗೆ ಈ ಕಾರು ವಿದ್ಯುತ್‌ ಅನ್ನೂ ಉತ್ಪಾದಿಸಲಿದೆ ಎಂದು ಗಡ್ಕರಿ ಮಾಹಿತಿ ನೀಡಿದ್ದಾರೆ.

ದೇಶದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಎಥೆನಾಲ್ ಉತ್ಪಾದನೆ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿದೆ. ರೈತರು ಕೂಡ ಎಥೆನಾಲ್ ಉತ್ಪಾದನೆಯ ಲಾಭ ಪಡೆಯಲಿದ್ದಾರೆ. ಮುಂಬರುವ ದಿನಗಳಲ್ಲಿ ಎಥೆನಾಲ್ ಉತ್ಪಾದನೆ ಇನ್ನೂ ಹೆಚ್ಚು ಪ್ರಮಾಣದಲ್ಲಿ ಆಗಲಿದ್ದು ಆಗ ಪೆಟ್ರೋಲ್ ಬೇಡಿಕೆ ಕಡಿಮೆಯಾಗಿ ಅದರ ದರವೂ ಕಡಿಮೆಯಾಗಲಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button