ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಚಿವರ ವಿರುದ್ಧ ಶಾಸಕರು ಬರೆದಿದ್ದಾರೆ ಎನ್ನುವ ಪತ್ರ ಬೋಗಸ್. ಯಾರದ್ದೋ ಪತ್ರಕ್ಕೆ ಯಾವುದೋ ಸಹಿ ಸೇರಿಸಿ ಹಬ್ಬಿಸಿದರೆ ಅದಕ್ಕೆ ಪ್ರತಿಕ್ರಿಯೆ ನೀಡಲು ಆಗುವುದಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ನಾವು ಶಾಸಕರ ಸಭೆ ಕರೆದಿದ್ದು, ಅವರ ಜೊತೆ ಮಾತನಾಡುತ್ತೇವೆ. ಈ ವರ್ಷ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ನೀಡಲು ಆಗುವುದಿಲ್ಲ. ನೀರಾವರಿ ಸಚಿವನಾಗಿ ನನ್ನ ಇಲಾಖೆಗೂ ನೀಡಲು ಆಗುವುದಿಲ್ಲ. ಈ ವಿಚಾರವನ್ನು ಶಾಸಕಾಂಗ ಪಕ್ಷದ ಸಭೆಯಲ್ಲಿ ವಿವರಿಸುತ್ತೇವೆ ಎಂದರು.
ಕಳೆದ ಸರ್ಕಾರ ರಾಜ್ಯದ ಆರ್ಥಿಕತೆ ದಿವಾಳಿ ಮಾಡಿದೆ. ಹೀಗಾಗಿ ಬಜೆಟ್ ಮಂಡನೆ ಸಮಯದಲ್ಲಿ ಮಂತ್ರಿಗಳು ಕೂಡ ತಾಳ್ಮೆ ಇಟ್ಟುಕೊಳ್ಳಬೇಕು ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಕಳೆದ ಸರ್ಕಾರದ ತಪ್ಪುಗಳನ್ನು ಸರಿಪಡಿಸಬೇಕು. ಜತೆಗೆ ಗ್ಯಾರಂಟಿ ಮಾತನ್ನೂ ಉಳಿಸಿಕೊಳ್ಳಬೇಕು.
ಬಿಜೆಪಿ ಅವಧಿಯಲ್ಲಿ ಆದ ಗಲಭೆ ವೇಳೆ ಅಮಾಯಕರ ಮೇಲೆ ಪ್ರಕರಣ ದಾಖಲಿಸಿರುವ ಬಗ್ಗೆ ಕೇಳಿದಾಗ, “ನಿಜ, ಅನೇಕ ಪ್ರಕರಣಗಳಲ್ಲಿ ಅಮಾಯಕರ ಮೇಲೆ ಕೇಸು ದಾಖಲಿಸಲಾಗಿದೆ. ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ಅನೇಕ ಕಡೆಗಳಲ್ಲಿ ಈ ರೀತಿ ಪ್ರಕರಣ ದಾಖಲಿಸಿದ್ದಾರೆ. ಸರ್ಕಾರದ ವಿರುದ್ಧ ಹೋರಾಟ ಮಾಡಿದ್ದಕ್ಕೆ ನಮ್ಮ ಮೇಲೆ ಎಷ್ಟು ಪ್ರಕರಣ ದಾಖಲಿಸಿದ್ದರು. ರೈತ ಸಂಘ, ಕನ್ನಡ ಸಂಘಟನೆಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ” ಎಂದು ತಿಳಿಸಿದರು.
ಉಡುಪಿ ಕಾಲೇಜು ವಿಡಿಯೋ ಪ್ರಕರಣ ರಾಜಕೀಯ ಸ್ವರೂಪ ಪಡೆಯುತ್ತಿರುವ ಬಗ್ಗೆ ಕೇಳಿದಾಗ, “ಈ ಬಗ್ಗೆ ನಮಗೆ ಮಾಹಿತಿ ಇಲ್ಲ. ಗೃಹಮಂತ್ರಿಗಳಿಂದ ಮಾಹಿತಿ ಪಡೆದ ಬಳಿಕ ಮಾತನಾಡುತ್ತೇನೆ” ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ