ಮೋದಿ ಕಾಲಿಗೆ ಬಿದ್ದು ಬರ ಪರಿಹಾರ ಕೇಳಿ: ಬಿಜೆಪಿಗರಿಗೆ ಸಿಎಂ ಸಿದ್ದರಾಮಯ್ಯ ಟಾಂಗ್
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ರಾಜ್ಯದಲ್ಲಿ ಬರ ಪ್ರವಾಸ ಕೈಗೊಳ್ಳುವ ಬದಲಿಗೆ ನಿಮ್ಮದೇ ಪಕ್ಷದ ಪ್ರಧಾನಿ ನರೇಂದ್ರ ಮೋದಿಯವರ ಕಾಲಿಗೆ ಬಿದ್ದು ಬರ ಪರಿಹಾರ ಕೇಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿಗರಿಗೆ ಟಾಂಗ್ ನೀಡಿದ್ದಾರೆ.
“ಕೇಂದ್ರ ಸರಕಾರವೇ ಕಳುಹಿಸಿದ ಬರ ಪರಿಸ್ಥಿತಿ ಅಧ್ಯಯನ ತಂಡ ಈಗಾಗಲೇ ರಾಜ್ಯದಲ್ಲಿ ಪ್ರವಾಸ ಕೈಗೊಂಡು ವಸ್ತುಸ್ಥಿತಿ ಅವಲೋಕಿಸಿ ಹೋಗಿದೆ. ಮತ್ತೆ ಬಿಜೆಪಿ ರಾಜ್ಯ ನಾಯಕರು ಬರ ಅಧ್ಯಯನ ಪ್ರವಾಸ ಕೈಗೊಳ್ಳುವುದು ಯಾವ ಪುರುಷಾರ್ಥಕ್ಕೆ?” ಎಂದು ಪ್ರಶ್ನಿಸಿರುವ ಮುಖ್ಯಮಂತ್ರಿ, “ಇವರ ಪಕ್ಷದ ಸರಕಾರ ಕಳಿಸಿದ ಅಧ್ಯಯನ ತಂಡದ ಮೇಲೆ ಇವರಿಗೆ ವಿಶ್ವಾಸವಿಲ್ಲವೇ?” ಎಂದು ಪ್ರಶ್ನಿಸಿದ್ದಾರೆ.
“ನಿಜಕ್ಕೂ ಬಿಜೆಪಿಗರು ಯಾತ್ರೆ ನಡೆಸಬೇಕಾದದ್ದು ದಿಲ್ಲಿಗೆ, ಅಲ್ಲಿ ಹೋಗಿ ಮೋದಿಯವರ ಕಾಲಿಗೆ ಬಿದ್ದಾದರೂ ಬರ ಪರಿಹಾರ ಕೇಳಿ, ಆ ಧೈರ್ಯ ನಿಮ್ಮಲ್ಲಿಲ್ಲ” ಎಂದು ಕುಟುಕಿದ್ದಾರೆ.
“ಬರ ಪರಿಸ್ಥಿತಿಯ ನೋವಿನ ಸ್ಥಿತಿಯನ್ನು ಬಳಸಿಕೊಂಡು ಬೇಳೆ ಬೇಯಿಸಿಕೊಳ್ಳಲು ಹೊರಟಿರುವ ಬಿಜೆಪಿಗರಿಗೆ ಜನ ಹೇಗೆ ಸ್ವೀಕರಿಸುತ್ತಾರೋ ಗೊತ್ತಿಲ್ಲ, ಆದರೆ ‘ದೊರೆ ತನಕ ದೂರು ಕೊಂಡೊಯ್ಯಲಾಗದವರು ಹೊಳೆತನಕ ಓಡಿದರೆಂಬ ಗಾದೆ ಮಾತಿನಂತೆ ಬಿಜೆಪಿಗರ ಪರಿಸ್ಥಿತಿಯಾಗಿದೆ” ಎಂದು ಲೇವಡಿ ಮಾಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ