ಮತ್ತೆ ಮಳೆ ಹೆಚ್ಚಳ : ಪ್ರವಾಹ ಪರಿಸ್ಥಿತಿ ಇನ್ನಷ್ಟು ಉಲ್ಭಣ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಬೆಳಗಾವಿ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಶುಕ್ರವಾರ ಇನ್ನಷ್ಟು ಹೆಚ್ಚಿದೆ. ಇದರಿಂದಾಗಿ ಪ್ರವಾಹ ಪರಿಸ್ಥಿತಿ ಮತ್ತಷ್ಟು ಉಲ್ಭಣವಾಗುತ್ತಿದೆ.
ಗುರುವಾರ ಮಧ್ಯಾಹ್ನ ನಂತರ ಬೆಳಗಾವಿಯಲ್ಲಿ ಮಳೆ ಕಡಿಮೆಯಾಗಿತ್ತು. ಕೆಲ ಹೊತ್ತು ಬಿಸಿಲು ಕೂಡ ಕಾಣಿಸಿಕೊಂಡಿತ್ತು. ಇದರಿಂದಾಗಿ ಜನರಲ್ಲಿ ಆಶಾಭಾವನೆ ಮೂಡಿತ್ತು. ಆದರೆ ಗುರುವಾರ ರಾತ್ರಿ ಮತ್ತು ಶುಕ್ರವಾರ ಬೆಳಗ್ಗೆಯಿಂದಲೇ ಮಳೆ ಮತ್ತೆ ಜೋರಾಗಿದೆ.
ಬೆಲಗಾವಿ ಜಿಲ್ಲೆಯಲ್ಲಿ ಪ್ರವಾಹ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಈವರೆಗೆ 40 ಸಾವಿರಕ್ಕೂ ಹೆಚ್ಚು ಜನರನ್ನು ಪ್ರವಾಹದಿಂದ ರಕ್ಷಿಸಲಾಗಿದೆ. 8 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೂ ಅಲ್ಲಲ್ಲಿ ಸಿಕ್ಕಿಕೊಂಡವರನ್ನು ರಕ್ಷಿಸುವ ಪ್ರಯತ್ನ ಮುಂದುವರಿದಿದೆ.
ಪೊಲೀಸರು, ಅಗ್ನಿಶಾಮಕ ದಳ, ಎನ್ ಡಿಆರ್ ಎಫ್, ಸೇನಾಪಡೆ, ಜಿಲ್ಲಾಡಳಿತ, ಹೆಸ್ಕಾಂ, ನೂರಾರು ಸ್ವಯಂ ಸೇವಾ ಸಂಸ್ಥೆಗಳು, ಜಿಲ್ಲೆಯ ಸಂಸದರು, ಶಾಸಕರು ಹಾಗೂ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಪ್ರವಾಹ ಕಾರ್ಯಾಚರಣೆಯಲ್ಲಿ ಅವಿಶ್ರಾಂತವಾಗಿ ತೊಡಗಿಕೊಂಡಿದ್ದಾರೆ.
ಜನರನ್ನು ರಕ್ಷಿಸುವ, ನೀರು, ಹಾಲು, ಔಷಧ, ಆಹಾರ ಪೊಟ್ಟಣ ಪೂರೈಸುವ ಕಾರ್ಯ ಭರದಿಂದ ಸಾಗುತ್ತಿದೆ. ಜಿಲ್ಲೆಯ ಬೆಳಗಾವಿ, ಗೋಕಾಕ, ಸವದತ್ತಿ, ರಾಮದುರ್ಗ, ಖಾನಾಪುರ, ಚಿಕ್ಕೋಡಿ, ರಾಯಬಾಗ, ಹುಕ್ಕೇರಿ, ಅಥಣಿ, ಬೈಲಹೊಂಗಲ, ಮೂಡಲಗಿ, ನಿಪ್ಪಾಣಿ, ಕಾಗವಾಡ ಎಲ್ಲೆಡೆ ಪ್ರವಾಹ ಉಂಟಾಗಿದೆ. ಇಡೀ ಜಿಲ್ಲೆ ಪ್ರವಾಹದಿಂದ ಕಂಗೆಟ್ಟಿದೆ. ಲಕ್ಷಾಂತರ ಮನೆಗಳು ಪ್ರವಾಹದಲ್ಲಿ ಮುಳುಗಿವೆ.
ಪ್ರವಾಹ ಸಂತ್ರಸ್ತರ ನೆರವಿಗೆ ಬರುವಂತೆ ಜನಪ್ರತಿನಿಧಿಗಳು, ಮಠಾಧೀಶರು, ಸಂಘಸಂಸ್ಥೆಗಳು ರಾಜ್ಯದ ಬೇರೆ ಬೇರೆ ಭಾಗಗಳ ಜನರಿಗೂ ಮನವಿ ಮಾಡಿಕೊಂಡಿದ್ದಾರೆ. ದಕ್ಷಿಣ ಕರ್ನಾಟಕದ ಜನರು ಉತ್ತರ ಕರ್ನಾಟಕದ ಸಂಕಷ್ಟಕ್ಕೆ ಸ್ಪಂದಿಸುವಂತೆ ವಿನಂತಿಸುತ್ತಿದ್ದಾರೆ.
ರಸ್ತೆ ಸಂಚಾರ ಸಂಪೂರ್ಮ ಹದಗೆಟ್ಟಿದೆ. ರೈಲು ಸಂಚಾರವೂ ತೀರಾ ಪ್ರಯಾಸದಾಯಕವಾಗಿದೆ. ಗುರುವಾರ ಸಂಜೆ ಹೊರಟ ರಾಣಿ ಚನ್ನಮ್ಮ ಎಕ್ಸಪ್ರೆಸ್ ರೈಲು ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಬೆಂಗಳೂರು ತಲುಪಿದೆ. ಕಡಿತಗೊಂಡಿರುವ ಬಹುತೇಕ ರಸ್ತೆ ಸಂಪರ್ಕ ಇನ್ನೂ ಸುಧಾರಿಸಿಲ್ಲ. ಪೆಟ್ರೋಲ್ ಅಭಾವ ಕೂಡ ಕಾಣಿಸಿಕೊಂಡಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ