*KPSC ಹಗರಣದ ಆರೋಪಿ ಬಸವರಾಜ್ ಕನ್ನಾಳೆಗೆ ಶಾಕ್*: *ತುಮಕೂರು ವಿವಿ ಸಿಂಡಿಕೇಟ್ ಸದಸ್ಯ ಸ್ಥಾನದಿಂದ ವಜಾ!*

ಪ್ರಗತಿವಾಹಿನಿ ಸುದ್ದಿ: ಕೆಪಿಎಸ್ಸಿ ಹಗರಣದ ಆರೋಪ ಕೇಳಿಬಂದಿರುವ ಬಸವರಾಜ್ ಕನ್ನಾಳೆಗೆ ಮತ್ತೊಂದು ಹಿನ್ನಡೆಯಾಗಿದೆ. ತುಮಕೂರು ವಿಶ್ವವಿದ್ಯಾಲಯದ ರಾಜ್ಯಪಾಲರ ನಾಮನಿರ್ದೇಶಿತ ಸಿಂಡಿಕೇಟ್ ಸದಸ್ಯ ಸ್ಥಾನದಿಂದ ಕನ್ನಾಳೆಯನ್ನು ವಜಾಗೊಳಿಸಲಾಗಿದೆ. ರಾಜ್ಯಪಾಲರ ನಿರ್ದೇಶನದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದ್ದು, ಈ ಸಂಬಂಧ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ತುಮಕೂರು ವಿಶ್ವವಿದ್ಯಾಲಯದ ಕುಲಪತಿಗೆ ಪತ್ರ ರವಾನಿಸಿದ್ದಾರೆ.
ಬಸವರಾಜ್ ಕನ್ನಾಳೆ ತೆರವಾದ ಸ್ಥಾನಕ್ಕೆ ಬೆಂಗಳೂರಿನ ಕೆ.ಬಿ. ಸಂದೀಪ್ ಅವರನ್ನು ನೇಮಕ ಮಾಡಲು ನಿರ್ಧರಿಸಲಾಗಿದೆ. ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯ ನೀತಿ ಸಂಹಿತೆ ಮುಗಿದ ಬಳಿಕ ಕೆ.ಬಿ. ಸಂದೀಪ್ ಅವರನ್ನು ಸಿಂಡಿಕೇಟ್ ಸದಸ್ಯರನ್ನಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ.
ಕೆಪಿಎಸ್ಸಿ ಹಗರಣದಲ್ಲಿ ಬಸವರಾಜ್ ಕನ್ನಾಳೆ ಹೆಸರು ಕೇಳಿಬಂದ ಬಳಿಕ, ಅವರನ್ನು ಸಿಂಡಿಕೇಟ್ ಸದಸ್ಯ ಸ್ಥಾನದಿಂದ ವಜಾಗೊಳಿಸಬೇಕು ಎಂದು ಎಬಿವಿಪಿ ಪ್ರತಿಭಟನೆ ನಡೆಸಿತ್ತು. ಈ ಬೆಳವಣಿಗೆಯ ಬೆನ್ನಲ್ಲೇ ಕನ್ನಾಳೆಗೆ ನೋಟಿಸ್ ನೀಡುವಂತೆ ರಾಜ್ಯಪಾಲರು ತುಮಕೂರು ವಿಶ್ವವಿದ್ಯಾಲಯಕ್ಕೆ ಪತ್ರ ಬರೆದಿದ್ದರು.
ರಾಜ್ಯಪಾಲರ ಸೂಚನೆಯ ಮೇರೆಗೆ ವಿಶ್ವವಿದ್ಯಾಲಯವು ಬಸವರಾಜ್ ಕನ್ನಾಳೆಗೆ ಎರಡು ಬಾರಿ ನೋಟಿಸ್ ನೀಡಿತ್ತು. ಆದರೆ, ಎರಡೂ ನೋಟಿಸ್ಗಳಿಗೆ ಕನ್ನಾಳೆ ಉತ್ತರ ನೀಡಿರಲಿಲ್ಲ. ಇದೀಗ ರಾಜ್ಯಪಾಲರ ನಿರ್ದೇಶನದಂತೆ ಸಿಂಡಿಕೇಟ್ ಸದಸ್ಯ ಸ್ಥಾನದಿಂದ ವಜಾಗೊಳಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



