Kannada NewsKarnataka NewsLatest

*ಎಲ್.ಎಸ್.ಶಾಸ್ತ್ರಿಯವರಿಗೆ ಲೋಕವಿಕಾಸ ಟ್ರಸ್ಟ್ ಪ್ರಶಸ್ತಿ*


ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿಯ ಹಿರಿಯ ಸಾಹಿತಿ,‌ಪತ್ರಕರ್ತ , ಸಾಂಸ್ಕೃತಿಕ ನೇತಾರ ಎಲ್. ಎಸ್. ಶಾಸ್ತ್ರಿ ಅವರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಲೋಕವಿಕಾಸ ಪ್ರತಿಷ್ಠಾನ ವೇ. ಮೂ. ಲಷ್ಕರಿ ಕೇಶವ ಭಟ್ಟ ಜನ್ಮಶತಮಾನೋತ್ಸವ ಪ್ರಶಸ್ತಿಯನ್ನಿತ್ತು ಗೌರವಿಸಿತು.

” ಸಾಹಿತ್ಯ, ಪತ್ರಿಕೆ, ನಾಟಕ, ಸಂಗೀತ, ಯಕ್ಷಗಾನ, ಗಮಕ ಮೊದಲಾದ ಕ್ಷೇತ್ರಗಳಲ್ಲಿ ಆರು ದಶಕಗಳ ನಿರಂತರ ಸೇವೆಗೈದ 80 ವರ್ಷ ವಯಸ್ಸಿನ ಶಾಸ್ತ್ರಿಯವರ ಅಸಾಮಾನ್ಯ ಸಾಧನೆಯನ್ನು ಗುರುತಿಸಿ ಕರ್ನಾಟಕ ಸರಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕಾಗಿದೆ.

ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್ ದೊರಕಬೇಕಾಗಿದೆ. ಶಾಸ್ತ್ರಿಯಂಥವರನ್ನು ಈತನಕ ಸರಿಯಾಗಿ ಗುರುತಿಸದೇ ಇರುವುದು ವಿಷಾದದ ಸಂಗತಿ ” ಎಂದು ಖ್ಯಾತ ಅಂಕಣಕಾರರೂ, ತಾಳಮದ್ದಳೆ ಅರ್ಥಧಾರಿಗಳೂ, ಕತೆಗಾರರೂ ಆದ ನಾರಾಯಣ ಯಾಜಿ ಸಾಲೇಬೈಲು ಅವರು ಶಾಸ್ತ್ರಿಯವರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಭಿನಂದನಾ ಭಾಷಣ ಮಾಡುತ್ತ ಹೇಳಿದರು.


ಪುತ್ತೂರಿನ ಕೃಷ್ಣ ಆರ್ಕೇಡ್ ಸಭಾಗೃಹದಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ಕೆ. ಜಯರಾಜ ಆಚಾರ್ಯ ಅವರು ವಹಿಸಿ ಮಾತನಾಡುತ್ತ ಬಹುಮುಖ ಪ್ರತಿಭೆಯ ಶಾಸ್ತ್ರಿಯವರನ್ನು ಗೌರವಿಸುತ್ತಿರುವುದು ನಮ್ಮ ಪ್ರಶಸ್ತಿಗೇ ಗೌರವ ತಂದಿದೆ. ಪ್ರತಿಷ್ಠಾನಕ್ಕೆ ಇದು ಹೆಮ್ಮೆಯ ಸಂಗತಿ ಎಂದರು.


ಪ್ರಶಸ್ತಿಗಾಗಿ ಕೃತಜ್ಞತೆ ಅರ್ಪಿಸಿದ ಶಾಸ್ತ್ರಿಯವರು ಆದರ್ಶ ಸಮಾಜ ಸ್ನೇಹಿ ಲಷ್ಕರಿ ಕೇಶವ ಭಟ್ಟರ ಹೆಸರಿನಲ್ಲಿ ನೀಡಲಾಗುವ ಈ ಪ್ರಶಸ್ತಿಯಲ್ಲಿ ಪಾವಿತ್ರ್ಯವಿದೆ. ಘನತೆಯಿದೆ. ಇಂತಹ ಪ್ರಶಸ್ತಿಯನ್ನು ಪಡೆಯುತ್ತಿರುವುದು ನನ್ನ ಭಾಗ್ಯ ಎಂದರು.


ಪ್ರತಿಷ್ಠಾನದ ಸಂಸ್ಥಾಪಕ ಶ್ರೀ ಎಸ್.ಜಿ. ಕೃಷ್ಣ ಅವರು ಉಪಸ್ಥಿತರಿದ್ದರು. ಡಾ. ಕೃಷ್ಣಪ್ರಸಾದ ಅವರು ಸ್ವಾಗತಿಸಿದರು. ಟ್ರಸ್ಟ ನಿರ್ದೇಶಕ ಉಮಾಮಹೇಶ್ವರ ಅವರು ನಿರೂಪಿಸಿದರು. ಕಲಾ ಚಿಂತಕ ಮೂರ್ತಿ ದೇರಾಜೆ, ಅರ್ತಿಕಜೆ, ಡಾ. ಜಯಪ್ರಸಾದ ಆನೇಕಾರ್ ಮೊದಲಾದವರು ಪಾಲ್ಗೊಂಡಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button