Kannada NewsKarnataka News

ಎರಡನೇ ರಾಜಧಾನಿಯಾಗಿ ಬೆಳಗಾವಿಗೆ ಇನ್ನಷ್ಟು ಯೋಜನೆ  – ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಉಡುಪಿ :  ಎರಡನೇ ರಾಜಧಾನಿಯಾಗಲು ಬೆಳಗಾವಿ ಎಲ್ಲ ಮೂಲಭೂತ ಸೌಕರ್ಯ ಹಾಗೂ ಅರ್ಹತೆಗಳನ್ನು ಹೊಂದಿದ್ದು, ಆ ದಿಸೆಯಲ್ಲಿ ಸರಕಾರ ಇನ್ನಷ್ಟು ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ಉಡುಪಿಯಲ್ಲಿ ಕನ್ನಡ ರಾಜ್ಯೋತ್ಸವ ಸಮಾರಂಭದ ಬಳಿಕ ಸುದ್ದಿಗಾರರ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯಿಸಿದರು.  ಬೆಳಗಾವಿಯಲ್ಲಿ ಈಗಾಗಲೆ ಸುವರ್ಣ ವಿಧಾನಸೌಧವಿದೆ. ವಿಮಾನ ನಿಲ್ದಾಣವಿದೆ. ಬಹು ವಿಶಾಲವಾದ ಜಿಲ್ಲೆಯಾಗಿದ್ದು, 18 ಶಾಸಕರನ್ನು ಹೊಂದಿದೆ. ಹಾಗಾಗಿ ಜಿಲ್ಲೆಯನ್ನು ಮತ್ತಷ್ಟು ಅಭಿವೃದ್ಧಿ ಮಾಡಲಾಗುವುದು. ಎರಡನೇ ರಾಜಧಾನಿಯಾಗಿ ಬೆಳಗಾವಿಯನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಗುವುದು ಎಂದು ಅವರು ತಿಳಿಸಿದರು. 

ಮಹಾರಾಷ್ಟ್ರ ಏಕೀಕರಣ ಸಮಿತಿಯ ಪ್ರತಿಭಟನೆ ಹಾಗೂ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಮೀಸಲಾತಿ ಹೋರಾಟದಿಂದ ಕಾನೂನು ಸುವ್ಯವಸ್ಥೆಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದೂ ಅವರು ಹೇಳಿದರು. 

ಮಕ್ಕಳಿಗೆ ಮೊಟ್ಟೆ ವಿತರಣೆ ಸಂಬಂಧ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಶೀಘ್ರದಲ್ಲಿ ವಿತರಣೆ ಕಾರ್ಯ ಆರಂಭಿಸಲಾಗುವುದು. ಗೃಹ ಲಕ್ಷ್ಮಿ ಯೋಜನೆಯ ಹಣ ವಿತರಣೆಯಲ್ಲಿ ದೊಡ್ಡ ಸಮಸ್ಯೆ ಏನಿಲ್ಲ. ಬ್ಯಾಂಕಿನಲ್ಲಿ ಸಮಸ್ಯೆ ಇದ್ದಲ್ಲಿ ಅಂಚೆ ಇಲಾಖೆಯಲ್ಲಿ ಉಳಿತಾಯ ಖಾತೆ ತೆರೆಯಲು ಸಲಹೆ ನೀಡಲಾಗಿದೆ. ರಾಜ್ಯದಲ್ಲಿ ಈಗಾಗಲೇ ಶೇ. 88 ಜನರಿಗೆ ಹಣ ತಲುಪಿದೆ. ಸಮಸ್ಯೆಯನ್ನು ಬಗೆಹರಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.

ಉಡುಪಿ ಜಿಲ್ಲೆಯನ್ನು ಕಡೆಗಣಿಸಲಾಗುತ್ತಿದೆ ಎಂಬ ಬಿಜೆಪಿ ಶಾಸಕರ ಆರೋಪದ ಕುರಿತು ಪ್ರತಿಕ್ರಿಯಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಇಲ್ಲ. ಸಮಗ್ರ ಅಭಿವೃದ್ಧಿಗೆ ಎಲ್ಲ ಕ್ರಮ ಕೈಗೊಳ್ಳಲಾಗುತ್ತಿದೆ.ಈಚೆಗೆ ಜಿಲ್ಲೆಗೆ ಮುಖ್ಯಮಂತ್ರಿಗಳು ಆಗಮಿಸಿದ್ದಾಗ ಕೆಡಿಪಿ ಸಭೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಸ್ಥಳೀಯ ಬಿಜೆಪಿ ಶಾಸಕರೇ ಸಭೆ ಮುಂದೂಡಲು ಮನವಿ ಮಾಡಿದ್ದರು ಎಂದು ಅವರು ವಿವರಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button