Kannada NewsLatest

ಸಂತ್ರಸ್ತರನ್ನು ಭೇಟಿ ಮಾಡಲು ಬಾಲಚಂದ್ರ ಹರಸಾಹಸ

ದ್ವೀಪದಂತಾಗಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನಿವಾಸ

ಪ್ರಗತಿವಾಹಿನಿ ಸುದ್ದಿ, ಗೋಕಾಕ :

ಘಟಪ್ರಭಾ ನದಿ ಪ್ರವಾಹಕ್ಕೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನಿವಾಸ ಹಾಗೂ ಅವರ ಗೃಹ ಕಛೇರಿ ಎನ್‍ಎಸ್‍ಎಫ್ ಅತಿಥಿ ಗೃಹ ಭಾಗಶಃ ಜಲಾವೃತಗೊಂಡಿದ್ದು, ನಡುಗಡ್ಡೆಯ ಸಣ್ಣ ದ್ವೀಪದಂತೆ ಕಾಣುತ್ತಿದೆ.
ನಗರದ ಬ್ಯಾಳಿ ಕಾಟಾ ಹತ್ತಿರ ಇರುವ ಶಾಸಕರ ನಿವಾಸ ಹಾಗೂ ಗೃಹ ಕಛೇರಿ ನೀರಿನಿಂದ ಸಂಪೂರ್ಣ ಜಲಾವೃತಗೊಂಡಿದ್ದು, ಮುಖಂಡರ ಒತ್ತಾಸೆ ಮೇರೆಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಮ್ಮ ನಿವಾಸವನ್ನು ತೊರೆದು ತಮ್ಮ ಹಳೆಯ ಮನೆ(ಹೊಸಪೇಟ ಗಲ್ಲಿ)ಯಲ್ಲಿ ಸ್ಥಳಾಂತರಗೊಂಡಿದ್ದಾರೆ.
ಗೋಕಾಕದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ನದಿ ತೀರದ ಗ್ರಾಮಗಳು ಜಲಾವೃತಗೊಳ್ಳುವದೆಂಬ ಮಾಹಿತಿ ಪಡೆದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಕ್ಷಣ ಕಾರ್ಯಪ್ರವೃತ್ತರಾಗಿ ಬೆಂಗಳೂರಿನಲ್ಲಿ ತಮ್ಮ ಎಲ್ಲ ಕೆಲಸಗಳನ್ನು ಬದಿಗಿಟ್ಟು ಗೋಕಾಕಕ್ಕೆ ಕಳೆದ ಮಂಗಳವಾರದಂದು ಆಗಮಿಸಿದ್ದು, ಅಂದಿನಿಂದ ಇಂದಿನವರೆಗೂ ಜಲಾವೃತಗೊಂಡಿರುವ ಗ್ರಾಮಗಳಿಗೆ ಭೇಟಿ ನೀಡುತ್ತ ಸಂತ್ರಸ್ಥರಿಗೆ ಧೈರ್ಯ ಹೇಳುತ್ತಿರುವುದು ಜನರ ಬಗ್ಗೆ ಶಾಸಕರಿಗಿರುವ ಕಾಳಜಿಯನ್ನು ಎತ್ತಿ ತೋರಿಸುತ್ತಿದೆ. ಜೊತೆಗೆ ಸಂತ್ರಸ್ಥರಿಗೆ ಎಲ್ಲ ರೀತಿಯ ಅನುಕೂಲ ಮಾಡಿರುವ ಶಾಸಕರು ಸಂತ್ರಸ್ಥರಿಗೆ ವಸತಿ ವ್ಯವಸ್ಥೆ, ಊಟದ ವ್ಯವಸ್ಥೆ, ಹೊದಿಕೆಗಳನ್ನು ತಲುಪಿಸುವಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ.
ನಿವಾಸ ಮುಳುಗಿದರೂ ಡೋಂಟ್ ಕೇರ್ : ಘಟಪ್ರಭಾ, ಹಿರಣ್ಯಕೇಶಿ, ಮಾರ್ಕಂಡೇಯ ಹಾಗೂ ಬಳ್ಳಾರಿ ನಾಲೆಯ ಅರ್ಭಟಕ್ಕೆ ತತ್ತರಿಸಿರುವ ಗೋಕಾಕ ಹಾಗೂ ಮೂಡಲಗಿ ತಾಲೂಕುಗಳ ನದಿ ತೀರದ ಎಲ್ಲ ಗ್ರಾಮಗಳು ಜಲಾವೃತಗೊಂಡಿದೆ. ಇದರಿಂದ ಸಂತ್ರಸ್ಥರು ಆತಂಕಗೊಂಡಿದ್ದಾರೆ. ಸಂತ್ರಸ್ಥರ ಸಂಕಟಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಧಾವಿಸಿದ್ದು, ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ದೊರಕಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ್ದಾರೆ. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಸ್ವಂತ ನಿವಾಸ ಹಾಗೂ ಕಾರ್ಯಾಲಯ ನೀರಿನಿಂದ ತುಂಬಿ ತುಳುಕುತ್ತಿದೆ. ಶೇ 90ರಷ್ಟು ಭಾಗ ನೀರಿನಿಂದ ಮುಳುಗಿದೆ. ಆದರೂ ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಜನರ ಸುರಕ್ಷತೆ ನನಗೆ ಮುಖ್ಯವಾಗಿದೆ. ಪ್ರವಾಹದಿಂದಾಗಿ ನದಿ ತೀರದ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸುವುದೇ ನನ್ನ ಕಾರ್ಯವಾಗಿದೆ. ಈ ದಿಸೆಯಲ್ಲಿ ನನಗೆ ನನ್ನ ಮನೆ ಮುಖ್ಯವಲ್ಲ. ಜನರೇ ನನಗೆ ಮುಖ್ಯವಾಗಿದ್ದಾರೆ. ನಿನ್ನೆ ಬುಧವಾರ ಬೆಳಿಗ್ಗೆ ಮನೆ ಜಲಾವೃತಗೊಂಡರೂ ನದಿ ತೀರದ ಗ್ರಾಮಗಳಿಗೆ ಭೇಟಿ ನೀಡಿ ಸಂತ್ರಸ್ಥರ ಕಷ್ಟ-ಕಾರ್ಪಣ್ಯಗಳನ್ನು ಕೇಳಿದರು.
10 ಕಿ.ಮೀ.ಗಾಗಿ 150 ಕಿ.ಮೀ ಸಂಚಾರ : ಇಲ್ಲಿಯವರೆಗೆ 2.25 ಲಕ್ಷ ಕ್ಯೂಸೆಕ್ಸ್ ನೀರನ್ನು ಹರಿಸಿದ್ದರಿಂದ ಅರಭಾವಿ ಕ್ಷೇತ್ರದ ಹಲವು ಗ್ರಾಮಗಳು ಜಲಾವೃತಗೊಂಡಿವೆ. ಗುರುವಾರ ಬೆಳಿಗ್ಗೆಯೇ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಗೋಕಾಕದಿಂದ ಕೇವಲ 10 ಕಿ.ಮೀ ಅಂತರವಿರುವ ನದಿ ತೀರದ ಗ್ರಾಮಗಳಿಗೆ ಸಂಚರಿಸಲು ಅವರು 150 ಕಿ.ಮೀ ದೂರದ ಪ್ರಯಾಣವನ್ನು ಬೆಳೆಸಬೇಕಾಯಿತು. ಸಮೀಪದ ಲೋಳಸೂರ ಸೇತುವೆ ಸಂಪೂರ್ಣ ಜಲಾವೃತಗೊಂಡಿದ್ದರಿಂದ ಸಂಪರ್ಕ ಕಡಿತಗೊಂಡಿದ್ದರಿಂದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಗೋಕಾಕದಿಂದ ಯರಗಟ್ಟಿ, ಬೆಳಗಾವಿ, ಸಂಕೇಶ್ವರ, ಹುಕ್ಕೇರಿ, ಘಟಪ್ರಭಾ ಮೂಲಕ ನದಿ ತೀರದ ಗ್ರಾಮಗಳಾದ ಹುಣಶ್ಯಾಳ ಪಿಜಿ, ವಡೇರಹಟ್ಟಿ, ಫುಲಗಡ್ಡಿ, ಮಸಗುಪ್ಪಿ, ಸಂಗನಕೇರಿ ಗ್ರಾಮಗಳಿಗೆ ಭೇಟಿ ನೀಡಿದರು. ಸಂತ್ರಸ್ಥಗಿರುವ ಸಮಸ್ಯೆಗಳನ್ನು ಅವಲೋಕಿಸಿದರು.
ಪರಿಹಾರಕ್ಕಾಗಿ ಸಿಎಂ ಬಳಿ ಮನವಿ : ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಸತತವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದ ಹಿಡಕಲ್ ಜಲಾಶಯಕ್ಕೆ ನಿರೀಕ್ಷೆಗೆ ಮೀತಿ ನೀರು ಹರಿಯುತ್ತಿರುವುದರಿಂದ ಎಂದೂ ಕಾಣದ ಜಲ ಪ್ರಳಯ ಬಂದಿದ್ದರಿಂದ ಗೋಕಾಕ ಹಾಗೂ ಮೂಡಲಗಿ ತಾಲೂಕುಗಳಲ್ಲಿ ಅಪಾರ ಹಾನಿಯಾಗಿದೆ. ಕೋಟ್ಯಾಂತರ ರೂ. ಬೆಳೆ, ರಸ್ತೆ, ಮನೆಗಳು ಹಾನಿಗೊಂಡಿವೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಇಷ್ಟರಲ್ಲಿಯೇ ಖುದ್ದಾಗಿ ಭೇಟಿ ಮಾಡಿ ಸಂತ್ರಸ್ಥರಿಗೆ ನೀಡಬೇಕಾಗಿರುವ ಪರಿಹಾರದ ಸೌಲಭ್ಯವನ್ನು ನೀಡುವಂತೆ ಮನವಿ ಮಾಡಿಕೊಳ್ಳುತ್ತೇನೆ. ಯಾವುದೇ ಕಾರಣಕ್ಕೂ ಸಂತ್ರಸ್ಥರು ದೃತಿಗೆಡಬಾರದು. ಸಂತ್ರಸ್ಥರಿಗಾದ ಹಾನಿಯನ್ನು ತುಂಬಿಕೊಡಲು ಸರ್ಕಾರದಿಂದ ಎಲ್ಲ ರೀತಿಯ ವ್ಯವಸ್ಥೆಯನ್ನು ಮಾಡಿ ಕೊಡುವುದಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಂತ್ರಸ್ಥರಿಗೆ ಭರವಸೆ ನೀಡಿದರು.
ಓ ದೇವರೇ ಕಾಪಾಡು : ಮಳೆ ಬೇಕೆಂದು ದೇವರಲ್ಲಿ ಪ್ರಾರ್ಥಿಸಿದ್ದು ನಿಜ. ಆದರೆ ಈ ರೀತಿ ಭಯಂಕರವಾದ ನೀರು ಕೊಡುತ್ತಾನೆಂದು ನಾವೆಂದೂ ನಿರೀಕ್ಷಿಸಿರಲಿಲ್ಲ. ಭಾರೀ ಪ್ರಮಾಣದ ಮಳೆಯಿಂದಾಗಿ ಸಂತ್ರಸ್ಥರು ಬೀದಿ ಪಾಲಾಗಿರುವುದು ನನಗೆ ನೋವನ್ನುಂಟು ಮಾಡಿದೆ. ಯಾಕೆ ಹೀಗೆ ದೇವರು ಒಮ್ಮೆಲೆ ಈ ರೀತಿಯಾದ ಘೋರ ಶಿಕ್ಷೆ ನೀಡುತ್ತಿದ್ದಾನೆಂಬುದು ಗೊತ್ತಾಗುತ್ತಿಲ್ಲ. ನನ್ನ ಜೀವನದಲ್ಲಿಯೇ ಇಂತಹ ಭಯಂಕರವಾದ ಜಲ ಪ್ರವಾಹವನ್ನು ಹಿಂದೆಂದೂ ನೋಡಿರಲಿಲ್ಲ ಎಂದು ಅವರು ಹೇಳಿದರು.
ಉತ್ತರ ಕರ್ನಾಟಕ ಭಾಗದಲ್ಲಿ ಆಗುತ್ತಿರುವ ಜಲ ಪ್ರವಾಹಕ್ಕೆ ತೀವ್ರ ಆತಂಕ ವ್ಯಕ್ತಪಡಿಸಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಪ್ರವಾಹ ಭಾದಿತ ಪ್ರದೇಶಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಇಂದು ಬೆಳಗಾವಿ ಜಿಲ್ಲೆಯಲ್ಲಿ ಭೇಟಿ ನೀಡಿದ್ದಾರೆ. ಸಂತ್ರಸ್ಥರು ಯಾವುದೇ ಕಾರಣಕ್ಕೂ ಆತಂಕಗೊಳ್ಳಬೇಡಿ. ನಿಮ್ಮೊಂದಿಗೆ ನಮ್ಮ ಸರ್ಕಾರ ಸದಾ ಇದೆ ಎಂದು ಅವರು ಧೈರ್ಯ ಹೇಳಿದ್ದಾರೆ.////

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button