Kannada NewsKarnataka NewsLatest

*ಭೋಪಾಲ್ ನಲ್ಲಿ ರಾಜ್ಯ ಗಣಿ ಸಚಿವರ ಸಮ್ಮೇಳನ : ಪ್ರಹ್ಲಾದ ಜೋಶಿ ಅಧ್ಯಕ್ಷತೆ*

ಪ್ರಗತಿವಾಹಿನಿ ಸುದ್ದಿ, ಭೋಪಾಲ್; ಪ್ರದೇಶದ ಭೋಪಾಲ್‌ನಲ್ಲಿ ಜ.23ರಂದು ರಾಜ್ಯ ಗಣಿಗಾರಿಕೆ ಸಚಿವರ ಸಮ್ಮೇಳನ ಆಯೋಜಿಸಿದ್ದು, ಕೇಂದ್ರ ಸಂಸದೀಯ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ ಉದ್ಘಾಟಿಸಲಿದ್ದಾರೆ.

ರಾಜ್ಯ ಸಮ್ಮೇಳನದ ಮುಖ್ಯ ಅತಿಥಿಯಾಗಿ ಮಧ್ಯಪ್ರದೇಶ ಮುಖ್ಯಮಂತ್ರಿ ಡಾ.ಮೋಹನ್ ಯಾದವ್ ಭಾಗವಹಿಸಲಿದ್ದಾರೆ ಎಂದು ಕೇಂದ್ರ ಗಣಿ ಸಚಿವಾಲಯ ತಿಳಿಸಿದೆ.

ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಗಣಿ ಉದ್ಯಮ ಪ್ರಮುಖ ಪಾತ್ರ ವಹಿಸುತ್ತಿದೆ. ಹೀಗಾಗಿ ಗಣಿ ಸಚಿವಾಲಯ ಆತ್ಮನಿರ್ಭರ್ ಭಾರತ್ ದೃಷ್ಟಿಯನ್ನು ಪೂರೈಸಲು ದೇಶದಲ್ಲಿ ಹೆಚ್ಚಿನ ಕಲ್ಲಿದ್ದಲು ಗಣಿ ಪರಿಶೋಧನೆ ಮತ್ತು ಸುಸ್ಥಿರ ಗಣಿಗಾರಿಕೆಗೆ ಒತ್ತು ನೀಡುತ್ತಿದೆ ಎಂದು ತಿಳಿಸಿದೆ.

ರಾಜ್ಯ ಗಣಿ ಸಚಿವರ ಈ 2ನೇ ಸಮ್ಮೇಳನ ಗಣಿಗಾರಿಕೆ ವಲಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಚರ್ಚಿಸಲು ಮತ್ತು ಗಣಿಗಾರಿಕೆ ವಲಯದಲ್ಲಿ ಸುಧಾರಣೆ ಜಾರಿಗೆ ತರಲು ಅವಕಾಶ ಕಲ್ಪಿಸುತ್ತಿದೆ. ಹೊಸ ನೀತಿ, ಕಾರ್ಯತಂತ್ರಗಳನ್ನು ಅಭಿವೃದ್ಧಿಪಡಿಸುವುದು ಸಮ್ಮೇಳನದ ಕೇಂದ್ರಬಿಂದುವಾಗಿದೆ.

ಮುಂಬರುವ ದಶಕಗಳಲ್ಲಿ ಖನಿಜಗಳ ಜಾಗತಿಕ ಬೇಡಿಕೆಯನ್ನು ಪೂರೈಸಲು ದೇಶದಲ್ಲಿ ಖನಿಜ ಪರಿಶೋಧನೆಯ ಪ್ರಮುಖ ಪಾತ್ರವನ್ನು ಪರಿಗಣಿಸಿ, ಕೇಂದ್ರ ಸರ್ಕಾರ, ಗಣಿ ಸಚಿವಾಲಯ ಮತ್ತು ವಿವಿಧ ರಾಜ್ಯ ಸರ್ಕಾರಗಳ ನಡುವಿನ ಸಂಬಂಧ ಬಲಪಡಿಸಲು ಮತ್ತು ಕಾರ್ಯತಂತ್ರಗಳ ಕುರಿತು ಚರ್ಚಿಸಲು ರಾಜ್ಯ ಗಣಿಗಾರಿಕೆ ಸಚಿವರ ಸಮ್ಮೇಳನ ನಡೆಸುತ್ತಿದೆ ಎಂದು ಸಚಿವಾಲಯ ತಿಳಿಸಿದೆ.

ಸಮ್ಮೇಳನದಲ್ಲಿ ಗಣಿಗಾರಿಕೆ ವಲಯದಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಮೂರು ರಾಜ್ಯಗಳನ್ನು ಪುರಸ್ಕರಿಸಲಾಗುತ್ತದೆ.

ಸಮ್ಮೇಳನದಲ್ಲಿ ಭಾಗವಹಿಸುವ ರಾಜ್ಯದ ಗಣಿ ಸಚಿವರು ಗಣಿಗಾರಿಕೆ ಕ್ಷೇತ್ರವನ್ನು ಬಲಪಡಿಸಲು ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ.

ಹೊಸ ನಿಬಂಧನೆ: ಖನಿಜಗಳ ಪರಿಶೋಧನೆಯಲ್ಲಿ ಖಾಸಗಿ ವಲಯಗಳ ಭಾಗವಹಿಸುವಿಕೆಯನ್ನು ಉತ್ತೇಜಿಸಲು MMDR ಕಾಯಿದೆ, 1957ರ ಏಳನೇ ಶೆಡ್ಯೂಲ್‌ನಲ್ಲಿ ನಿರ್ದಿಷ್ಟಪಡಿಸಿದ ಖನಿಜಗಳಿಗೆ ಅನ್ವೇಷಣೆ ಪರವಾನಗಿಯನ್ನು ನೀಡಲು ಹೊಸ ನಿಬಂಧನೆ ಮಾಡಲಾಗಿದೆ.

ಆಳವಾದ ಖನಿಜಗಳ ಅನ್ವೇಷಣೆ ಉತ್ತೇಜಿಸಲೆಂದು ಗಣಿ ಸಚಿವಾಲಯ ಅಧಿಸೂಚಿತ ಖಾಸಗಿ ಪರಿಶೋಧನಾ ಏಜೆನ್ಸಿಗಳಿಗೆ (NPEA) ನೇರವಾಗಿ ಮಂಜೂರು ಮಾಡಲು ಹೊಸ ಯೋಜನೆ ಪ್ರಾರಂಭಿಸಿದೆ. ಅಲ್ಲದೆ, ಈ ಹಿಂದೆ ಅನುಮತಿಸದೆ ಅನ್ವೇಷಿಸಿದ ಖನಿಜ ಬ್ಲಾಕ್‌ಗಳ ಹರಾಜಿಗೆ ಬಿಡ್ ಮಾಡಲು ಅವಕಾಶ ನೀಡಿದೆ. ಪರಿಶೋಧನಾ ಪರವಾನಗಿಯ ನಿಯಮಗಳನ್ನು ಸಮ್ಮೇಳನದ ವೇಳೆ ಅನಾವರಣಗೊಳಿಸಲಾಗುತ್ತದೆ.

ಈ ಸಮ್ಮೇಳನದಲ್ಲಿ ಒಟ್ಟು 87 ಭೂವೈಜ್ಞಾನಿಕ ವರದಿಗಳನ್ನು ವಿವಿಧ ರಾಜ್ಯ ಸರ್ಕಾರಗಳಿಗೆ ಹಸ್ತಾಂತರಿಸಲಾಗುವುದು. ಇದಲ್ಲದೆ, 5 ಕಲ್ಲಿದ್ದಲು ಬ್ಲಾಕ್ ಪರಿಶೋಧನಾ ವರದಿಗಳನ್ನು ಕಲ್ಲಿದ್ದಲು ಸಚಿವಾಲಯಕ್ಕೆ ಹಸ್ತಾಂತರಿಸಲಾಗುವುದು ಎಂದು ಕೇಂದ್ರ ಗಣಿ ಸಚಿವಾಲಯ ಪ್ರಕಟಣೆ ನೀಡಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button