Belagavi NewsBelgaum NewsKannada NewsKarnataka News

ಬೆಳಗಾವಿಯಲ್ಲೂ ಬಿಜೆಪಿ ಪ್ರತಿಭಟನೆ : ಕೋಮು ಗಲಭೆಗೆ ಕಾಂಗ್ರೆಸ್ ಪ್ರಚೋದನೆ ಆರೋಪ

ಹಿಂದೂ ಕಾರ್ಯಕರ್ತರ ಪ್ರಕರಣ ಹೆಕ್ಕಿ ಸಮಾಜದಲ್ಲಿ ಕೊಮುಗಲಭೆಗೆ ಪ್ರಚೋದನೆ ಮಾಡುತ್ತಿರುವ ಸರ್ಕಾರ  :  ಆರೋಪ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ದೇಶವೆ ರಾಮಮಂದಿರ ಉದ್ಘಾಟನೆಯ ಅಮೃತಘಳಿಗೆಗಾಗಿ ಎದುರು ನೋಡುತ್ತಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರ 3 ದಶಕಗಳ ಹಿಂದಿನ ರಾಮಜನ್ಮಭೂಮಿ ಹೊರಾಟಗಾರರ ಹಿಂದೂ ಕಾರ್ಯಕರ್ತರ ಪ್ರಕರಣ ಹೆಕ್ಕಿ ಸಮಾಜದಲ್ಲಿ ಕೊಮುಗಲಭೆಗೆ ಪ್ರಚೋದನೆ ನೀಡುತ್ತಿದ್ದು, ಎಲ್ಲ‌ ಪ್ರಕರಣಗಳನ್ನು ಹಿಂಪಡೆಯಲು ನಿರ್ದೇಶನ ನೀಡಬೇಕು ಎಂದು ಭಾರತೀಯ ಜನತಾ ಪಾರ್ಟಿ ರಾಜ್ಯಪಾಲರಲ್ಲಿ ಮನವಿ ಮಾಡಿದೆ.

31 ವರ್ಷ ಹಳೆಯ ಪ್ರಕರಣದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಶ್ರೀಕಾಂತ ಪೂಜಾರಿ ಬಂಧನ ವಿರೋಧಿಸಿ ಬಿಜೆಪಿ ಬೆಳಗಾವಿಯಲ್ಲಿ ಬುಧವಾರ ಪ್ರತಿಭಟನೆ ಹಮ್ಮಿಕೊಂಡಿತ್ತು.

5 ನೂರು ವರ್ಷಗಳ ಅಯೋಧ್ಯೆ ರಾಮಜನ್ಮಭೂಮಿ ಪ್ರಕರಣ ಇತ್ಯಾರ್ಥವಾಗಿ, ದೇಶವೆ ರಾಮಮಂದಿರ ಉದ್ಘಾಟನೆಯ ಅಮೃತಘಳಿಗೆಗಾಗಿ ಎದುರು ನೋಡುತ್ತಿರುವ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರ 3 ದಶಕಗಳ ಹಿಂದಿನ ರಾಮಜನ್ಮಭೂಮಿ ಹೊರಾಟಗಾರರ, ಹಿಂದೂ ಕಾರ್ಯಕರ್ತರ ಪ್ರಕರಣಗಳನ್ನು ಹೆಕ್ಕಿ ಸಮಾಜದಲ್ಲಿ ಕೊಮುಗಲಭೆಗೆ ಪ್ರಚೋದನೆ ಮಾಡುತ್ತಿದೆ. ಸಿದ್ದರಾಮಯ್ಯನವರ ಸರ್ಕಾರದ ಈ ಕ್ರಮ ಖಂಡನೀಯ. ರಾಜ್ಯದಲ್ಲಿ ಗಂಭೀರ ಸ್ವರೂಪದ ಡಿಜೆಹಳ್ಳಿ, ಕೆಜೆ ಹಳ್ಳಿ ಪ್ರಕರಣದಲ್ಲಿ ಪೋಲಿಸ್ ಠಾಣೆಗೆ ನುಗ್ಗಿ, ಶಾಸಕರ‌ ಮನೆಗೆ ಬೆಂಕಿ ಇಟ್ಟವರು ಅಮಾಯಕರು ಎಂದು ಹೇಳಿ ಪ್ರಕರಣ ಹಿಂಪಡೆಯುವ ಈ ಸರ್ಕಾರಕ್ಕೆ ತಾವುಗಳು ನಿರ್ದೇಶನ ನೀಡಿ ಹಿಂದೂ ಕಾರ್ಯಕರ್ತರ ಎಲ್ಲ ಪ್ರಕರಣಗಳನ್ನ ಹಿಂಪಡೆಯುವಂತೆ ಮಾರ್ಗದರ್ಶನ ಮಾಡಬೇಕು ಎಂದು ಕೋರಲಾಗಿದೆ.

ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಶ್ರೀರಾಮ ಮಂದಿರ ನಿರ್ಮಾಣದ ಬಗ್ಗೆ ಅಸಂತುಷ್ಟರಾಗಿರುವ ಕಾಂಗ್ರೆಸ್ ನಾಯಕರ ಮನಸ್ಥಿತಿ ನೋಡಿದರೆ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಸಂಪೂರ್ಣವಾಗಿ ನಿಷ್ಕ್ರೀಯವಾಗಿದ್ದು ತಮ್ಮ ಸರ್ಕಾರದ ವಿಫಲತೆಗಳನ್ನು ಮುಚ್ಚಿಕೊಳ್ಳಲು ಇಂತಹ ದುಸ್ಸಾಹಸಕ್ಕೆ ಕೈ ಹಾಕುತ್ತಿದೆ.  ಅಲ್ಪಸಂಖ್ಯಾತರನ್ನು ಹಾಗೂ ತಮ್ಮ ಹೈ ಕಮಾಂಡ್ ಮೆಚ್ಚಿಸಲು ಕರಸೇವಕರ ಮೇಲಿನ ಮೊಕದ್ದಮೆಗಳನ್ನು ಮುನ್ನೆಲೆಗೆ ತಂದು ಭಡಾಯಿ ಕೊಚ್ಚಿಕೊಳ್ಳುತ್ತಿರುವ ಸರ್ಕಾರಕ್ಕೆ ನಿರ್ದೇಶನ ನೀಡಿ ರಾಜ್ಯದಲ್ಲಿ ಸೌಹಾರ್ದತೆ ಕಾಪಾಡಬೇಕು ಎಂದು ವಿನಂತಿಸಲಾಗಿದೆ.

ರಾಮ ಜನ್ಮ ಭೂಮಿಯ ವಿವಾದವನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದ ಮುಸ್ಲಿಂ ನಾಯಕರೆ ಮೋದಿಯವರನ್ನು ಸ್ವಾಗತಿಸಿ ರಾಮ ಮಂದಿರ ಉದ್ಘಾಟನೆಗೆ ಪಾಲ್ಗೊಳ್ಳಲು ತುದಿಗಾಲಿನಲ್ಲಿ ನಿಂತಾಗ ರಾಜ್ಯ ಸರ್ಕಾರದ  ಕಾರ್ಯ ಜನರಲ್ಲಿ ಹೇಸಿತನ‌ ಮೂಡಿಸಿದೆ. ಕಾಂಗ್ರೆಸ್ ಸರ್ಕಾರದ ಈ ಕ್ರಮವನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ. ಇಂತಹ ಘಟನೆ ಮತ್ತೊಮ್ಮೆ ರಾಜ್ಯದಲ್ಲಿ ಘಟಿಸಬಾರದು. ರಾಮ ಮಂದಿರ ಉದ್ಘಾಟನೆಯ ಈ ಐತಿಹಾಸಿಕ ಕ್ಷಣಗಳಿಗೆ ಯಾವುದೆ ಅಡ್ಡಿಯಾಗದಂತೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಆದರಣಿಯವಾಗಿ ವಿನಂತಿಸುತ್ತೇವೆ. ಇಂತಹ ಪ್ರಚೋಧನಕಾರಿ ಕ್ರಮ ಕೈಗೊಳ್ಳುವ ಸಚಿವರ ಹೆಡೆಮುರಿಯನ್ನು  ಕಟ್ಟಬೇಕೆಂದು ತಮ್ಮಲ್ಲಿ ವಿನಂತಿಸುತ್ತೇವೆ ಎಂದು ಬಿಜೆಪಿ ಕೋರಿದೆ.

ಲೋಕಸಭಾ ಸದಸ್ಯೆ ಮಂಗಲಾ ಅಂಗಡಿ, ಡಾ.ಸೋನಾಲ್ ಸರ್ನೋಬತ್, ಮುರುಘೇಂದ್ರ ಪಾಟೀಲ, ಶರತ್ ಪಾಟೀಲ, ಲೀನಾ ಟೋಪಣ್ಣವರ್ ಮೊದಲಾದವರು ಇದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button