ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮೀ ಯೋಜನೆ ನೋಂದಣಿ ಇದೀಗ ಮತ್ತಷ್ಟು ಸರಳಗೊಂಡಿದೆ. ಅರ್ಹ ಫಲಾನುಭವಿಗಳು ನೇರವಾಗಿ ತಮ್ಮ ಹತ್ತಿರದ ನೋಂದಣಿ ಕೇಂದ್ರಗಳಿಗೆ ತಮ್ಮ ದಾಖಲೆಗಳೊಂದಿಗೆ ತೆರಳಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಇದಕ್ಕೂ ಮೊದಲು ಅರ್ಹ ಫಲಾನುಭವಿಗಳ ಮೊಬೈಲ್ ಸಂಖ್ಯೆಗೆ ಮೆಸೇಜ್ (ಶೆಡ್ಯೂಲಿಂಗ್) ಬಂದರಷ್ಟೇ ನೋಂದಣಿ ಕೇಂದ್ರಗಳಿಗೆ ತೆರಳಬೇಕಿತ್ತು. ಇದೀಗ ಎಸ್ಎಂಎಸ್ ಅವಲಂಭಿಸದೇ ನೇರವಾಗಿ ನೋಂದಣಿ ಕೇಂದ್ರಗಳಿಗೆ ದಾಖಲಾತಿಗಳೊಂದಿಗೆ ತೆರಳಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದು ಸಚಿವರು ತಿಳಿಸಿದ್ದಾರೆ.
ಯೋಜನೆಗೆ ಚಾಲನೆ ಸಿಕ್ಕ 7 ದಿನಗಳಲ್ಲೇ 50 ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗಳು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಸಚಿವರು ಹರ್ಷ ವ್ಯಕ್ತಪಡಿಸಿದರು.
ಇದೇ ವೇಳೆ ಗೃಹಲಕ್ಷ್ಮೀ ನೋಂದಣಿಗೆ ಹಣ ಪಡೆದರೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು. ಸೇವಾ ಕೇಂದ್ರಗಳಲ್ಲಿ ಅಸಡ್ಡೆ ತೋರಿದರೆ ಅಂತಹವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ