ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅ. 15 ರಿಂದ 19 ರವರೆಗೆ ನಡೆಯುವ ನಾಡಹಬ್ಬಕ್ಕೆ ರವಿವಾರ 15 ರಂದು ಚಾಲನೆ ದೊರೆಯಲಿದೆ. ಐದು ದಿನ ನಡೆಯುವ ಕಾರ್ಯಕ್ರಮವು ಪ್ರತಿದಿನ ಸಂಜೆ 6 ಗಂಟೆಗೆ ಆರಂಭಗೊಂಡು ವಿಚಾರಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕೊನೆಯ ದಿನ ಕವಿಗೋಷ್ಠಿ, ಸಮಾರೋಪ ಸಮಾರಂಭ ನೆರವೇರಲಿದೆ.
ಗದುಗಿನ ತೋಂಟದಾರ್ಯಮಠದ ಪೂಜ್ಯ ಡಾ. ಸಿದ್ಧರಾಮ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಉದ್ಘಾಟನೆ ಮಾಡಲಿದ್ದಾರೆ.
ಮೊದಲನೆಯ ದಿ.15 ರಂದು ಕಾರ್ಯಕ್ರಮದ ಮೊದಲಿಗೆ ನಾಡದೇವಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ-ಉದ್ಘಾಟನೆ ಮೂಲಕ ಆರಂಭಗೊಂಡು ನಂತರ “ಚಂದ್ರಯಾನ-3 ಭಾರತದ ಹೆಮ್ಮೆಯ ಸಾಧನೆ” ಎಂಬ ವಿಷಯದ ಮೇಲೆ ಸರ್ವೋ ಕಂಟ್ರೋಲ್ ವ್ಯವಸ್ಥಾಪಕ ದೀಪಕ ದಡೋತಿ ಹಾಗೂ ಸಾಹಿತಿ ದೀಪಿಕಾ ಚಾಟೆ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉತ್ತರಭಾಗದ ಶಾಸಕ ಆಸೀಫ್ (ರಾಜು) ಶೇಠ, ಅಧ್ಯಕ್ಷತೆಯನ್ನು ಸಂಸದೆ ಮಂಗಲಾ ಅಂಗಡಿ ವಹಿಸಲಿದ್ದಾರೆ. ಸ್ವಾಗತ, ಪರಿಚಯವನ್ನು ಡಾ. ರಾಜಶೇಖರ, ಡಾ. ಸಿ. ಕೆ. ಜೋರಾಪೂರ ಮಾಡಲಿದ್ದಾರೆ.
ಎರಡನೇಯ ದಿನ ದಿ.16ರಂದು “ಧರ್ಮ ಮತ್ತು ಸಾಮಾಜಿಕ ಸಾಮರಸ್ಯ” ಎಂಬ ವಿಷಯದ ಮೇಲೆ ಕಾರ್ಯಕ್ರಮ ನಡೆಯಲಿದೆ. ದಿವ್ಯ ಸಾನ್ನಿಧ್ಯವನ್ನು ಕಾರಂಜಿಮಠದ ಪೂಜ್ಯ ಗುರುಸಿದ್ಧ ಮಹಾಸ್ವಾಮೀಜಿ, ಮುಖ್ಯ ಅತಿಥಿಗಳಾಗಿ ಡಾ. ಅವಿನಾಶ ಕವಿ ಮತ್ತು ಅತಿಥಿ ಉಪನ್ಯಾಸಕ ಡಾ. ಚೇತನ ಬಾಸೂರ “ಸರ್ವಕಾಲಕ್ಕೂ ಸಲ್ಲುವ ಸರ್ವಜ್ಞ” ಎಂಬ ವಿಷಯ ಮೇಲೆ ಮಾತನಾಡಲಿದ್ದಾರೆ. ಅಧ್ಯಕ್ಷತೆಯನ್ನು ಡಾ. ಬಸವರಾಜ ಜಗಜಂಪಿ ವಹಿಸಲಿದ್ದಾರೆ.
ಮೂರನೆಯ ದಿನ 17 ರಂದು “ಮಾಧ್ಯಮ ಮತ್ತು ಸಾಮಾಜಿಕ ಸ್ವಾಸ್ಥ್ಯ” ಎಂಬ ವಿಷಯದ ಮೇಲೆ ಕಾರ್ಯಕ್ರಮ ನಡೆಯಲಿದೆ. ದಿವ್ಯ ಸಾನ್ನಿಧ್ಯವನ್ನು ರುದ್ರಾಕ್ಷಿಮಠದ ಪೂಜ್ಯ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು, ಮುಖ್ಯ ಅತಿಥಿಗಳಾಗಿ ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಸಂಪಾದಕ ವಸಂತ ನಾಡಿಗೇರ ಭಾಗಿಯಾಗಲಿದ್ದಾರೆ ಮತ್ತು ಸಾಹಿತಿ, ಪತ್ರಕರ್ತೆ ಡಾ. ಗೀತಾ ಕಶ್ಯಪ್ ಅವರ ವಿರಚಿತ “ಡಿಜಿಟಲ್ ಜರ್ನಲಿಸಂ” ಎಂಬ ಕೃತಿ ಬಿಡುಗಡೆಗೊಳ್ಳಲಿದೆ ಹಾಗೂ “ಸ್ವಾತಂತ್ರ್ಯ ಚಳುವಳಿಗೆ ಬೆಳಗಾವಿ ಜಿಲ್ಲೆಯ ಮಹಿಳೆಯರ ಕೊಡುಗೆ” ಎಂಬ ವಿಷಯಮೇಲೆ ಸುನಂದಾ ಎಮ್ಮಿ ಉಪನ್ಯಾಸ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಡಾ. ಹೆಚ್. ಬಿ. ರಾಜಶೇಖರ ವಹಿಸಲಿದ್ದಾರೆ.
ನಾಲ್ಕನೆಯ ದಿನ ದಿ.18 ರಂದು “ಕುಮಾರವ್ಯಾಸ ಭಾರತದ ಕಥಾಭಾಗ” ಗಮಕ ಎಂಬ ವಿಷಯದ ಮೇಲೆ ಕಾರ್ಯಕ್ರಮ ನಡೆಯಲಿದೆ. ಗಮಕ ವ್ಯಾಖ್ಯಾನಕರಾಗಿ ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್ಟ, ಗಮಕ ವಾಚಕರಾಗಿ ವಿದುಷಿ ಭಾರತಿ ಭಟ್ಟ ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ, ಪತ್ರಕರ್ತ ಎಲ್‌ಎಸ್.ಶಾಸ್ತ್ರಿ ವಹಿಸಲಿದ್ದಾರೆ.
ಐದನೇಯ ದಿನ ದಿ.19 ರಂದು ಕವಿಗೋಷ್ಠಿ ಮತ್ತು ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಲಿದೆ. ಕವಿಗೋಷ್ಠಿಯ ಅಧ್ಯಕ್ಷತೆ ಪ್ರೊ. ಎಂ.ಎಸ್. ಇಂಚಲ ವಹಿಸಲಿದ್ದಾರೆ. 15ಕ್ಕೂ ಹೆಚ್ಚು ಕವಿಗಳು ತಮ್ಮ ಕವನ ವಾಚನ ಮಾಡಲಿದ್ದಾರೆ. ಸಮಾರೋಪ ಸಮಾರಂಭದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹಾಗೂ ಪ್ರಶಾಂತ ಪಲ್ಲೇದ, ನರಗುಂದ ಇವರು “ಸಾಂಸ್ಕೃತಿಕ ಭಾರತ ದರ್ಶನ” ಎಂಬ ವಿಷಯವಾಗಿ ಉಪನ್ಯಾಸ ನೀಡಲಿದ್ದಾರೆ, ಅಧ್ಯಕ್ಷತೆಯನ್ನು ವೈದ್ಯ ಡಾ. ಹೆಚ್. ಬಿ. ರಾಜಶೇಖರ ವಹಿಸಲಿದ್ದಾರೆ.
ಗಣ್ಯಮಾನ್ಯರಾದ ಡಾ. ಜಿನದತ್ತ ದೇಸಾಯಿ, ಅರವಿಂದ ಪಾಟೀಲ, ಬಸವರಾಜ ಗಾರ್ಗಿ, ಯ. ರು. ಪಾಟೀಲ, ಸುಭಾಸ ಏಣಗಿಯವರಿಗೆ ಸಮಿತಿ ಪರವಾಗಿ ಸನ್ಮಾನ ಕಾರ್ಯಕ್ರಮ ನೆರವೇರಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ