*ಉತ್ತರ ಕರ್ನಾಟಕದಲ್ಲಿ ಹೈಟೆಕ್ ಟೆಕ್ಸ್ ಟೈಲ್ ಕಾಲೇಜು, ಸಂಶೋಧನಾ ಕೇಂದ್ರ ಸ್ಥಾಪನೆಗೆ ಒತ್ತಾಯ*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಜನರ ಮಾನ ಮುಚ್ಚುವ ನೇಕಾರರ ಬದುಕು ಅತಂತ್ರವಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ನೇಕಾರರಿಗೆ ಆಧುನಿಕ ತಂತ್ರಜ್ಞಾನದಲ್ಲಿ ಹೈಟೆಕ್ ಟೆಕ್ಸ್ ಟೈಲ್ ಕಾಲೇಜು, ಟೆಕ್ಸಿಟೈಲ್ ಸಂಶೋಧನಾ ಕೇಂದ್ರವನ್ನು ಸರಕಾರ ಸ್ಥಾಪನೆ ಮಾಡಬೇಕು ಎಂದು ಎಂದು ಉತ್ತರ ಕರ್ನಾಟಕ ವೃತ್ತಿಪರ ನೇಕಾರ ಹೋರಾಟ ಸಮಿತಿ ಸಂಚಾಲಕ ಗಜಾನನ ಗುಂಜೇರಿ ಒತ್ತಾಯಿಸಿದರು.
ಗುರುವಾರ ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೊರೊನಾ ಸಂದರ್ಭದಲ್ಲಿ ಸುಮಾರು 39 ಜನ ನೇಕಾರರು ಮೃತಪಟ್ಟಿದ್ದಾರೆ. ಅವರ ಕುಟುಂಬಕ್ಕೆ ಪರಿಹಾರ ನೀಡಬೇಕು ಹಾಗೂ ನೇಕಾರರ ಬೇಡಿಕೆ ಈಡೇರಿಸುವಂತೆ ಬೆಳಗಾವಿ ಬರುವ ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಲಾಗುವುದು ಎಂದರು.
ರಾಜ್ಯ ಸರಕಾರಕ್ಕೆ ಹೊಸ ಯೋಜನೆಯಾಗಲಿ, ಗ್ಯಾರಂಟಿಯಾಗಲಿ ಕೇಳುತ್ತಿಲ್ಲ. ಬದಲಾಗಿ ನೇಕಾರರಿಗೆ ಮಿಸಲಿರುವ ಅನುದಾನವನ್ನು ಸಮರ್ಪಕವಾಗಿ ನೀಡಿ ನಮಗೂ ಆರ್ಥಿಕವಾಗಿ ಸದೃಢವಾಗಲು ಸರಕಾರ ಮಾಡಿಕೊಡಬೇಕೆಂದರು.
ಕಳೆದ ಮೂರು ವರ್ಷಗಳಿಂದ ಮಳೆ, ನೆರೆಹಾವಳಿ, ಅತಿವೃಷ್ಟಿ, ಕೊರೊನಾ ಸಂಕಷ್ಟದಿಂದ ನೇಕಾರರ ಬದುಕು ಅದೋಗತಿಗೆ ಬಂದಿದೆ. ಕಚ್ಚಾ ನೂಲಿನ ಬೆಲೆ ಏರಿಕೆ ಸೇರಿದಂತೆ ಅನೇಕ ಸಮಸ್ಯೆಗಳಿಂದ ಬಳಲುತ್ತಿದ್ದೇವೆ. ನೇಕಾರರ ಅಭಿವೃದ್ಧಿಗಾಗಿ ಸರಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ಹಿಂದಿನ ಬಿಜೆಪಿ ಸರಕಾರ ನೇಕಾರರಿಗೆ ಕೊಟ್ಟ ಮಾತು ತಪ್ಪಿದೆ.
ಈಗಿನ ಸರಕಾರವಾದರೂ ನೇಕಾರರ ಸಮಸ್ಯೆ ಸ್ಪಂದಿಸುವ ಕೆಲಸ ಮಾಡಬೇಕು. ಚುನಾವಣೆಗೂ ಮುನ್ನ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿದಂತೆ ನಡೆದುಕೊಳ್ಳಬೇಕು ಎಂದರು.
ಸಿಎಂ ಚುನಾವಣೆ ಸಂದರ್ಭದಲ್ಲಿ ಹೇಳಿದಂತೆ 10 ಎಚ್.ಪಿ. ವರೆಗೆ ವಿದ್ಯುತ್ ಉಚಿತ ಕೊಡಬೇಕು. ಜವಳಿ ಇಲಾಖೆಗೆ ಹೆಚ್ಚಿನ ಅನುದಾನ, ನೇಕಾರರನ್ನು ಅಸಂಘಟಿತ ವಲಯಕ್ಕೆ ಸೇರಿಸಬೇಕು.ಶೂನ್ಯ ಬಡ್ಡಿ ದರದಲ್ಲಿ 5 ರಿಂದ 10 ಲಕ್ಷ ರೂಪಾಯಿ ಸಾಲ ನೀಡಬೇಕು ಎಂದು ತಿಳಿಸಿದರು.
ರಾಜ್ಯದ ನೇಕಾರರ ವಿಶೇಷ ಯೋಜನೆಯಲ್ಲಿ 20 ಎಚ್.ಪಿ. ವಿದ್ಯುತ್ ಸಂಪರ್ಕ ಹೊಂದಿರುವ ಘಟಕಗಳಿಗೆ 1.25 ಪೈಸೆ ದರದಲ್ಲಿ ವಿದ್ಯುತ್ ಯೋಜನೆ ಜಾರಿಯಲ್ಲಿದೆ. ಇದನ್ನು ಯಾವುದೇ ಶುಲ್ಕವಿಲ್ಲದೆ ಈ ಯೋಜನೆಯನ್ನು ಯಥಾವತ್ತಾಗಿ ಮುಂದುವರೆಸಬೇಕೆಂದು ಆಗ್ರಹಿಸಿದರು.
ನೇಕಾರ ಮುಖಂಡರಾದ ಲೋಹಿತ್ ಮೋರಕರ್, ವಿನೋದ ಬಂಗೋಡಿ, ಆನಂದ ಉಪರಿ, ರಮೇಶ ಪಾಟೀಲ, ಬಸವರಾಜ ಢವಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ