ಡಿಸಿಎಂ ಧಿಡೀರ್ ಬೆಂಗಳೂರು ರೌಂಡ್ಸ್; ಬೆಳ್ಳಂ ಬೆಳಗ್ಗೆ ಇಂದಿರಾ ಕ್ಯಾಂಟೀನ್ ದುರವಸ್ಥೆ ದರ್ಶನ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಡಿಸಿಎಂ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಿ.ಕೆ ಶಿವಕುಮಾರ್ ಅವರು ಭಾನುವಾರ ಬೆಳಗ್ಗೆ ದಿಢೀರ್ ಬೆಂಗಳೂರು ಪ್ರದಕ್ಷಣೆ ಹಮ್ಮಿಕೊಂಡು ಮೊದಲಿಗೆ ಇಂದಿರಾ ಗಾಂಧಿ ಕ್ಯಾಂಟೀನ್ ಪರಿಸ್ಥಿತಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಅವರು ಪಾಲಿಕೆಯ ಯಾವುದೇ ಅಧಿಕಾರಿಗಳಿಗೆ, ಸಿಬ್ಬಂದಿಗೆ ಮುನ್ಸೂಚನೆ ನೀಡಿರಲಿಲ್ಲ. ಮೊದಲು ದಾಸರಹಳ್ಳಿ ವಲಯದ ವಾರ್ಡ್ ಸಂಖ್ಯೆ 39 ಚೊಕ್ಕಸಂದ್ರದ ಇಂದಿರಾ ಗಾಂಧಿ ಕ್ಯಾಂಟೀನ್ ಗೆ ಬೆಳಗ್ಗೆ 9.10 ಕ್ಕೆ ಭೇಟಿ ನೀಡಿ ತಿಂಡಿ ಕೇಳಿದರು.
ಆದರೆ ಅದಾಗಲೇ ಅಲ್ಲಿ ತಿಂಡಿ ಖಾಲಿ ಆಗಿತ್ತು. ಎಷ್ಟು ಪ್ಲೇಟ್ ಬರುತ್ತದೆ ಎಂದು ಕ್ಯಾಂಟೀನ್ ಮ್ಯಾನೇಜರ್ ಗೆ ಕೇಳಿದಾಗ 208 ಪ್ಲೇಟ್ ಬಂದು ಖಾಲಿ ಆಗಿದೆ ಎಂದರು. ಮಾಧ್ಯಮ ಮಿತ್ರರಿಗೆ ತಿಂಡಿ ಕೊಡಿಸೋಣ ಅಂದುಕೊಂಡೆ, ಆದರೆ ಖಾಲಿ ಆಗಿದೆಯಲ್ಲ ಎಂದು ನಗೆ ಬೀರಿದರು. ಸಾಕಷ್ಟು ಪ್ರಮಾಣದಲ್ಲಿ ತಿಂಡಿ ಪೂರೈಕೆ ಖಾತರಿಪಡಿಸಿಕೊಳ್ಳಲು ಕೊಳ್ಳಲು ಸೂಚನೆ ನೀಡಿದರು.
ನಂತರ ದಾಸರಹಳ್ಳಿಯ 15ನೇ ವಾರ್ಡ್ ಕ್ಯಾಂಟೀನ್ ಗೆ ಭೇಟಿ ನೀಡಿ ತಾವು ಉಪ್ಪಿಟ್ಟು, ಕೇಸರಿಬಾತ್ ಸವಿದರು. ಈ ಸಂದರ್ಭದಲ್ಲಿ ಪಕ್ಕದಲ್ಲಿ ತಿಂಡಿ ತಿನ್ನುತ್ತಿದ್ದವರನ್ನು ಮಾತನಾಡಿಸಿ, ಮಾಹಿತಿ ಪಡೆದರು. ಆ ವ್ಯಕ್ತಿಯಿಂದ ಕ್ಯಾಂಟೀನ್ ಸಿಬ್ಬಂದಿ ₹5 ಬದಲು ₹10 ಪಡೆದಿರುವುದು ಗಮನಕ್ಕೆ ಬಂದಾಗ ಅದನ್ನು ಪ್ರಶ್ನಿಸಿದರು. ಇದೇ ಸಮಯದಲ್ಲಿ ಇಂದಿರಾ ಕ್ಯಾಂಟೀನ್ ಕುಂದುಕೊರತೆ ದೂರು ಸಲ್ಲಿಸುವ ಸಹಾಯವಾಣಿಗೆ ಕರೆ ಮಾಡಿಸಿದಾಗ ಆ ಸಂಪರ್ಕ ದುರಸ್ಥಿಯಲ್ಲಿರುವುದನ್ನು ಗಮನಿಸಿದರು. ತಕ್ಷಣ ಸರಿಪಡಿಸಲು ಸೂಚನೆ ನೀಡಿದರು.
ಅಲ್ಲದೆ ಪ್ರತಿ ವಾರ, ತಿಂಗಳಿಗೆ ಇಂದಿರಾ ಕ್ಯಾಂಟೀನ್ ಗೆ ಭೇಟಿ ನೀಡಿ ಗುಣಮಟ್ಟ ಪರಿಶೀಲಿಸುವಂತೆ ಪಾಲಿಕೆ ಆರೋಗ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ