*ಪಾದಚಾರಿಗಳು ಹಾಗೂ ಬೀದಿಬದಿ ವ್ಯಾಪಾರಿಗಳ ಹಿತ ರಕ್ಷಣೆಗೆ ಕ್ರಮ: ಡಿಸಿಎಂ ಡಿ.ಕೆ. ಶಿವಕುಮಾರ್*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೆಂಗಳೂರಿನ ಬಹುತೇಕ ರಸ್ತೆಗಳಲ್ಲಿ ಪಾದಚಾರಿ ಮಾರ್ಗದಲ್ಲಿ ಜನರಿಗೆ ಓಡಾಡಲು ಅವಕಾಶವೇ ಇಲ್ಲವಾಗಿದೆ. ಹೀಗಾಗಿ ಬೀದಿಬದಿ ವ್ಯಾಪಾರಿಗಳ ಹಿತ ರಕ್ಷಣೆ ಜತೆಗೆ ಪಾದಚಾರಿ ಮಾರ್ಗದಲ್ಲಿ ಸುಗಮ ಸಂಚಾರಕ್ಕೆ ಅಗತ್ಯ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಜ್ಞಾನಭಾರತಿ ಸಭಾಂಗಣದ ಬಳಿ ಸೋಮವಾರ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, “ಬೀದಿ ಬದಿ ವ್ಯಾಪಾರಿಗಳನ್ನು ಖಾಲಿ ಮಾಡಿಸಬೇಕು ಎಂದು ಅನೇಕ ಒತ್ತಡವಿದೆ. ನಾನೇ ಖುದ್ದಾಗಿ ಪರಿಶೀಲನೆ ನಡೆಸಿದ್ದೇನೆ. ಅನೇಕ ಕಡೆ ರಸ್ತೆಯೇ ಇಲ್ಲ. ಬೀದಿ ವ್ಯಾಪಾರಿಗಳ ವಿರುದ್ದ ನಾವಿಲ್ಲ, ಅವರಿಗೆ ತೊಂದರೆ ನೀಡುವ ಉದ್ದೇಶ ನಮ್ಮದಲ್ಲ. ಅವರು ಕೂಡ ಬದುಕಬೇಕು, ಜೀವನ ಮಾಡಬೇಕು. ಆದರೆ ಜನರ ಓಡಾಟಕ್ಕೆ ಪಾದಚಾರಿ ಮಾರ್ಗದಲ್ಲಿ ದಾರಿ ಬಿಡಬೇಕು. ಹಾಗೇ ದಾರಿ ಬಿಟ್ಟಿದ್ದರೆ ಯಾವುದೇ ರೀತಿ ಅಭ್ಯಂತರವಿಲ್ಲ ಎಂದರು.
ಜೊತೆಗೆ ಜನರು ಓಡಾಡಲು ಜಾಗವೂ ಬೇಕಲ್ಲವೇ. ಪಾದಾಚಾರಿ ಮಾರ್ಗದಲ್ಲಿ ಜನರೂ ಓಡಾಡಬೇಕು, ಅವರು ಇರಬೇಕು. ಈ ವಿಚಾರವಾಗಿ ಅನೇಕರು ಬಂದು ದೂರು ನೀಡಿದ್ದಾರೆ. ಇಬ್ಬರ ಹಿತ ಕಾಯಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ” ಎಂದು ತಿಳಿಸಿದರು.
ತಮ್ಮ ವಿರುದ್ಧ CBI ದಾಖಲಿಸಿದ್ದ ಪ್ರಕರಣಕ್ಕೆ ಹೈಕೋರ್ಟ್ ನೀಡಿದ್ದ ತಡೆಯಾಜ್ಞೆ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿರುವ ಬಗ್ಗೆ ಪ್ರಶ್ನಿಸಿದಾಗ, “ತೀರ್ಪು ನೀಡಿರುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ನನಗೆ ದೇಶದ ನ್ಯಾಯಾಂಗ ವ್ಯವಸ್ಥೆ ಮೇಲೆ ಗೌರವ, ನಂಬಿಕೆ ಇದೆ. ನ್ಯಾಯ ನೀಡುವ ಸ್ಥಾನದಿಂದ ಅನ್ಯಾಯ ಆಗುವುದಿಲ್ಲ ಎಂಬ ನಂಬಿಕೆ ಇದೆ. ನನ್ನ ಮೇಲೆ ಏನೇ ಸುಳ್ಳು ಕೇಸು ಹಾಕಿದರೂ ನ್ಯಾಯಲಯದಲ್ಲಿ ನನಗೆ ನ್ಯಾಯ ಸಿಗಲಿದೆ. ಈ ಸುಳ್ಳು ಕೇಸಿನ ಬಗ್ಗೆ ರಾಜ್ಯದ ಜನರಿಗೆ ಮುಂದೊಂದು ದಿನ ವಿವರಿಸುತ್ತೇನೆ. ಈಗ ಆ ವಿಚಾರವಾಗಿ ಮಾತನಾಡುವುದಿಲ್ಲ” ಎಂದು ಪ್ರತಿಕ್ರಿಯಿಸಿದರು.
ರಾಹುಲ್ ಗಾಂಧಿ ಅವರು ರಾಜ್ಯ ನಾಯಕರನ್ನು ದೆಹಲಿಗೆ ಕರೆದಿರುವ ಬಗ್ಗೆ ಕೇಳಿದಾಗ, “ರಾಹುಲ್ ಗಾಂಧಿ ಅವರು ಬೆಂಗಳೂರಿಗೆ ಬಂದಾಗ ಈ ಸಭೆ ನಡೆಸಬೇಕಿತ್ತು, ಅದೇ ದಿನ ಉಮ್ಮನ್ ಚಾಂಡಿ ನಿಧನ ಹೊಂದಿದರು. ಆದ ಕಾರಣ ಅವತ್ತು ಇದ್ದಂತಹ ಸಿಎಲ್‌ಪಿ ಮೀಟಿಂಗ್ ಸಹ ರದ್ದಾಗಿತ್ತು. ರಾಜ್ಯ ಸರ್ಕಾರ ಈಗಾಗಲೇ 4 ಗ್ಯಾರಂಟಿಗಳು ಜಾರಿಗೆ ತಂದಿದ್ದು, ಅವುಗಳನ್ನು ಹೇಗೆ ಪ್ರಚಾರ ಮಾಡಬೇಕು. ಹಾಗೂ ಮುಂದಿನ ದಿನಗಳಲ್ಲಿ ಜನಪರ ಯೋಜನೆಗಳನ್ನು ಹೇಗೆ ತೆಗೆದುಕೊಳ್ಳಬೇಕು ಎಂದು ಚರ್ಚೆ ಮಾಡಲಾಗುವುದು. ಮುಂದೆ ಲೋಕಸಭಾ ಚುನಾವಣೆ ಇದೆ, ಹಿರಿಯ ನಾಯಕರಿಗೆ ಜವಾಬ್ದಾರಿ ನೀಡಬೇಕಾಗಿದೆ. ಅಭ್ಯರ್ಥಿಗಳ ಆಯ್ಕೆ ಹೇಗಿರಬೇಕು ಎಂಬ ವಿಚಾರವಾಗಿ ನಾವು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕಿದೆ. ಎಲ್ಲರು ಒಟ್ಟಾಗಿ ಕೆಲಸ ಮಾಡಬೇಕಿದೆ. ಇದಕ್ಕಾಗಿ ಕೆಲವು ಸಲಹೆ ನೀಡಲಾಗುವುದು. ” ಎಂದು ತಿಳಿಸಿದರು.
ಸರ್ಕಾರ ಮತ್ತು ಪಕ್ಷದ ನಡುವೆ ಸಮನ್ವಯ ಸಾಧಿಸಲು ಸಮಿತಿ ಮಾಡಲಾಗುತ್ತದೆಯೇ ಎನ್ನುವ ಪ್ರಶ್ನೆಗೆ “ನಾನೇ ಇಲ್ಲವೇ ನಾನು ಸರ್ಕಾರವೂ ಹೌದು, ಪಕ್ಷವೂ ಹೌದು, ಮುಖ್ಯಮಂತ್ರಿಗಳು ಪಕ್ಷದವರೇ ತಾನೇ, ನಾವೇ ಇರುವಾಗ ಸಮನ್ವಯ ಸಮಿತಿ ಏಕೆ? ನಾವೇ ಎಲ್ಲ ಸಮಸ್ಯೆ ಬಗೆಹರಿಸುತ್ತೇವೆ” ಎಂದು ತಿಳಿಸಿದರು.
ಜನರ ಸಮಸ್ಯೆ ವಿಚಾರವಾಗಿ ಅಧಿಕಾರಿಗಳು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತಿಲ್ಲ ಎಂಬ ವಿಚಾರವಾಗಿ ಕೇಳಿದಾಗ, “ಸಮಸ್ಯೆ ವಿಚಾರವಾಗಿ ಅಧಿಕಾರಿಗಳು ಮಾತನಾಡಲಿ. ಆದರೆ ಪಾಲಿಸಿ ವಿಚಾರವಾಗಿ ಅವರು ಬಾಯಿಗೆ ಬಂದಂತೆ ಮಾತನಾಡಲು ಸಾಧ್ಯವಿಲ್ಲ. ಪಾಲಿಸಿ ವಿಚಾರ ಸರ್ಕಾರಕ್ಕೆ ಸಂಬಂಧಿಸಿದ್ದು ಅವರು ಹೇಗೆ ಮಾತನಾಡುತ್ತಾರೆ? ಅವರು ಸ್ಥಳೀಯವಾಗಿ ಜನರ ಸಮಸ್ಯೆಗಳನ್ನು ಬಗೆಹರಿಸುವಂತೆ ಸೂಚನೆ ನೀಡಿದ್ದೇವೆ” ಎಂದು ತಿಳಿಸಿದ್ದಾರೆ.
ಪಕ್ಷದಲ್ಲಿ ಶಾಸಕರ ಅಸಮಾಧಾನ ಇದೆಯೇ ಎಂದು ಕೇಳಿದಾಗ, ‘ಪಕ್ಷದ ಶಾಸಕರಲ್ಲಿ ಯಾವುದೇ ಅಸಮಾಧಾನವಿಲ್ಲ. ಸಮಸ್ಯೆ ವಿಚಾರವಾಗಿ ಅಧಿಕಾರಿಗಳು ಮಾತನಾಡಲಿ, ಪಾಲಿಸಿ ವಿಚಾರವಾಗಿ ಅವರು ಹೇಗೆ ಮಾತನಾಡುತ್ತಾರೆ, ಅದಕ್ಕೆ ಅಭಿವೃದ್ದಿ ವಿಚಾರವಾಗಿ ನಾವು ಮಾತನಾಡುತ್ತೇವೆ ಎಂದು ಸೂಚನೆ ನೀಡಿದ್ದೇವೆ. “ಇಂಡಿಯಾ” ಸಭೆ ಇದ್ದ ಕಾರಣ ಅಂದು ಕರೆಯಲಾಗಿದ್ದ ಶಾಸಕಾಂಗ ಪಕ್ಷದ ಸಭೆ ರದ್ದಾಗಿತ್ತು. ಅದಕ್ಕೆ ಅನೇಕ ಹಿರಿಯ ನಾಯಕರು ಶಾಸಕಾಂಗ ಪಕ್ಷದ ಸಭೆ ಮಾಡಬೇಕು ಎಂದು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಭೆ ಮಾಡಿದ್ದೇವೆ. ದೆಹಲಿ ಸಭೆಗೆ ಹೋಗಿ ಬಂದ ಬಳಿಕ ನಾನು ಹಾಗೂ ಮುಖ್ಯಮಂತ್ರಿಗಳು ಎಲ್ಲಾ ಜಿಲ್ಲಾ ನಾಯಕರ ಸಭೆ ಕರೆಯುತ್ತಿದ್ದೇವೆ’ ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ