ಯಡಿಯೂರಪ್ಪ ಸಂಪುಟದ 2 ಪ್ರಮುಖ ನಿರ್ಣಯ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –
ಕರ್ನಾಟಕದ ನೂತನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೊಟ್ಟ ಮೊದಲ ಸಚಿವ ಸಂಪುಟದ ಸಭೆ ನಡೆಸಿದ್ದಾರೆ.
ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನಂತರ ನೇರವಾಗಿ ವಿಧಾನಸಭೆಗೆ ಆಗಮಿಸಿದ ಯಡಿಯೂರಪ್ಪ ಸಂಪ್ರದಾಯದಂತೆ ಸಚಿವ ಸಂಪುಟದ ಸಭೆ ನಡೆಸಿದರು. ಯಡಿಯೂರಪ್ಪ ಒಬ್ಬರೇ ಪ್ರಮಾಣ ವಚನ ಸ್ವೀಕರಿಸಿದ್ದರಿಂದ ಅಧಿಕಾರಿಗಳೊಂದಿಗೆ ಸಚಿವ ಸಂಪುಟದ ಸಭೆ ನಡೆಸಿದರು.
ಮೊದಲ ಸಭೆಯಲ್ಲಿ ಪ್ರಮುಖವಾಗಿ 2 ನಿರ್ಣಯಗಳನ್ನು ಯಡಿಯೂರಪ್ಪ ಸಂಪುಟ ಸಭೆ ಕೈಗೊಂಡಿದೆ. ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ನಿರ್ಣಯಗಳ ವಿವರ ನೀಡಿದರು.
ರೈತರಿಗೆ 4 ಸಾವಿರ ರೂ.
ಕೇಂದ್ರ ಸರಕಾರದ ಕಿಸಾನ್ ಸಮ್ಮಾನ್ ಯೋಜನೆಗೆ ರಾಜ್ಯದಿಂದಲೂ ಕೊಡುಗೆ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. ರೈತರು ಮತ್ತು ನೇಕಾರರ ರಾಜ್ಯದ ಎರಡು ಕಣ್ಣುಗಳಿದ್ದಂತೆ. ಹಾಗಾಗಿ ಕೇಂದ್ರ ಸರಕಾರ ರೈತರಿಗೆ 2 ಸಾವಿರ ರೂ. ಗಳಂತೆ 3 ಕಂತಿನಲ್ಲಿ ನೀಡುತ್ತಿದೆ. ಅದರ ಜೊತೆಗೆ ರಾಜ್ಯ ಸರಕಾರದಿಂದಲೂ 2 ಸಾವಿರ ರೂ.ಗಳಂತೆ 2 ಕಂತುಗಳನ್ನು ಕೊಡಲು ತೀರ್ಮಾನಿಸಲಾಗಿದೆ.
ಅಂದರೆ ರೈತರಿಗೆ ವರ್ಷಕ್ಕೆ ಕೇಂದ್ರದ 6 ಸಾವಿರ ರೂ. ಜೊತೆಗೆ ರಾಜ್ಯದ 4 ಸಾವಿರ ಸೇರಿ 10 ಸಾವಿರ ರೂ. ಸಿಗುತ್ತದೆ.
ನೇಕಾರರ ಸಾಲ ಮನ್ನಾ
ಇದರ ಜೊತೆಗೆ, ನೇಕಾರರ 100 ಕೋಟಿ ರೂ. ಸಾಲ ಮನ್ನಾ ಮಾಡಲು ಯಡಿಯೂರಪ್ಪ ಸಂಪುಟ ಸಭೆ ನಿರ್ಧರಿಸಿದೆ. ರಾಜ್ಯದ ನೇಕಾರರನ್ನು 100 ಕೋಟಿ ರೂ. ಸಾಲವಿದ್ದು ಅವುಗಳನ್ನು ಮನ್ನಾ ಮಾಡಲಾಗುವುದು ಎಂದು ಯಡಿಯೂರಪ್ಪ ತಿಳಿಸಿದರು.
ನಾನು ಯಾವುದೇ ದ್ವೇಷದ ರಾಜಕೀಯ ಮಾಡುವುದಿಲ್ಲ ಎಂದು ರಾಜ್ಯದ ಜನರಿಗೆ ಹಾಗೂ ವಿರೋಧ ಪಕ್ಷಗಳಿಗೆ ಭರವಸೆ ನೀಡುತ್ತೇನೆ ಎಂದು ಅವರು ತಿಳಿಸಿದರು.
ಮೊದಲ ಸಂಪುಟ ಸಭೆಯ ನಿರ್ಣಯದ ಮೂಲಕ ಬಿಜೆಪಿ ಸರಕಾರ ಸಾಗುವ ದಿಕ್ಕಿನ ಸೂಚನೆ ನೀಡಿದರು. ರೈತರ ಪರ ಸರಕಾರ ಎನ್ನುವ ಸಂದೇಶ ಕಳುಹಿಸಲು ಅವರು ಯಶಸ್ವಿಯಾದರು.
ಸೋಮವಾರ ವಿಶ್ವಾಸಮತ
ಸೋಮವಾರ ಬಿ.ಎಸ್.ಯಡಿಯೂರಪ್ಪ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸಲಿದ್ದಾರೆ. ಇದರ ಜೊತೆಗೆ ಅಂದೇ ಹಣಕಾಸು ವಿಧೇಯಕವನ್ನೂ ಮಂಡಿಸುವುದಾಗಿ ಯಡಿಯೂರಪ್ಪ ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ